ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಸರು ಬಿಟ್ಟು ಹೋಗಿದ್ದರೆ ಸೇರಿಸಿ’

ಮತದಾರ ಪಟ್ಟಿ ಪರಿಷ್ಕೃರಣೆ: ಅಧಿಕಾರಿಗಳ, ರಾಜಕೀಯ ಪಕ್ಷಗಳ ಮುಖಂಡರ ಸಭೆ
Last Updated 10 ನವೆಂಬರ್ 2022, 13:29 IST
ಅಕ್ಷರ ಗಾತ್ರ

ಬೀದರ್‌: ಮತದಾರರ ಪಟ್ಟಿಯ ಪರಿಷ್ಕರಣೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಮನೆಗೆ ಭೇಟಿ ನೀಡಿ ಅವರ ಕುಟುಂಬದ ಯಾವುದೇ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಬಿಟ್ಟು ಹೋಗಿದ್ದರೆ ಹೆಸರು ಸೇರಿಸಲು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ವೀಕ್ಷಕರಾಗಿರುವ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2023ರ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಅನುಮೋದಿತ ರಾಜಕೀಯ ಪಕ್ಷಗಳ ಮುಖಂಡರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

18 ವರ್ಷ ಮೇಲ್ಪಟ್ಟವರು ಮತದಾನದಿಂದ ಹೊರಗಡೆ ಉಳಿಯಬಾರದು. ಚುನಾವಣಾ ಆಯೋಗ ವರ್ಷದಿಂದ ವರ್ಷಕ್ಕೆ ಬಹಳಷ್ಟು ಬದಲಾವಣೆ ತರುತ್ತಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು. ಬೂತ್ ಮಟ್ಟದಲ್ಲಿ ಏಜೆಂಟರನ್ನು ನೇಮಕ ಮಾಡಿ, ದೋಷಗಳಿದ್ದರೆ ಸರಿಪಡಿಸಲು ನೆರವಾಗಬೇಕು. ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದು ಹೇಳಿದರು.

ದೂರದ ಗ್ರಾಮ, ವಸತಿ ಕೇಂದ್ರಗಳು, ತಾಂಡಾಗಳು ಮತ್ತು ಅನಕ್ಷರಸ್ಥರಿಗೂ ಈ ಕುರಿತು ಮಾಹಿತಿ ನೀಡಬೇಕು. ಮಹಿಳಾ ಮತದಾರರ ಸಂಖ್ಯೆ ಬೀದರ್ ಜಿಲ್ಲೆಯಲ್ಲಿ ಕಡಿಮೆಯಿದೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸರಿಪಡಿಸಬೇಕು. ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಆಯೋಗದ ನಿರ್ದೇಶನ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಬಿ.ಎಲ್.ಓ.ಗಳು ಮನೆ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು, ಸರಿಯಾಗಿ ಮಾಹಿತಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ 2023ರ ಕಾರ್ಯಕ್ರಮದ ಯಶಸ್ವಿಗೆ ನೆರವಾಗಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ಬೂತ್‌ಗೆ ಸರಾಸರಿ 885 ಮತದಾರರು ಇರುವುದರಿಂದ ಬಿ.ಎಲ್.ಓ.ಗಳು ಕಡ್ಡಾಯವಾಗಿ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ಮತದಾರರು, ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ನಮೂನೆ 6, ಮರಣ, ವಲಸೆ ಮತ್ತು ಇತರೆ ಕಾರಣಗಳಿಂದ ಮತದಾರರ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲು ನಮೂನೆ 7 ಮತ್ತು ಮತದಾರರ ಹೆಸರು ತಿದ್ದುಪಡಿಗೆ ನಮೂನೆ 8ರಲ್ಲಿ ಅರ್ಜಿಗಳನ್ನು ಭರ್ತಿ ಮಾಡಬೇಕು ಎಂದರು.

ಜಿಲ್ಲೆಯಲ್ಲಿ 13,31,770 ಮತದಾರರಿದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರು ಕಡಿಮೆಯಿದ್ದು, ಇದನ್ನು ಅಧಿಕಾರಿಗಳು ಗಮನಹರಿಸಿ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬೇಕು ಎಂದರು.

ಜಿ.ಪಂ. ಸಿಇಒ ಶಿಲ್ಪಾ ಎಂ. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ್ ಉಪ ವಿಭಾಗಾಧಿಕಾರಿ ಲವೀಶ್ ಓರ್ಡಿಯಾ, ತಾಲ್ಲೂಕುಗಳ ತಹಶೀಲ್ದಾರರು, ಜೆಡಿಎಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಾಂತಕುಮಾರ, ಬಿ.ಎಸ್.ಪಿ. ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಜಫರ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಬಚ್ಚನಸಾಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT