ಬೀದರ್: ಬಸವಕಲ್ಯಾಣ ತಾಲ್ಲೂಕಿನ ಹಿರೇನಾಗಾಂವ ಗ್ರಾಮದ ಹೊರವಲಯದಲ್ಲಿರುವ ಕೆರೆಯ ನೀರನ್ನು ಹೊಲಗಳಿಗೆ ಹರಿಸಿದ ಕಾರಣ ಡಿಸೆಂಬರ್‌ನಲ್ಲೇ ಕೆರೆ ಖಾಲಿಯಾಗಿದೆ. ಗ್ರಾಮದ ಒಂದು ಕೊಳವೆಬಾವಿಯಲ್ಲೂ ಹನಿ ನೀರಿಲ್ಲ. ಎರಡು ತೆರೆದ ಬಾವಿಗಳಿದ್ದರೂ ಒಣಗಿ ತಳ ಕಾಣುತ್ತಿದೆ. ಇಡೀ ಗ್ರಾಮಕ್ಕೆ ನಾಳೆ ನೀರಿನ ವ್ಯವಸ್ಥೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದೇ ಚಿಂತೆ.
ಇಲ್ಲಿ ಖೇರ್ಡಾ(ಬಿ) ಗ್ರಾಮ ಪಂಚಾಯಿತಿಯು, ಖಾಸಗಿ ಕೊಳವೆಬಾವಿಯಿಂದ ಬಸ್ ನಿಲ್ದಾಣ ಸಮೀಪದ ತೆರೆದ ಬಾವಿಗೆ ಪೈಪ್‌ಲೈನ್ ಅಳವಡಿಸಿ ನೀರು ಬಿಡುತ್ತಿದೆ. ಅಂತರ್ಜಲಮಟ್ಟ ಕಡಿಮೆಯಾಗಿರುವುದರಿಂದ ಅದರಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಗ್ರಾಮದ ಜನ ಬಾವಿಯ ಕಟ್ಟೆಯ ಮೇಲೆ ನಿಂತು ಜೀವದ ಹಂಗು ತೊರೆದು ನೀರು ಒಯ್ಯಲು ಮುಗಿ ಬೀಳುತ್ತಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಇನ್ನೊಂದು ಸಾರ್ವಜನಿಕ ತೆರೆದ ಬಾವಿ ಇದೆ. ಪಂಚಾಯಿತಿಯವರು ಈ ಬಾವಿಯೊಳಗೆ ನಿತ್ಯ ಐದು ಟ್ಯಾಂಕರ್ ನೀರು ತಂದು ಸುರಿಯುತ್ತಿದ್ದಾರೆ. ಮೂರು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ನೀರು ಸಾಲುತ್ತಿಲ್ಲ. ಗ್ರಾಮದ ಜನ 40 ಡಿಗ್ರಿ ಸೆಲ್ಸಿಯಸ್ ರಣ ಬಿಸಿಲಿನಲ್ಲಿ ಬಾವಿಯಿಂದ ನೀರು ಸೇದಿಕೊಂಡು ತಲೆ ಮೇಲೆ ಕೊಡ ಹೊತ್ತು ಸರ್ಕಾರಕ್ಕೆ ಶಾಪ ಹಾಕುತ್ತ ಮನೆಗಳಿಗೆ ಸಾಗುತ್ತಾರೆ. ದಿನವಿಡೀ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪುರುಷರುಮಧ್ಯರಾತ್ರಿ ವೇಳೆ ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಯಾವುದೇ ಸಮಯದಲ್ಲಿಗ್ರಾಮಕ್ಕೆ ಭೇಟಿ ನೀಡಿದರೂಮಹಿಳೆಯರು ಮಕ್ಕಳೊಂದಿಗೆ ಕೊಡಗಳನ್ನು ಹಿಡಿದು ನೀರಿಗಾಗಿ ಅಲೆಯುವುದು ಕಂಡುಬರುತ್ತದೆ. ಗ್ರಾಮಸ್ಥರು ಬೇಸಿಗೆ ಮುಗಿಯುವವರೆಗೂ ಊರಿಗೆ ಬರದಂತೆ ನೆಂಟರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವವರೆಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು 2014ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದರು.
‘ಗ್ರಾಮಸ್ಥರೇ ಹೇಳುವ ಪ್ರಕಾರ 15 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಅವಧಿ ಮುಗಿದ ಮೇಲೆ ಪೈಪ್‌ಲೈನ್ ಕಿತ್ತುಕೊಂಡು ಹೋಗಿದ್ದಾರೆ. ಕೆಲವು ಕಡೆ ಪೈಪ್‌ಲೈನ್‌ಗಳು ಒಡೆದುಹೋಗಿವೆ. ಹೀಗಾಗಿ ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಸರ್ಕಾರಿ ಕೊಳವೆಬಾವಿಗಳು ಬತ್ತಿವೆ. ಗ್ರಾಮದ ಹೊರವಲಯದಲ್ಲಿರುವ ರಾಮಚಂದ್ರ ಬಿರಾದಾರ ಅವರ ಕೊಳವೆಬಾವಿಯಿಂದ ನೀರು ಪಡೆದು ಟ್ಯಾಂಕರ್ ಮೂಲಕ ಬಾವಿಗಳಿಗೆ ಸುರಿಯಲಾಗುತ್ತಿದೆ. ಅಲ್ಲಿಂದ ಗ್ರಾಮಸ್ಥರು ನೀರು ಒಯ್ಯುತ್ತಿದ್ದಾರೆ’ ಎಂದು ಖೇರ್ಡಾ(ಬಿ)ಗ್ರಾ.ಪಂ ಪಿಡಿಒ ಭೀಮಶಪ್ಪ ದಂಡಿನ್ ಹೇಳಿದರು.
ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ
ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ ವಿಷಯವನ್ನು ತಾಲ್ಲೂಕು ಪಂಚಾಯಿತಿ ಇಒ ನನ್ನ ಗಮನಕ್ಕೆ ತಂದಿಲ್ಲ. ಓಣಿಗಳಿಗೆ ತೆರಳಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ತೆರೆದ ಬಾವಿಗೆ ನೀರು ಸುರಿದು ಹೋಗುತ್ತಿರುವುದು ಸರಿಯಾದ ಕ್ರಮವಲ್ಲ.
–ಮಹಾಂತೇಶ ಬೀಳಗಿ,ಸಿಇಒ, ಜಿಲ್ಲಾ ಪಂಚಾಯಿತಿ, ಬೀದರ್
ಬೆಳಿಗ್ಗೆ, ಸಂಜೆ ಕುಡಿಯುವ ನೀರು ಹೊತ್ತು ತರುವುದರಲ್ಲೇ ದಿನ ಕಳೆದು ಹೋಗುತ್ತಿದೆ. ಜನರ ಬಗ್ಗೆ ಕಳಕಳಿ ಇರುವ ಒಬ್ಬ ವ್ಯಕ್ತಿಯೂ ಜಿಲ್ಲೆಯಲ್ಲಿ ಇಲ್ಲ.
– ಸರಸ್ವತಿ, ಗ್ರಾಮದ ವೃದ್ಧೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.