ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಗೆ ಯುವಕರು ಒಲವು ತೋರಿಸಲಿ: ಸಚಿವ ಈಶ್ವರ ಖಂಡ್ರೆ

Published 2 ಮಾರ್ಚ್ 2024, 6:14 IST
Last Updated 2 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯಿಂದ ನಗರದಲ್ಲಿ ಶನಿವಾರ ಜಿಲ್ಲಾಮಟ್ಟದ ಸಾವಯವ ಮತ್ತು ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ‘ಸಾವಯವ ಮತ್ತು ಸಿರಿಧಾನ್ಯ ನಡಿಗೆ’ ಎಂಬ ಬರಹ ಹೊಂದಿದ ಶ್ವೇತ ವರ್ಣದ ಟೀ ಶರ್ಟ್‌, ಟೋಪಿಗಳನ್ನು ಧರಿಸಿ ಪಾಲ್ಗೊಂಡಿದ್ದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಆರಂಭಗೊಂಡ ನಡಿಗೆ ನೆಹರೂ ಕ್ರೀಡಾಂಗಣ, ಉದಗೀರ್‌ ರಸ್ತೆ, ಗುರುನಾನಕ್‌ ಗೇಟ್‌ ಮೂಲಕ ಹಾದು ಶಿವನಗರ ಸಮೀಪ ಕೊನೆಗೊಂಡಿತು.

ಇದಕ್ಕೂ ಮುನ್ನ ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಸಾವಯವ ಕೃಷಿಯತ್ತ ಇಂದಿನ ಯುವಕರು ಹೆಚ್ಚಿನ ಒಲವು ತೋರಿಸಬೇಕು. ಇಂದು ಸಣ್ಣ- ಸಣ್ಣ ಮಕ್ಕಳಿಗೂ ಹಲವಾರು ಕಾಯಿಲೆಗಳು ಬರುತ್ತಿವೆ. ನಮ್ಮ ಆಹಾರ, ಜೀವನ ಶೈಲಿ ಕೂಡ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ರೈತ ನಮ್ಮೆಲ್ಲರಿಗೂ ಆಹಾರ ನೀಡುವ ಅನ್ನದಾತ. ಅವರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ಬೀದರ್‌ ಜಿಲ್ಲೆಯಲ್ಲಿ ಶೇ 70ರಷ್ಟು ಜನ ಕೃಷಿಯ ಮೇಲೆ‌ ಅವಲಂಬಿತರಾಗಿದ್ದಾರೆ. ಸಾವಯವ ಕೃಷಿಯ ಆಹಾರಗಳಾದ ಸಜ್ಜೆ, ಬರಗು, ರಾಗಿ, ನವಣೆ, ಹಾರಕ, ಸಾವೆಗಳ ಸೇವನೆಯಿಂದ ಬಿಪಿ, ಶುಗರ್‌ ಸೇರಿದಂತೆ ಇತರೆ ಕಾಯಿಲೆಗಳು ಬರದಂತೆ ನಿಯಂತ್ರಿಸಬಹುದು ಎಂದರು.

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಸಾವಯವ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಸಿರಿಧಾನ್ಯ ವಾಣಿಜ್ಯ ಮೇಳವನ್ನು ಆಯೋಜಿಸಲಾಗಿತ್ತು. ಕೃಷಿ ಲಾಭದಾಯಕವಾಗಲು ಅದಕ್ಕೆ ಸೂಕ್ತ ಬೆಲೆ ಸಿಗುವುದರ ಜೊತೆಗೆ ವ್ಯವಸ್ಥಿತ ಮಾರುಕಟ್ಟೆ ಕೂಡ ಬೇಕು. ಮುಂದೊಂದು ದಿನ ಎಲ್ಲರೂ ಕೃಷಿಯ ಕಡೆಗೆ ನೋಡುವ ಕಾಲ ಬರುತ್ತದೆ ಎಂದು ಹೇಳಿದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ‌ಮಾತನಾಡಿ, ನಾವು ಚಿಕ್ಕವರಿದ್ದಾಗ ಸಿರಿಧಾನ್ಯವನ್ನು ಎಲ್ಲರೂ ಮನೆಯಲ್ಲಿ ಉಪಯೋಗಿಸುತ್ತಿದ್ದರು. ಅನ್ನವನ್ನು ಅಂದು ಶ್ರೀಮಂತರು ಮಾತ್ರ ಊಟ ಮಾಡುತ್ತಿದ್ದರು. ರೈತರು ದೇಶದ 140 ಕೋಟಿ ಜನರ ಹೊಟ್ಟೆ ತುಂಬಿಸುವುದರ ಜೊತೆಗೆ ಶೇ 30ರಷ್ಟು ಆಹಾರವನ್ನು ವಿದೇಶಕ್ಕೆ ರಫ್ತು ಮಾಡಲು ಕಾರಣರಾಗಿದ್ದಾರೆ ಎಂದರು.

ಅನ್ನದಾತ ಕಷ್ಟಪಟ್ಟು ನಮ್ಮೆಲ್ಲರ ಹೊಟ್ಟೆ ತುಂಬಿಸುವ ಕೆಲಸ ‌ ಮಾಡುತ್ತಾನೆ. ಉತ್ತಮ ಆಹಾರ ನಮ್ಮ ನಾಗರಿಕತೆಯಲ್ಲಿ ರಕ್ತಗತವಾಗಿ ಬಂದಿದೆ. ಹಿಂದೆ ಸಿರಿಧಾನ್ಯಗಳಿಗೆ ಬೇಡಿಕೆ ಇರಲಿಲ್ಲ. ಈಗ ದೊಡ್ಡ- ದೊಡ್ಡ ಹೋಟೆಲ್‌ಗಳಲ್ಲಿ ಅದರ ಬೇಡಿಕೆ ಹೆಚ್ಚಾಗಿದೆ. ಕಡಿಮೆ ನೀರಿನಲ್ಲಿ ಈ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಒಳ್ಳೆಯದು. ಇಂದಿನ ವೈಜ್ಞಾನಿಕ ಯುಗದಲ್ಲಿ ಯುವ ಪೀಳಿಗೆ ದೇಶಿಯ ಆಹಾರವಾದ ಸಿರಿಧಾನ್ಯ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಸಿರಿಧಾನ್ಯಗಳ ಬಳಕೆಯಿಂದ ರೋಗ ರುಜಿನಗಳು ಬರದಂತೆ ತಡೆಯಬಹುದು. ಸಿರಿಧಾನ್ಯಗಳನ್ನು ಬರಗಾಲದ ಮಿತ್ರ ಎಂದು ಕರೆಯುತ್ತಾರೆ ಎಂದರು.

ಸಿರಿಧಾನ್ಯಗಳ ಕಿರು ಹೊತ್ತಿಗೆಯನ್ನು ಸಚಿವರು ಬಿಡುಗಡೆಗೊಳಿಸಿದರು. ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ತೋಟಗಾರಿಕೆ ಕಾಲೇಜಿನ ಡೀನ್ ಡಾ.ಎಸ್.ವಿ.ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ಡಾ.ಸುನೀಲಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಕರ್ನಾಟಕ ರಾಜ್ಯ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ವಿಶ್ವನಾಥ ಪಾಟೀಲ, ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ ಗಂದಗೆ, ಆಹಾರ ಮತ್ತು ನಾಗರಿಕ ‌ಸರಬರಾಜು ಇಲಾಖೆಯ ಉಪನಿರ್ದೇಶಕಿ ಸುರೇಖಾ, ಬೀದರ್‌ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು, ರೈತರು, ಕೃಷಿ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ನಮ್ಮ ಸರ್ಕಾರ ಈ ಹಿಂದೆ ಸಾವಯವ ಪರಿಷ್ಕೃತ ನೀತಿ ಘೋಷಣೆ ಮಾಡಿದೆ.‌ ಇಂದಿರಾಗಾಂಧಿ ಅವರು ಹಲವಾರು ಅಣೆಕಟ್ಟೆಗಳನ್ನು ಕಟ್ಟಿಸಿ ಹಸಿರು ಕ್ರಾಂತಿ ಮಾಡಿದ್ದರು.
–ಈಶ್ವರ ಬಿ. ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ
2022- 23ನೇ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಯುಎನ್ಒದಲ್ಲಿ ‌‌‌‌ಘೋಷಣೆ ಮಾಡಿಸಿ ಅದರ ಮಹತ್ವ ಜಗತ್ತಿಗೆ ಸಾರಿದರು.
–ಭಗವಂತ ಖೂಬಾ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT