ಮಂಗಳವಾರ, ಮೇ 18, 2021
28 °C
ಬಿಜೆಪಿ ಮಹಿಳಾ ಸಮಾವೇಶ

ಉಗ್ರರ ವಿರುದ್ಧ ಯುಪಿಎ ಕಠಿಣ ಕ್ರಮ ಏಕೆ ಕೈಗೊಳ್ಳಲಿಲ್ಲ?: ನಿರ್ಮಾಲಾ ಸೀತಾರಾಮನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮುಂಬೈ ದಾಳಿ (2008) ನಂತರ ಅಂದಿನ ಯುಪಿಎ ಸರ್ಕಾರ ಉಗ್ರರ ವಿರುದ್ಧ ದಿಟ್ಟ ಕ್ರಮ ಕೈಗೊಂಡಿದ್ದರೆ ಉರಿ, ಪುಲ್ವಾಮಾದಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೂರಿದರು.

ಬಿಜೆಪಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಉರಿ ದಾಳಿಯ ನಂತರ ಗಡಿರೇಖೆ ಸಮೀಪ ಇದ್ದ ಉಗ್ರರ ಅಡಗುದಾಣಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿ ಅಲ್ಲಿನ ತರಬೇತಿ ಕೇಂದ್ರಗಳನ್ನು ನಾಶ ಮಾಡಲಾಯಿತು. ಪುಲ್ವಾಮಾ ಘಟನೆಯ ನಂತರ ಪಾಕ್‌ ಗಡಿಯ ಒಳಗೆ ಹೋಗಿ ಬಾಲಕೋಟ್‌ನಲ್ಲಿದ್ದ ಶಿಬಿರಗಳನ್ನು ಧ್ವಂಸ ಮಾಡಲಾಯಿತು. ಅಂದು ಕಠಿಣ ನಿರ್ಧಾರ ತೆಗೆದುಕೊಳ್ಳದ ಕಾಂಗ್ರೆಸ್ ಮುಖಂಡರು ಈಗ ಸೇನಾ ವಿಷಯವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಭಾರತದ ಮೇಲೆ ಪ್ರತಿ ಬಾರಿ ವಿಧ್ವಂಸಕ ದಾಳಿ ನಡೆದಾಗಲೂ ಪಾಕಿಸ್ತಾನದ ನಾಯಕರು ತಾವು ಭಯೋತ್ಪಾದನೆ ವಿರುದ್ಧ ಇದ್ದಾವೆ ಎಂದು ವಿಶ್ವದ ರಾಷ್ಟ್ರಗಳನ್ನು ನಂಬಿಸುವ ಕೆಲಸ ಮಾಡುತ್ತಾರೆ. ಅತ್ತ ತನ್ನ ನೆಲದೊಳಗೇ ಉಗ್ರರಿಗೆ ತರಬೇತಿ ನೀಡಲು ವ್ಯವಸ್ಥೆ ಕಲ್ಪಿಸುತ್ತಾರೆ. ಇಂತಹ ದ್ವಿಮುಖವನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಅಂತಹ ಧೀಮಂತ ನಾಯಕ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕಿದೆ ಎಂದರು.

ಗಾಂಧೀಜಿ ಅವರ 150ನೇ ಜನ್ಮದಿನದ ನೆನಪಿಗಾಗಿ ಸ್ವಚ್ಛಭಾರತಕ್ಕೆ ಕರೆ ನೀಡಿದ್ದ ಮೋದಿ ಅವರು ಬಯಲು ಶೌಚಾಲಯ ಮುಕ್ತ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಭವಿಷ್ಯದಲ್ಲಿ ಎಲ್ಲರಿಗೂ ಸೂರು ನೀಡಲು ಕಾಲಮಿತಿ ಹಾಕಿಕೊಂಡಿದ್ದಾರೆ. ದೇಶದ ಇತಿಹಾಸದಲ್ಲಿ ಕೆಲವೊಮ್ಮೆ ಮಾಣಿಕ್ಯ ದೊರೆತಿವೆ. ಮೋದಿಜಿ ಅಂತಹ ಒಂದು ಅಮೂಲ್ಯ ಮಾಣಿಕ್ಯ. ಅವರು ದೇಶದ ಪ್ರಧಾನಿ ಅಲ್ಲ. ಒಬ್ಬ ಪ್ರಧಾನ ಸೇವಕ. ಅವರು ಮಾಡುವ ಪ್ರತಿಯೊಂದು ಕೆಲಸವೂ ದೇಶದ ಗೌರವ ಹೆಚ್ಚಿಸಿದೆ. ಈ ದೇಶಕ್ಕೆ ಅವರ ಆವಶ್ಯಕತೆ ಇದೆ. ಅದಕ್ಕಾಗಿ ಪ್ರತಿಯೊಬ್ಬರೂ ಮತಗಟ್ಟೆಗೆ ಹೋಗಿ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಕೋರಿದರು.

ಯುಪಿಎ ಅಧಿಕಾರದಲ್ಲಿ ಇದ್ದಾಗ ದೇಶದ ಪರಿಸ್ಥಿತಿ ಶೋಚನೀಯವಾಗಿತ್ತು. ಬೇಳೆಕಾಳುಗಳ ಬೆಲೆ ಗಗನಕ್ಕೇರಿತ್ತು. ಪ್ರತಿ ವರ್ಷ 23 ಲಕ್ಷ ಟನ್‌ಗಳಿಗೆ ಬೇಡಿಕೆ ಇದ್ದರೆ ಬೆಳೆಯುತ್ತಿರುವುದು 17 ಲಕ್ಷ ಟನ್. ಎನ್‌ಡಿಎ ಬಂದ ತಕ್ಷಣ ಬೇಳೆಕಾಳುಗಳ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ. ರೈತರಿಗೆ ಪ್ರೋತ್ಸಾಹ ನೀಡಿದೆ ಎಂದು ಸ್ಮರಿಸಿದರು.

ಕಾಂಗ್ರೆಸ್ ಈಚೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಡತನ ನಿರ್ಮೂಲನೆಯ ಭರವಸೆ ನೀಡಿದೆ. ಇಂದಿರಾಗಾಂಧಿ ಕಾಲದಿಂದಲೂ ಬಡತನ ನಿರ್ಮೂಲನೆಯ ಭರವಸೆ ನೀಡುತ್ತಾ ಬಂದಿರುವ ಆ ಪಕ್ಷಕ್ಕೆ 70 ವರ್ಷ ಆಡಳಿತ ನಡೆಸಿದರೂ ಏಕೆ ಬಡತನ ನಿವಾರಿಸಲು ಸಾಧ್ಯವಾಗಲಿಲ್ಲ? ಬಿಜೆಪಿ ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲೇ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಯಾವುದೇ ಯೋಜನೆ ಜಾರಿಗೆ ತಂದರೂ ಜಾತಿ, ಧರ್ಮದ ಭೇದ ಮಾಡಲಿಲ್ಲ. ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಜನರಿಗೂ ಶೇ 10ರಷ್ಟು ಮೀಸಲಾತಿ ಕಲ್ಪಿಸಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ದೇಶದ ಭದ್ರತೆಗಾಗಿ ಈ ಬಾರಿಯ ಬಜೆಟ್‌ನಲ್ಲಿ ₨ 3 ಲಕ್ಷ ಕೋಟಿ ಮೀಸಲಿಡಲಾಗಿದೆ. ಪುಲ್ವಾಮಾ ಘಟನೆಯ ನಂತರ ಬಾಲಕೋಟ್‌ ದಾಳಿ ನಡೆಸಿದ ದಿಟ್ಟ ಮಹಿಳೆ ನಿರ್ಮಲಾ. ಅವರು ಭಾರತದ ದುರ್ಗೆ ಎಂದು ಬಣ್ಣಿಸಿದರು.

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶಾಸಕರಾದ ಕುಮಾರ್ ಬಂಗಾರಪ್ಪ, ಹಾಲಪ್ಪ ಹರತಾಳು, ಕೆ.ಬಿ.ಅಶೋಕನಾಯ್ಕ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಂಸದೆ ತೇಜಸ್ವಿನಿ ಗೌಡ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ಎಸ್.ದತ್ತಾತ್ರಿ, ಎಸ್‌.ಎನ್‌.ಚನ್ನಬಸಪ್ಪ, ಡಿ.ಎಸ್.ಅರುಣ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು