ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಗನತ್ತ ಘರ್ಷಣೆ | 20 ಮಹಿಳೆಯರು ಸೇರಿ 33 ಮಂದಿ ಬಂಧನ

Published 28 ಏಪ್ರಿಲ್ 2024, 4:15 IST
Last Updated 28 ಏಪ್ರಿಲ್ 2024, 4:15 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಂಡಿಗನತ್ತದ ಮತಗಟ್ಟೆ ಕೇಂದ್ರದಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟದ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಎರಡು ಪ್ರಕರಣಗಳಲ್ಲಿ ಕ್ರಮವಾಗಿ 41 ಮತ್ತು 33 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಪೊಲೀಸರು 33 ಆರೋಪಿಗಳನ್ನು ಬಂಧಿಸಿದ್ದಾರೆ. 

ಬಂಧಿತರಲ್ಲಿ 20 ಮಹಿಳೆಯರು ಮತ್ತು 13 ಪುರುಷರು. ಪಿಆರ್‌ಒ (ಮತಗಟ್ಟೆಯ ಉಸ್ತುವಾರಿ ಅಧಿಕಾರಿ) ಬಸವಣ್ಣ ಹಾಗೂ ತಹಶೀಲ್ದಾರ್‌ ಅವರು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಮೆಂದಾರೆ ಗ್ರಾಮದ ಗಿರಿಜನ ಮುಖಂಡರು ನೀಡಿರುವ ದೂರಿನ ಆಧಾರದಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಮತಗಟ್ಟೆ ಅಧಿಕಾರಿ ನೀಡಿದ ದೂರಿನ ಆಧಾರದಲ್ಲಿ 41 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ 32 ಮಂದಿ ವಿರುದ್ಧ ಎಫ್‌ಐಆರ್‌ ಆಗಿದೆ. ಕುಡಿಯುವ ನೀರಿನ ಪೈಪ್‌ಲೈನ್‌ ಕಿತ್ತುಹಾಕಿದ್ದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ‘ಪ್ರಜಾವಾಣಿ’ಗೆ ತಿಳಿಸಿದರು. 

ದೂರಿನಲ್ಲೇನಿದೆ?: ‘ಹೆಂಗಸರು ಮತ್ತು ಗಂಡಸರನ್ನೊಳಗೊಂಡಿದ್ದ 200ರಿಂದ 250 ಮಂದಿಯ ಗುಂಪು ಅಕ್ರಮ ಕೂಟ ಕಟ್ಟಿಕೊಂಡು ಕರ್ತವ್ಯ ನಿರತ ಅಧಿಕಾರಿಗಳು, ಪೊಲೀಸರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಆರೋಪಿಗಳು ಮತಗಟ್ಟೆಯ ಒಳಗೆ ಪ್ರವೇಶಿಸಿ, ಮತಯಂತ್ರ, ವಿವಿಪ್ಯಾಟ್‌, ಬ್ಯಾಲೆಟ್‌ ಯುನಿಟ್‌ ಹಾಗೂ ಕಂಟ್ರೋಲ್‌ ಯುನಿಟ್‌ಗಳನ್ನು ಕಿತ್ತುಕೊಂಡು ಹೊರಗಡೆ ಎತ್ತಿಕೊಂಡುಹೋಗಿ ಬೆಂಕಿ ಹಾಕಿ ಸುಟ್ಟು ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.  

‘ಮತಗಟ್ಟೆಯ ಒಳಗೆ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ಕೂಡಿ ಹಾಕಿ ಮತಗಟ್ಟೆಯ ಬಾಗಿಲಿಗೆ ಬೆಂಕಿ ಹಾಕಿ ಕೊಲೆ ಮಾಡಲು ಯತ್ನಿಸಲಾಗಿದೆ’ ಎಂದೂ ಬಸವಣ್ಣ ಅವರು ದೂರಿನಲ್ಲಿ ತಿಳಿಸಿದ್ದಾರೆ. 

ಪ್ರಮುಖ ಆರೋಪಿಗಳು: ಇಂಡಿಗನತ್ತ ಗ್ರಾಮದ ಬಿಳಿಯ ಅಲಿಯಾಸ್‌ ಶಿವರಾಜು, ರವಿ, ಚಂದ್ರ, ಬೋಗಪ್ಪ, ನಾಗ, ನಾಗ ಅಲಿಯಾಸ್‌ ರುದ್ರಾಕ್ಷಿ, ಪುಟ್ಟತಮ್ಮಡಿ, ಹುಚ್ಚ ತಮ್ಮಡಿ, ಕೆಂಪರಾಜು, ದುಂಡತಮ್ಮಡಿ, ಪುಟ್ಟಯ್ಯ, ನಾಗತಮ್ಮಡಿ ಸೇರಿದಂತೆ 41 ಮಂದಿಯನ್ನು ಎಫ್‌ಐಆರ್‌ನಲ್ಲಿ ಆರೋಪಿಗಳು ಎಂದು ಗುರುತಿಸಲಾಗಿದೆ. 

ತಹಶೀಲ್ದಾರ್‌ ಗುರುಪ್ರಸಾದ್, ಇನ್‌ಸ್ಪೆಕ್ಟರ್‌ ಜಗದೀಶ್‌, ಪಿಆರ್‌ಒ ಬಸವಣ್ಣ ಸೇರಿದಂತೆ 15 ಮಂದಿ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 

ಪೊಲೀಸರು ಶುಕ್ರವಾರವೇ 33 ಮಂದಿಯನ್ನು ವಶಕ್ಕೆ ಪಡೆದಿದ್ದರು. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಸ್ಥಳ ಮಹಜರು: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಇಂಡಿಗನತ್ತ ಗ್ರಾಮಕ್ಕೆ ತೆರಳಿ ಸ್ಥಳ ಮಹಜರು ನಡೆಸಿದರು. 

14 ಮತಗಳ ಚಲಾವಣೆ: ಘಟನೆಗೂ ಮುನ್ನ ಮೆಂದಾರೆ ಗ್ರಾಮದ ಒಂಬತ್ತು ಮಂದಿ ಮತದಾನ ಮಾಡಿದ್ದರು. ಇವರಲ್ಲದೇ ಚುನಾವಣಾ ಕರ್ತವ್ಯ ನಿರತ ಐವರು ಹಕ್ಕು ಚಲಾಯಿಸಿದ್ದರು (ಇಡಿಸಿ). ಹಾಗಾಗಿ, ಒಟ್ಟು 14 ಮತಗಳು ಇವಿಎಂನಲ್ಲಿ ದಾಖಲಾಗಿತ್ತು.  

ಘಟನೆಯಲ್ಲಿ ಗಾಯಗೊಂಡಿರುವ ಮೆಂದಾರೆ ಗ್ರಾಮಸ್ಥರು‌
ಘಟನೆಯಲ್ಲಿ ಗಾಯಗೊಂಡಿರುವ ಮೆಂದಾರೆ ಗ್ರಾಮಸ್ಥರು‌
ಡಾ.ಚಿದಂಬರ್‌ ಎಸ್‌.
ಡಾ.ಚಿದಂಬರ್‌ ಎಸ್‌.
ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಗಂಭೀರ ಸಮಸ್ಯೆ ಆಗಿಲ್ಲ. ತಾಲ್ಲೂಕು ವೈದ್ಯಾಧಿಕಾರಿ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ
-ಡಾ.ಚಿದಂಬರ ಜಿಲ್ಲಾ ಆರೋಗ್ಯ ಅಧಿಕಾರಿ
ಆನಂದ್‌ ಪ್ರಕಾಶ್‌ ಮೀನಾ
ಆನಂದ್‌ ಪ್ರಕಾಶ್‌ ಮೀನಾ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮೆಂದಾರೆಗೆ ನೀರು ಪೂರೈಸುವ ಪೈಪ್‌ಲೈನ್‌ ಹಾಳಾಗಿತ್ತು. ಅದನ್ನು ಸರಿ ಪಡಿಸಿದ್ದೇವೆ
-ಆನಂದ್‌ ಪ್ರಕಾಶ್‌ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ
ವೈದ್ಯರು ಸಿಬ್ಬಂದಿ ಭೇಟಿ ಚಿಕಿತ್ಸೆ
ಶುಕ್ರವಾರದ ಘರ್ಷಣೆಯಲ್ಲಿ ಗಾಯಗೊಂಡ ಮೆಂದಾರೆ ಗ್ರಾಮಸ್ಥರಿಗೆ ತಕ್ಷಣ ಚಿಕಿತ್ಸೆ ಸಿಕ್ಕಿರಲಿಲ್ಲ. ಅವರು ಹಾಗೆಯೇ ಊರಿಗೆ ತೆರಳಿದ್ದರು. ಆದರೆ ನೋವಿನಿಂದ ನರಳುತ್ತಿದ್ದ ಅವರಿಗೆ ತಡ ರಾತ್ರಿ ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗಿದೆ.  ಶನಿವಾರ ಬೆಳಿಗ್ಗೆ ತಾಲ್ಲೂಕು ವೈದ್ಯಾಧಿಕಾರಿ ಹಾಗೂ ವೈದ್ಯಕೀಯ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಎಲ್ಲ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ.  ಭಯದಲ್ಲಿ ಗ್ರಾಮಸ್ಥರು: ಶುಕ್ರವಾರದ ಘಟನೆ ಮೆಂದಾರೆ ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿದೆ. ಈ ಘಟನೆ ನಡೆಯಬಹುದು ಎಂಬ ನಿರೀಕ್ಷೆಯಲ್ಲಿರದ ಅವರು ಅಧಿಕಾರಿಗಳ ಮಾತು ಕೇಳಿ ಮತದಾನ ಮಾಡಲು ತೆರಳಿದ್ದರು. ನೆರೆಯ ಗ್ರಾಮಸ್ಥರು ನಡೆಸಿದ ದೌರ್ಜನ್ಯದಿಂದ ಕಂಗಾಲಾಗಿರುವ ಜನರು ರಕ್ಷಣೆಗಾಗಿ ಮನವಿ ಮಾಡುತ್ತಿದ್ದಾರೆ. ನಾವು ಗ್ರಾಮದಿಂದ ಬೇರೆಡೆಗೆ ತೆರಳಬೇಕಾದರೆ ಇಂಡಿಗನತ್ತ ಗ್ರಾಮದ ಮೂಲಕವೇ ಹೋಗಬೇಕು. ಅದೇ ಗ್ರಾಮದವರು ಹೊಂದಿರುವ ವಾಹನಗಳಲ್ಲೇ ಹೋಗಬೇಕು. ಈ ಘಟನೆ ನಡೆದಿರುವುದರಿಂದ ಮುಂದೆ ಹೇಗೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT