ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | 4.19 ಚ.ಕಿ.ಮೀ ಹಿಗ್ಗಿದ ಹಸಿರು ವ್ಯಾಪ್ತಿ

ಭಾರತೀಯ ಅರಣ್ಯ ಸ್ಥಿತಿಗತಿ ವರದಿ: ಭೌಗೋಳಿಕ ವಿಸ್ತೀರ್ಣದಲ್ಲಿ ಶೇ 48.23 ಅರಣ್ಯದ ಪಾಲು
Last Updated 2 ಜನವರಿ 2020, 5:21 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಹಸಿರು ಪ್ರದೇಶ 4.19ರಷ್ಟು ಚದರ ಕಿ.ಮೀನಷ್ಟು ಹೆಚ್ಚಾಗಿದೆ.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ಸ್ಥಿತಿಗತಿ ವರದಿ–2019ರಲ್ಲಿ ಜಿಲ್ಲೆಯಲ್ಲಿರುವ ಅರಣ್ಯದ ಅಂಕಿಅಂಶಗಳೂ ಲಭ್ಯವಿವೆ.

ಬಂಡೀಪುರ ಹುಲಿ ಸರಂಕ್ಷಿತ ಪ್ರದೇಶ,ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ(ಬಿಆರ್‌ಟಿ) ಮತ್ತು ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮಗಳನ್ನು ಹೊಂದಿರುವ ಜಿಲ್ಲೆಯ ಅರಣ್ಯ ರಾಜ್ಯ ಮಾತ್ರವಲ್ಲದೇ ದೇಶದ ಗಮನವನ್ನೇ ಸೆಳೆದಿದೆ.ಜಿಲ್ಲೆಯ ಒಟ್ಟಾರೆ ಭೌಗೋಳಿಕ ವಿಸ್ತೀರ್ಣದಲ್ಲಿ ಶೇ 48.23ರಷ್ಟು ಅರಣ್ಯ ಪ್ರದೇಶವೇ ಇದೆ.

ಜಿಲ್ಲೆಯಲ್ಲಿ ನಾಲ್ಕು ರಕ್ಷಿತಾರಣ್ಯಗಳು ಇರುವುದರಿಂದ ಕಾಡು ಅಥವಾ ಕಾಡಿನಂಚಿನ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ನಿಯಂತ್ರಣ ಇರುವುದರಿಂದ ಜಿಲ್ಲೆಯ ಹಸಿರು ಆವರಣ ಕಡಿಮೆಯಾಗಿಲ್ಲ ಎಂಬುದು ಪರಿಸರವಾದಿಗಳ ಮಾತು.

ಭಾರತೀಯ ಅರಣ್ಯ ಸ್ಥಿತಿಗತಿ ವರದಿ ಪ್ರಕಾರ, ಜಿಲ್ಲೆಯಲ್ಲಿ 2,724.19 ಚದರ ಕಿ.ಮೀ ಅರಣ್ಯ ಪ್ರದೇಶವಿದ್ದು, 90.97 ಚದರ ಕಿ.ಮೀನಷ್ಟು ಪ್ರದೇಶ ದಟ್ಟ ಕಾಡಿನಿಂದ ಕೂಡಿದೆ. 1,527 ಚದರ ಕಿ.ಮೀಗಳಷ್ಟು ಪ್ರದೇಶ ಅರೆ ದಟ್ಟ ಅರಣ್ಯ ಪ್ರದೇಶವಿದೆ. ಅಲ್ಲದೆ, 1,105.91 ಚದರ ಕಿ.ಮೀ ಸಾಮಾನ್ಯ ಕಾಡು ಇದೆ. 129 ಚದರ ಕಿ.ಮೀ ಕುರುಚಲು ಅರಣ್ಯ ಇದೆ.ತಾಲ್ಲೂಕುವಾರು ಅರಣ್ಯ ವ್ಯಾಪ್ತಿಯ ವಿವರಗಳು ಲಭ್ಯವಾಗಿಲ್ಲ.

ಅರಣ್ಯ ಪ್ರದೇಶ ಮಾತ್ರವಲ್ಲದೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದಿರುವ ಸಂರಕ್ಷಣಾ ಚಟುವಟಿಕೆಗಳು, ಅರಣ್ಯ ಕೃಷಿ ಪ್ರಯತ್ನಗಳು ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಆಗಿರುವ ಹೆಚ್ಚಳದಿಂದ ಅರಣ್ಯ ವೃದ್ಧಿ ಸಾಧ್ಯವಾಗಿದೆ ಎಂದು ವರದಿ ಹೇಳಿದೆ.

ತೋಟಗಾರಿಕಾ ಬೆಳೆಗಳಾದ ಕಾಫಿ, ರಬ್ಬರ್‌ ಹಾಗೂ ತೆಂಗು ಬೆಳೆದ ಪ್ರದೇಶವನ್ನು ಕೂಡ ಅರಣ್ಯ ಪ್ರದೇಶ ಎಂದು ವರದಿ ಗುರುತಿಸಿದೆ. ಎರಡೂವರೆ ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಈ ಬೆಳೆಗಳು ಇದ್ದರೆ, ಅವುಗಳನ್ನು ಅರಣ್ಯ ಎಂದು ಪರಿಗಣಿಸಲಾಗುತ್ತದೆ.ಜಿಲ್ಲೆಯಲ್ಲಿ ತೆಂಗು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಬಿಳಿಗಿರಿ ರಂಗನಬೆಟ್ಟದಲ್ಲಿ ಮಾತ್ರ ಕಾಫಿ ಇದೆ. ರಬ್ಬರ್‌ ಬೆಳೆ ತೀರಾ ಕಡಿಮೆ.

ಮೀಸಲು ಅರಣ್ಯ ಘೋಷಣೆ

ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಹೋಬಳಿಯ ಸತ್ತೇಗಾಲ ಗ್ರಾಮದ ಸರ್ವೇ ನಂಬರ್‌ 174ರಲ್ಲಿ ಬರುವ 3,766 ಹೆಕ್ಟೇರ್‌ (ಅಂದಾಜು 9,415 ಎಕರೆ) ಸರ್ಕಾರಿ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಿಸಿ ರಾಜ್ಯ ಸರ್ಕಾರ 2018ರ ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಪ್ರದೇಶ ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಗೆ ಸೇರಿದೆ.

ಅದೇ ರೀತಿ,ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಂಡೀಪುರದ ಅರಣ್ಯದ ಅಂಚಿನಲ್ಲಿರುವ 18 ಹಳ್ಳಿಗಳ ಕಂದಾಯ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಿಸಿ ರಾಜ್ಯ ಸರ್ಕಾರ 2019ರ ಆಗಸ್ಟ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT