ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಕೊರತೆ: 5 ಹಾಸ್ಟೆಲ್‌ಗಳು ಬಾಗಲಕೋಟೆಗೆ ವರ್ಗ

ಚಾಮರಾಜನಗರ ತಾಲ್ಲೂಕಿನ ನಾಲ್ಕು, ಹನೂರಿನ ಒಂದು ಹಾಸ್ಟೆಲ್‌
Last Updated 15 ಜನವರಿ 2020, 11:24 IST
ಅಕ್ಷರ ಗಾತ್ರ

ಚಾಮರಾಜನಗರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳಿಗಾಗಿಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಜಿಲ್ಲೆಗೆ ಈ ಹಿಂದೆ ಮಂಜೂರಾಗಿದ್ದ ಐದು ಹಾಸ್ಟೆಲ್‌ಗಳು ವಿದ್ಯಾರ್ಥಿಗಳ ಕೊರತೆ ಕಾರಣಕ್ಕೆ ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಯಾಗಿದೆ.

ಸಮಾಜ ಕಲ್ಯಾಣ ಇಲಾಖೆ ಇದೇ 3ರಂದು ಈ ಸಂಬಂಧ ಆದೇಶ ಹೊರಡಿಸಿದೆ. ಚಾಮರಾಜನಗರ ತಾಲ್ಲೂಕಿಗೆ ಮಂಜೂರಾಗಿದ್ದ ನಾಲ್ಕು ಹಾಗೂ ಹನೂರು ತಾಲ್ಲೂಕಿನ ಒಂದು ಹಾಸ್ಟೆಲ್‌ ಈ ಪಟ್ಟಿಯಲ್ಲಿವೆ. ಸಿಬ್ಬಂದಿ ಸಮೇತವಾಗಿ ಈ ಹಾಸ್ಟೆಲ್‌ಗಳು ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಯಾಗಲಿವೆ.

ಯಾವುದೆಲ್ಲ?: ಹರದನಹಳ್ಳಿ, ಬ್ಲಾಕ್‌–2 (ಬಾಲಕರು) (ಸಾಮರ್ಥ್ಯ–250), ಚಾಮರಾಜನಗರ ಎಫ್‌ಜಿಸಿ ಟೌನ್‌ (ಬಾಲಕರು) (ಸಾಮರ್ಥ್ಯ–100), ಚಾಮರಾಜನಗರ ಮಹಿಳಾ ಕಾಲೇಜು ಹಾಸ್ಟೆಲ್‌ (ಸಾಮರ್ಥ್ಯ–100), ಚಾಮರಾಜನಗರ ಸ್ನಾತಕೋತ್ತರ ಕೇಂದ್ರ ಹಾಸ್ಟೆಲ್‌ ಮತ್ತು ಹನೂರಿನ ಬಾಲಕಿಯರ ಹಾಸ್ಟೆಲ್‌.

ದಾಖಲೆಯಲ್ಲಿ ಮಾತ್ರವಿದ್ದ ಹಾಸ್ಟೆಲ್‌ಗಳು: ‘ನಾಲ್ಕೈದು ವರ್ಷಗಳ ಹಿಂದೆ ಜಿಲ್ಲೆಗೆ ಈ ಹಾಸ್ಟೆಲ್‌ಗಳು ಮಂಜೂರಾಗಿದ್ದವು. ಆದರೆ, ಭೌತಿಕವಾಗಿ ಇನ್ನೂ ಪ್ರಾರಂಭವಾಗಿರಲಿಲ್ಲ. ಸಿಬ್ಬಂದಿ ನೇಮಕವಾಗಿತ್ತು. ಪ್ರತಿ ವರ್ಷ ವಿದ್ಯಾರ್ಥಿಗಳ ಕೊರತೆಯಿಂದಾಗಿ ಹಾಸ್ಟೆಲ್‌ಗಳು ಆರಂಭವಾಗಿರಲಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಹೊನ್ನೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಾಲ್ಕೈದು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದುದರಿಂದ, ಇಲಾಖೆಯು ಸ್ಥಳೀಯ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸಿ ಬೇರೆ ಕಡೆಗೆ ವರ್ಗಾಯಿಸಲು ನಿರ್ಧಾರ ಕೈಗೊಂಡಿದೆ.

ಕೆಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮಂಜೂರಾದ ಹಾಸ್ಟೆಲ್‌ಗಳು ಇನ್ನೂ ಆರಂಭವಾಗದೇ ಇರುವುದರಿಂದ ಅವುಗಳನ್ನು ಅವಶ್ಯಕತೆ ಇರುವ ಕಡೆ ವರ್ಗಾಯಿಸಬಹುದು ಎಂದು ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಬೇರೆ ಜಿಲ್ಲೆಗಳಲ್ಲೂ ಇದೇ ರೀತಿ ನಡೆದಿದೆ. ಕೆಲವು ಜಿಲ್ಲೆಗಳಲ್ಲಿ ಒಂದು ತಾಲ್ಲೂಕಿನಿಂದ ಇನ್ನೊಂದು ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿದೆ.

ವಿದ್ಯಾರ್ಥಿಗಳು ಬಾರದಿರಲು ಕಾರಣವೇನು?: ಸಮಾಜ ಕಲ್ಯಾಣ ಇಲಾಖೆಯ ನಿರ್ವಹಿಸುತ್ತಿರುವ ಬಹುತೇಕ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ. ಯಾವ ಹಾಸ್ಟೆಲ್‌ ಕೂಡ ಪೂರ್ಣ ಸಾಮರ್ಥ್ಯದಷ್ಟು ವಿದ್ಯಾರ್ಥಿಗಳನ್ನು ಹೊಂದಿಲ್ಲ.

ಪೋಷಕರು ಹಾಸ್ಟೆಲ್‌ನಲ್ಲಿ ಇರಿಸಿ ಮಕ್ಕಳನ್ನು ಓದಿಸುವುದಕ್ಕೆ ಇಷ್ಟಪಡುವುದಿಲ್ಲ. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಈಗಲೂ ಮೈಸೂರನ್ನು ಅವಲಂಬಿಸಿದ್ದಾರೆ. ಅಲ್ಲಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ:ಈ ಮಧ್ಯೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಸ್ಟೆಲ್‌ಗಳು ಬೇರೆ ಕಡೆಗೆ ವರ್ಗಾವಣೆ ಆಗಿದೆ ಎಂದು ಕೆಲವು ಮುಖಂಡರು ಆರೋಪಿಸಿದ್ದಾರೆ.

‘ಸಮಾಜ ಕಲ್ಯಾಣ ಇಲಾಖೆಯ ಐದು ಹಾಸ್ಟೆಲ್‌ಗಳು ವರ್ಗಾವಣೆಯಾಗಿದೆ. ಅದನ್ನು ತಡೆಗಳು ಅಧಿಕಾರಿಗಳು ಯಾರೂ ಕ್ರಮ ಕೈಗೊಂಡಿಲ್ಲ’ ಎಂದುಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ವೀರಭದ್ರಸ್ವಾಮಿ ಹೇಳಿದ್ದಾರೆ.

***

ವಿದ್ಯಾರ್ಥಿಗಳ ಕೊರತೆ ಇರುವ ಕಡೆಯಿಂದ ಬೇಡಿಕೆ ಇರುವಲ್ಲಿಗೆ ಇಲಾಖೆ ಹಾಸ್ಟೆಲ್‌ಗಳನ್ನು ವರ್ಗಾವಣೆ ಮಾಡಿದೆ. ರಾಜ್ಯದಾದ್ಯಂತ ಈ ಪ್ರಕ್ರಿಯೆ ನಡೆದಿದೆ

-ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT