ಕೊಳ್ಳೇಗಾಲ: ಶಾಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹ ಸಹಕರಿಸಬೇಕು ಎಂದು ನಟ ಗಣೇಶ್ ರಾವ್ ಕೇಸರ್ಕರ್ ಹೇಳಿದರು.
ತಾಲ್ಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಂಗಳೂರಿನ ಜಿ.ಆರ್. ಫಿಲಮ್ಸ್ ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡುಗೆ ನೀಡಿದ ಕ್ರೀಡಾ ಸಾಮಗ್ರಿ , ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಮಾಡಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮ ಉದ್ದೇಶ. ನಾನು ಇದೇ ಶಾಲೆಯಲ್ಲಿ ಓದಿ ರಂಗಭೂಮಿ, ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಶಾಲೆ ನನ್ನ ಹೆಮ್ಮೆ. ಶಾಲೆಯ ಮಕ್ಕಳಿಗೆ ನಾನು ಉಚಿತ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದೇನೆ. ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡುವ ಇಚ್ಛ ಇದೆ ಎಂದರು. ಶಾಲೆಯನ್ನು ನನಗೆ ದತ್ತು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿದರು. ಈ ಊರಲ್ಲೇ ಹುಟ್ಟಿ ಬೆಳೆದವನು. ಶಾಲೆಯನ್ನುಇನ್ನೂ ಅಭಿವೃದ್ಧಿ ಮಾಡಬೇಕು ಎಂಬ ಕನಸನ್ನು ಕಂಡಿದ್ದೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಬಿ.ಆರ್.ಸಿ ಮಹದೇವಕುಮಾರ್, ಮುಖ್ಯ ಶಿಕ್ಷಕ ವಾಸು, ಗ್ರಾಮದ ಮುಖಂಡರು ಹಾಗೂ ಗಣೇಶ್ ಕುಟುಂಬದವರು ಭಾಗವಹಿಸಿದ್ದರು.