ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಪಿಗಳ ಬಂಧನಕ್ಕೆ ಆಗ್ರಹ, ಧರಣಿಯ ಎಚ್ಚರಿಕೆ

ನಕಲಿ ದಾಖಲೆ ಸೃಷ್ಟಿಸಿ ಆದಿ ಕರ್ನಾಟಕ ಹಾಸ್ಟೆಲ್‌ ಆಸ್ತಿ ಪರಭಾರೆ, ಠಾಣೆಯಲ್ಲಿ ಪ್ರಕರಣ ದಾಖಲು
Published 24 ಮಾರ್ಚ್ 2024, 7:32 IST
Last Updated 24 ಮಾರ್ಚ್ 2024, 7:32 IST
ಅಕ್ಷರ ಗಾತ್ರ

ಚಾಮರಾಜನಗರ: ‘ನಗರದ ಆದಿ ಕರ್ನಾಟಕ ಹಾಸ್ಟೆಲ್‌ಗೆ ಸೇರಿದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕ್ರಯ ಮಾಡಿರುವುದು ತನಿಖೆಯಿಂದ ದೃಢಪಟ್ಟಿದ್ದು, ನಗರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷ ಎಸ್‌.ನಂಜುಂಡಸ್ವಾಮಿ, ಕಾರ್ಯದರ್ಶಿ ಎನ್‌.ರಾಜಗೋಪಾಲ್‌ ಸೇರಿದಂತೆ ಎಫ್‌ಐಆರ್‌ನಲ್ಲಿರುವ ಉಲ್ಲೇಖಿಸಲಾಗಿರುವ ಇತರ 12 ಜನರನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು’ ಎಂದು ತಾಲ್ಲೂಕು ಆದಿ ಕರ್ನಾಟಕ ಸಂಘದ ಆಸ್ತಿ ಸಂರಕ್ಷಣಾ ಸಮಿತಿಯ ಸದಸ್ಯ ಅಯ್ಯನಪುರ ಶಿವಕುಮಾರ್‌ ಶನಿವಾರ ಒತ್ತಾಯಿಸಿದರು. 

ನಗರದಲ್ಲಿ ಸಮಿತಿಯ ಇತರ ಸದಸ್ಯರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ನಾವು ಈ ಹಿಂದೆ ಎತ್ತಿರುವ ವಿಚಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಿಲ್ಲಾಧಿಕಾರಿಯವರು ನೇಮಿಸಿದ್ದ ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಯು ತನಿಖೆ ನಡೆಸಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಿದೆ. ಹಾಸ್ಟೆಲ್‌ಗೆ ಸೇರಿರುವ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ತನಿಖೆಯಲ್ಲಿ ಸ್ಪಷ್ಟವಾಗಿ ತಿಳಿದು ಬಂದಿದೆ. ಈ ಸಂಬಂಧ ಸಮಿತಿಯು ಹಲವು ಶಿಫಾರಸುಗಳನ್ನು ಮಾಡಿದೆ’ ಎಂದರು. 

‘ಸರ್ವೆ ನಂಬರ್‌ 295/4ರ 1.22 ಎಕರೆ ಪೈಕಿ 07–12 ಗುಂಟೆ ಜಮೀನನ್ನು 1942ರ ಜನವೆಂಬರ್‌ 28ರಂದು ಆಲಕಹಳ್ಳಿ ದಾಸಪ್ಪ ಅವರ ಮಗ ದಿ.ಶಿವರಾಮಯ್ಯ ಅವರಿಂದ ರಾಮಸಮುದ್ರದ ಎಸ್‌.ಕೃಷ್ಣಮೂರ್ತಿ ಅವರಿಗೆ ಕ್ರಯವಾಗಿ ಹಕ್ಕು ಬದಲಾವಣೆಯಾಗಿತ್ತು. ಆದರೆ, ಸರ್ವೆ ನಂಬರ್‌ 295/4ಸಿರ ಎಂಟು ಗುಂಟೆ ಜಮೀನು ಎಸ್‌.ಕೃಷ್ಣಮೂರ್ತಿ ಅವರಿಂದ ಬಿ.ಕೆ.ಹರೀಶ್‌ ಎಂಬುವವರಿಗೆ  2019ರ ಅಕ್ಟೋಬರ್‌ 3ರಂದು ಕ್ರಯ ಆಗಿದೆ. ಈ ಕೃಷ್ಣಮೂರ್ತಿ ಎಂಬುವವರು ಅರಕಲಗೂಡಿನವರಾಗಿದ್ದು, ನಕಲಿ ವ್ಯಕ್ತಿಯಾಗಿದ್ದಾರೆ. ಅವರ ಆಧಾರ್‌ ಸಂಖ್ಯೆ ನಕಲಿ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಶಿವಕುಮಾರ್‌ ಹೇಳಿದರು. 

‘ಆ ಬಳಿಕವೂ ಈ ಜಮೀನು ಬಿ.ಕೆ.ಹರೀಶ್‌ ಅವರಿಂದ 2020–21ನೇ ಸಾಲಿನಲ್ಲಿ ಮಹೇಶ್‌ಕುಮಾರ್‌ ಬಿ ಎಂಬುವವರಿಗೆ, ಅವರಿಂದ 2023ರಲ್ಲಿ ಸಿ.ಕೆ.ದಿಲೀಪ್‌ ಕುದರ್‌ ಮತ್ತು ಶ್ರೀನಿಧಿ ಕುದರ್‌ ಅವರಿಗೆ ಹಕ್ಕು ಬದಲಾವಣೆಯಾಗಿದೆ. ಇದೆಲ್ಲವೂ ನಕಲಿ ದಾಖಲೆ ಸೃಷ್ಟಿಸಿ ಮಾಡಲಾಗಿದೆ ಎಂದು ತನಿಖಾ ವರದಿ ಹೇಳಿದೆ. ಅಕ್ರಮ ಪರಭಾರೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನೂ ರದ್ದುಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅದರಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರು ಸಮಾಜ ಕಲ್ಯಾಣ ಇಲಾಖೆಗೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದು, ಅವರು ಶುಕ್ರವಾರ ದೂರು ನೀಡಿದ್ದಾರೆ’ ಎಂದರು. 

‘ಪೊಲೀಸರು ಐಪಿಸಿ ಸೆಕ್ಷನ್‌ 420, 465, 468, 471ರ ಅಡಿ ಪ್ರಕರಣ ದಾಖಲಿಸಿಕೊಂಡು 14 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ತಕ್ಷಣವೇ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ, ಸಮುದಾಯದ 10 ಸಾವಿರಕ್ಕೂ ಹೆಚ್ಚು ಮಂದಿ ಜಿಲ್ಲಾಡಳಿತ ಭವನದ ಮುಂದೆ ಸೇರಿ ಧರಣಿ ನಡೆಸಲಿದ್ದೇವೆ’ ಎಂದು ಶಿವಕುಮಾರ್ ಎಚ್ಚರಿಸಿದರು. 

ರಾಜೀನಾಮೆ ಕೊಡಲಿ: ‘ಸಂಘದ ಅಧ್ಯಕ್ಷ ಎಸ್‌.ನಂಜುಂಡಸ್ವಾಮಿ ಅವರ ಮೇಲೆ ನಮಗೆ ಗೌರವವಿದೆ. ಆದರೆ, ಈ ಪ್ರಕರಣದಲ್ಲಿ ಆರಂಭದಿಂದಲೂ ಅವರು ಸುಳ್ಳು ಹೇಳುತ್ತಾ ಬಂದಿದ್ದಾರೆ. ನಾವು ದಾಖಲೆಗಳನ್ನು ನೀಡಿದರೂ, ತಮ್ಮ ಅವಧಿಯಲ್ಲಿ ಆಸ್ತಿ ಪರಭಾರೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. 1943ರ ನಂತರ 2019ರವರೆಗೂ ಹಾಸ್ಟೆಲ್‌ ಆಸ್ತಿಯ ಹಕ್ಕು ಬದಲಾವಣೆಯಾಗಿಲ್ಲ. 2019ರ ನಂತರ ಆಗಿದೆ ಎಂದು ತನಿಖಾ ವರದಿ ಹೇಳುತ್ತಿದೆ. ಇವರು ಅಧ್ಯಕ್ಷರಾಗಿರುವ ಸಂದರ್ಭದಲ್ಲೇ ಇದು ನಡೆದಿದೆ. ಹಾಗಿದ್ದರೂ ಸುಳ್ಳು ಹೇಳುತ್ತಿದ್ದಾರೆ’ ಎಂದು ದೂರಿದರು. 

‘ಹಾಸ್ಟೆಲ್‌ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸಬೇಕು ಎಂದು ತನಿಖಾ ಸಮಿತಿ ಶಿಫಾರಸು ಮಾಡಿದೆ. ಸಂಘದ ವ್ಯವಹಾರಗಳ ದಾಖಲೆಗಳು ಲೆಕ್ಕಪತ್ರಗಳ ವಿವರಗಳನ್ನು ತನಿಖಾ ಸಮಿತಿ ಮುಂದೆ ಹಾಜರು ಪಡಿಸದೇ ಇರುವುದರಿಂದ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ. ಜಿಲ್ಲಾಡಳಿತ ಕ್ರಮ ಕೈಗೊಳ್ಳುವ ಮೊದಲು ನಂಜುಂಡಸ್ವಾಮಿ ಅವರು ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಮಾಡಿ ಕೊಡಲಿ’ ಎಂದು ಅವರು ಹೇಳಿದರು. 

ಬೆದರಿಕೆಗೆ ಬಗ್ಗಲ್ಲ: ‘ನಂಜುಂಡಸ್ವಾಮಿ ಹಾಗೂ ಅವರ ಕುಟುಂಬದವರು ಆಸ್ತಿ ಸಂರಕ್ಷಣಾ ಸಮಿತಿಯವರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ಮೂಲಕ ಹೇಳಿಸುವುದು, ವಾಹನದಲ್ಲಿ ಹಿಂಬಾಲಿಸುವುದು ಮುಂತಾದ ಬೆದರಿಕೆ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ನಾವು ಬಗ್ಗುವುದಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು’ ಎಂದು ಅವರು ಒತ್ತಾಯಿಸಿದರು. 

‘ಆಸ್ತಿ ಸಂರಕ್ಷಣಾ ಸಮಿತಿಯ ಸದಸ್ಯರು ಮತ್ತು ಸಮುದಾಯದ ಆಸ್ತಿಯನ್ನು ರಕ್ಷಿಸುವುದಕ್ಕಾಗಿ ಓಡಾಡುತ್ತಿರುವವರಿಗೆ ಏನಾದರೂ ಆದರೆ ಅದಕ್ಕೆ ಎಸ್‌.ನಂಜುಂಡಸ್ವಾಮಿ, ಅವರ ಮಕ್ಕಳು, ಅವರ ಬೆಂಬಲಿಗರೇ ನೇರ ಜವಾಬ್ದಾರಿಯಾಗುತ್ತಾರೆ’ ಎಂದು ಶಿವಕುಮಾರ್‌ ಹೇಳಿದರು. 

ಸಮಿತಿಯ ಆರ್‌.ಮಹದೇವ್ ಮಾತನಾಡಿದರು. ಮುಖಂಡರಾದ ಶಿವಸ್ವಾಮಿ, ನಾಗಯ್ಯ, ರಂಗಸ್ವಾಮಿ, ಮಹದೇವಸ್ವಾಮಿ, ನಾಗರಾಜ್‌, ಉಮೇಶ್‌ ಭಾಗವಹಿಸಿದ್ದರು.

‘ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ’

‘ಹಾಸ್ಟೆಲ್‌ ಆಸ್ತಿಗೆ ಸಂಬಂಧಿಸಿದಂತೆ 1942ರಿಂದ 2019ರವರೆಗೆ ಯಾವುದೇ ವಹಿವಾಟು ನಡೆದಿಲ್ಲ. ಆದರೆ ಆ ಬಳಿಕ ಭೂಮಿ ಪರಭಾರೆಯಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಉಲ್ಲಾಸ್‌ ಮತ್ತು ರಾಜಸ್ವ ನಿರೀಕ್ಷಕರಾದ ಆನಂದ್‌ ದೂಳಪ್ಪ ಅವರು ಪರಿಶೀಲನೆ ನಡೆಸದೇ ಯಾವುದೇ ಆಕ್ಷೇಪಣೆಗಳನ್ನು ವ್ಯಕ್ತಪಡಿಸದೇ ಖಾತೆ ಅಂಗೀಕರಿಸಿರುವುದು ತನಿಖೆಯಿಂದ ದೃಢಪಟ್ಟಿದೆ. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಅದರಂತೆ ಅಧಿಕಾರಿಗಳ ವಿರುದ್ಧವೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಅಯ್ಯನ‍ಪುರ ಶಿವಕುಮಾರ್‌ ಆಗ್ರಹಿಸಿದರು. 

ತಡರಾತ್ರಿ ಎಫ್‌ಐಆರ್‌ ದಾಖಲು

ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ತನಿಖಾ ಸಮಿತಿಯ ಶಿಫಾರಸಿನಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಅವರು ಶುಕ್ರವಾರ ಸಂಜೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆ ನಡೆಸಿರುವ ಆರೋಪದ ಮೇರೆಗೆ ಪೊಲೀಸರು 14 ಮಂದಿಯ ವಿರುದ್ಧ ಶುಕ್ರವಾರ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಸರ್ವೆ ನಂಬರ್‌ 295/4ಸಿ 295/4ಡಿ 295/4ಎಫ್‌ ಹಿಸ್ಸಾಗಳಲ್ಲಿ ತಲಾ ಎಂಟು ಗುಂಟೆ ಜಮೀನನ್ನು ಅಕ್ರಮವಾಗಿ ಕ್ರಯ ಹಕ್ಕು ಬದಲಾವಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ದೂರು ನೀಡಲಾಗಿದೆ.  ‘ಸರ್ವೆ ನಂಬರ್ 295/4ಸಿ ಮತ್ತು 4ಡಿಯಲ್ಲಿರುವ ಜಮೀನುಗಳನ್ನು ತಲಾ ₹ 13.16 ಲಕ್ಷಕ್ಕೆ  295/4ಡಿಯಲ್ಲಿರುವ ಜಮೀನನ್ನು ₹13.30 ಲಕ್ಷಕ್ಕೆ ಕ್ರಯ ಮಾಡಲಾಗಿದೆ’ ಎಂದು ಮಲ್ಲಿಕಾರ್ಜುನ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಎಫ್‌ಐಆರ್‌ನಲ್ಲಿ ಬೆಂಗಳೂರಿನ ನಿವಾಸಿ ಲಕ್ಷ್ಮಿ ನಾರಾಯಣಪ್ಪ ತಾಲ್ಲೂಕಿನ ಕುದೇರು ಗ್ರಾಮದ ಹರೀಶ ಕೆ.ಬಿ ಚಾಮರಾಜನಗರದ ಶಂಕರಪುರದ ನಿವಾಸಿ ಗೋವಿಂದರಾಜು ಸಿ.ಎಸ್‌ ಅರಕಲಗೂಡಿನವರಾದ ಕೃಷ್ಣಮೂರ್ತಿ ಎಸ್‌. ಶರ್ಮ ಎಚ್‌.ಕೆ. ವಾಸುದೇವು ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಚಾಮರಾಜನಗರ ಭ್ರಮರಾಂಬ ಬಡಾವಣೆಯ ಅಶ್ವತ್‌ ನಾರಾಯಣ ಚಾಮರಾಜನಗರದ ಹೌಸಿಂಗ್‌ ಬೋರ್ಡ್‌ ಕಾಲೊನಿಯ ಮಹೇಶ್‌ ಕುಮಾರ್‌ ಬಿ. ಚಾಮರಾಜನಗರ ಕೆಎಚ್‌ಬಿ ಕಾಲೊನಿಯ ಡೈಸಿ ಚಾಮರಾಜನಗರದ ಅಂಬೇಡ್ಕರ್‌ ಬಡಾವಣೆಯ ದಿಲೀಪ್‌ ಕುದರ್‌ ಸಿ.ಕೆ. ಶ್ರೀನಿಧಿ ಕುದರ್‌ ಸಿ.ಎಸ್‌ ಚಾಮರಾಜನಗರದ ಶಿವರಾಜು ಹಾಗೂ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷ (ಎಸ್‌.ನಂಜುಂಡಸ್ವಾಮಿ) ಮತ್ತು ಕಾರ್ಯದರ್ಶಿ (ರಾಜಗೋಪಾಲ್‌) ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT