ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ | ಬಾಳೆಯೊಂದಿಗೆ ಅಂತರ ಬೆಳೆ; ಆದಾಯ ಖಚಿತ

ಕೋಸು , ಈರುಳ್ಳಿ, ಮಂಗಳೂರು ಸೌತೆ ಬೆಳೆಯುವ ಸಂತೇಮರಹಳ್ಳಿಯ ಕುಮಾರ್‌
Last Updated 12 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಬಾಳೆಯ ಜೊತೆಗೆ ಅಂತರ್ ಬೆಳೆಯಾಗಿ ವಿವಿಧ ಬೆಳೆಗಳನ್ನು ಬೆಳೆದು ವ್ಯವಸಾಯದಲ್ಲಿ ಯಶಸ್ವಿಯಾಗಿದ್ದಾರೆ ಸಂತೇಮರಹಳ್ಳಿಯ ಕುಮಾರ್.

ವಾರ್ಷಿಕ ಬೆಳೆ ಬಾಳೆಯ ಜೊತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕೋಸು, ಮಂಗಳೂರು ಸೌತೆ, ಈರುಳ್ಳಿ ಬೆಳೆಗಳನ್ನು ಬೆಳೆಯುತ್ತಾ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಕುಮಾರ್‌ ಅವರು ಎರಡೂವರೆ ಎಕರೆಯಲ್ಲಿ ನೇಂದ್ರ ಬಾಳೆ ಹಾಕಿದ್ದಾರೆ. ಈ ಪೈಕಿ ಎರಡು ಎಕರೆಯಲ್ಲಿ ಅಂತರಬೆಳೆಯಾಗಿ ಎಲೆಕೋಸು (ಕ್ಯಾಬೇಜ್‌) ಬೆಳೆದು ಈಗ ಕಟಾವು ಹಂತಕ್ಕೆ ಬಂದಿದೆ.

ನರ್ಸರಿಯಲ್ಲಿ 1 ಪೈರಿಗೆ 60 ಪೈಸೆಯಂತೆ 35 ಸಾವಿರ ಪೈರಿಗೆ ₹20 ಸಾವಿರ ನೀಡಿ ನಾಟಿ ಮಾಡಿದ್ದಾರೆ. ಹೈನುಗಾರಿಕೆಯನ್ನೂ ಇವರು ಮಾಡುವುದರಿಂದ ಕೊಟ್ಟಿಗೆ ಗೊಬ್ಬರವನ್ನು ವ್ಯವಸಾಯಕ್ಕೆ ಹೆಚ್ಚು ಬಳಸಿ ಅಲ್ಪ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರಕ್ಕೆ ಹಣ ಖರ್ಚು ಮಾಡಿದ್ದಾರೆ. 90 ದಿನಗಳ ಅವಧಿಯ ಈ ಬೆಳೆಗೆ ಯಾವ ಸಮಯದಲ್ಲಿ ಗೊಬ್ಬರ ಹಾಕಬೇಕು. ಔಷಧ ಯಾವ ಸಮಯದಲ್ಲಿ ಸಿಂಪಡಿಸಬೇಕು. ಎಂಬುದಕ್ಕೆ ಆಗಾಗ್ಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದು ವ್ಯವಸಾಯ ಮುಂದುವರಿಸುತ್ತಾರೆ.

ಈವರೆಗೂ ಮೋಹನ್‌ ಅವರು ಕೋಸು ಬೆಳೆಯಲು ₹50 ಸಾವಿರ ಖರ್ಚು ಮಾಡಿದ್ದಾರೆ. ಫಸಲು ಚೆನ್ನಾಗಿದ್ದು, ಮೂರು ತಿಂಗಳಿಗೆ ಸರಿಯಾಗಿ ಕಟಾವು ಹಂತಕ್ಕೆ ಬಂದಿದೆ. ಒಂದು ಕೋಸು ಒಂದು ಕೆಜಿಯಿಂದ ಒಂದು ಮುಕ್ಕಾಲು ಕೆಜಿವರೆಗೆ ತೂಗುತ್ತದೆ. ಕೆಜಿಗೆ ₹12ರಂತೆ ಟನ್ ಕೋಸಿಗೆ ಸರಾಸರಿ ₹12 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ.

‘ಎರಡು ಎಕರೆಯಲ್ಲಿ 30ರಿಂದ 35 ಟನ್‌ವರೆಗೆ ಇಳುವರಿ ಬರುತ್ತದೆ. ₹3ಲಕ್ಷದವರೆಗೂ ಆದಾಯ ಸಿಗುತ್ತದೆ. ಈ ಭಾಗದಲ್ಲಿ ಹೆಚ್ಚಾಗಿ ತಮಿಳುನಾಡಿನಿಂದ ಬಂದು ಕೋಸು ಖರೀದಿಸುತ್ತಾರೆ’ ಎಂದು ಕುಮಾರ್‌ ಹೇಳಿದರು.

ಕೋಸು ಕಟಾವು ಆದ ನಂತರ ಗಿಡಗಳನ್ನು ಜಮೀನಿನಲ್ಲಿಯೇ ಬಿಟ್ಟು ಹಸಿರೆಲೆ ಗೊಬ್ಬರವಾಗಿ ಬಳಸಲಾಗುತ್ತದೆ. ನಂತರ ಮುಂದಿನ ಬೆಳೆಗೆ ಈರುಳ್ಳಿ, ಮಂಗಳೂರು ಸೌತೆ ಬೆಳೆಗಳನ್ನು ಕುಮಾರ್ ಬೆಳೆಯುತ್ತಾರೆ.

ಹೈನುಗಾರಿಕೆಯಲ್ಲೂ ಯಶಸ್ಸು

ಕುಮಾರ್‌ ಅವರು ಕೃಷಿ ಅಲ್ಲದೆ ಹೈನುಗಾರಿಕೆಯನ್ನು ಮಾಡುತ್ತಾರೆ. ಎರಡು ಹಸುಗಳನ್ನು ಸಾಕಿಕೊಂಡಿದ್ದಾರೆ.

ಬೆಳಿಗ್ಗೆಯಿಂದ ಸಂಜೆವರೆಗೆ ಜಮೀನಿನಲ್ಲಿಯೇ ಹಸುಗಳಿಗೆ ಆರೈಕೆ ಮಾಡುತ್ತಿದ್ದಾರೆ. ಜಮೀನಿನ ಅಂಚಿನ ಪ್ರದೇಶಗಳಲ್ಲಿ ಮೇವನ್ನು ಬೆಳೆಯುತ್ತಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ 6ರಿಂದ 7ಲೀಟರ್‌ವರೆಗೆ ಹಾಲು ಕರೆದು ಡೇರಿಗೆ ಹಾಕುತ್ತಾರೆ. ಹೈನುಗಾರಿಕೆಯಲ್ಲಿ ತಂದೆ ಇವರಿಗೆ ಸಹಾಯ ಮಾಡುತ್ತಾರೆ.

‘ವಾರ್ಷಿಕ ಬೆಳೆ ಒಂದನ್ನೇ ನಂಬಿಕೊಂಡರೆ ಕಷ್ಟ. ಜತೆಗೆ ಅಂತರ್ ಬೆಳೆಗಳನ್ನು ಬೆಳೆದು ಪ್ರತಿ ಮೂರು ತಿಂಗಳಿಗೊಮ್ಮೆ ಆದಾಯ ಕಾಣುತ್ತಿದ್ದೇನೆ. ಇದರಿಂದ ಯಶಸ್ಸು ಸಿಕ್ಕಿದೆ’ ಎಂದು ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT