ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಮಿಶ್ರಬೆಳೆಯೊಂದಿಗೆ ಅರಣ್ಯ ಕೃಷಿಗೂ ಒತ್ತು

ಸೇವೆಯಿಂದ ನಿವೃತ್ತರಾದರೂ ಬಿಡದ ಕೃಷಿಯ ಮೋಹ, ಮರಳಿ ಊರಿಗೆ ಬಂದ ಶಿವಮಲ್ಲಪ್ಪ
Last Updated 31 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಹನೂರು: ಬ್ಯಾಂಕ್ ಕೆಲಸದಿಂದ ನಿವೃತ್ತಿಯಾದ ಮೇಲೆ ಅವರು ವಿಶ್ರಾಂತಿ ಜೀವನ ನಡೆಸಬಹುದಿತ್ತು. ಆದರೆ ಕುಲ ಕಸುಬು ಕೃಷಿ ಅವರನ್ನು ಆಕರ್ಷಿಸಿತು. ಅವರೀಗ ಒಬ್ಬ ಉತ್ತಮ ರೈತರಾಗಿ ಹೊರಹೊಮ್ಮಿದ್ದಾರೆ.

ತಾಲ್ಲೂಕಿನ ಕಣ್ಣೂರು ಗ್ರಾಮದ ಎಂ.ಶಿವಮಲ್ಲಪ್ಪ ಅವರು ಬೆಂಗಳೂರಿನ ಖಾಸಗಿ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದವರು. ನಿವೃತ್ತಿಯಾದ ಬಳಿಕ ವಿಶ್ರಾಂತ ಜೀವನ ನಡೆಸಬಹುದಾಗಿದ್ದ ಅವರು ಮರಳಿ ಗ್ರಾಮಕ್ಕೆ ಬಂದು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇರುವ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದ ಮೂಲ ಕಂಡುಕೊಂಡಿದ್ದಾರೆ.

10 ಎಕರೆ ಜಮೀನು ಹೊಂದಿರುವ ಶಿವಮಲ್ಲಪ್ಪ ಅವರು ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ತೆಂಗು, ಶ್ರೀಗಂಧ, ತೇಗ, ಬಾಳೆ, ಈರುಳ್ಳಿ ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ. ಕೂಲಿಯವರ ಜೊತೆಗೆ ಸ್ವತಃ ತಾವೇ ಕೆಲಸ ಮಾಡುತ್ತಾರೆ.

ಇರುವ ಜಮೀನನ್ನು ವಿಭಾಗಗಳನ್ನಾಗಿ ಮಾಡಿ 600 ತೇಗದ ಗಿಡ, 200 ಶ್ರೀಗಂಧ ಹಾಗೂ 100ಕ್ಕೂ ಹೆಚ್ಚು ಮಹಾಗನಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇದರ ಮಧ್ಯೆ ತರಕಾರಿಗಳನ್ನು ಬೆಳೆದು ದಿನದ ಖರ್ಚನ್ನೂ ಸರಿದೂಗಿಸುತ್ತಿದ್ದಾರೆ. ಕೃಷಿ ಬೆಳೆಗಳ ಜತೆಗೆ ಅರಣ್ಯದ ಬೆಳೆಗಳನ್ನು ಬೆಳೆದು ಮುಂದಿನ ತಲೆಮಾರಿಗೆ ಆದಾಯ ತಂದುಕೊಡುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ.

ಬಾಲ್ಯಾಸಕ್ತಿ: ಶಿವಮಲ್ಲಪ್ಪ ಅವರಿಗೆ ಬಾಲ್ಯದಿಂದಲೇ ಕೃಷಿಯ ಮೇಲೆ ಆಸಕ್ತಿ. ಆ ಆಸಕ್ತಿಯು ಬ್ಯಾಂಕ್ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಮತ್ತೆ ಗ್ರಾಮಕ್ಕೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಇದಕ್ಕಾಗಿ ಬೆಂಗಳೂರಿನಲ್ಲಿರುವ ಮನೆಯನ್ನು ಖಾಲಿ ಮಾಡಿ ಗ್ರಾಮದಲ್ಲಿ ಬಂದು ನೆಲೆಸಿದ್ದಾರೆ.

’ಎಷ್ಟೇ ದುಡಿದರೂ, ಏನೇ ಕೆಲಸ ಮಾಡಿದರೂ ಕೊನೆಗೆ ಆತ್ಮತೃಪ್ತಿ ನೀಡುವುದು ಕೃಷಿ ಮಾತ್ರ. ಇದನ್ನರಿತು ನನ್ನ ಆತ್ಮತೃಪ್ತಿಗಾಗಿ ಕೃಷಿ ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ ಅವರು.

ಆದಾಯಕ್ಕಾಗಿ ಹೈನುಗಾರಿಕೆ: ಸಮಗ್ರ ಕೃಷಿ ಮಾಡುತ್ತಿರುವ ಶಿವಮಲ್ಲಪ್ಪ ಆದಾಯಕ್ಕಾಗಿ ಹೈನುಗಾರಿಕೆ ಮಾಡಲು ಮುಂದಾಗಿದ್ದಾರೆ. ಕುರಿಸಾಕಾಣಿಕೆಗೆ ಒತ್ತು ನೀಡಿರುವ ಅವರು ಈಗಾಗಲೇ ವಿವಿಧೆಡೆಯಿಂದ ಬಗೆ ಬಗೆಯ ತಳಿಯ ಕುರಿಗಳನ್ನು ತಂದು ಸಾಕಲು ಆರಂಭಿಸಿದ್ದಾರೆ. ಇದಕ್ಕಾಗಿ ಜಮೀನಿನಲ್ಲಿ ಕುರಿ ಶೆಡ್ ನಿರ್ಮಿಸಿದ್ದಾರೆ.

ಮುಂದಿನ ತಲೆಮಾರಿಗೆ ಆದಾಯ
ಶಿವಮಲ್ಲಪ್ಪ ಅವರು ಅರಣ್ಯ ಕೃಷಿಗೂ ಒತ್ತು ನೀಡುತ್ತಿದ್ದಾರೆ.

‘ನಿವೃತ್ತಿ ಹೊಂದಿದ ನಂತರ ವಿಶ್ರಾಂತಿ ಜೀವನ ನಡೆಸಬಹುದಿತ್ತು. ಆದರೆ, ಬಾಲ್ಯದಿಂದಲೇ ಬೆಳೆದ ಕೃಷಿ ಮೇಲಿನ ಆಸಕ್ತಿ ಮತ್ತೆ ನನ್ನನ್ನು ಗ್ರಾಮಕ್ಕೆ ಮರಳಿ ಈ ಕೆಲಸ ಮಾಡಲು ಪ್ರೇರೇಪಿಸಿದೆ. ಜಮೀನಿನಲ್ಲಿ ಮರಗಳನ್ನು ಬೆಳೆದರೆ ಅದು ಮುಂದಿನ ತಲೆಮಾರಿನವರಿಗೆ ಆದಾಯ ತಂದುಕೊಡಲಿದೆ. ಇದರ ಜತೆಗೆ ಅಷ್ಟು ಮರಗಳನ್ನು ಬೆಳೆಸುವುದರಿಂದ ಪರಿಸರಕ್ಕೆ ಆಮ್ಲಜನಕವೂ ಹೇರಳವಾಗಿ ದೊರೆತಂತಾಗುತ್ತದೆ’ ಎಂದು ಶಿವಮಲ್ಲಪ್ಪ ಹೇಳಿದರು.

‘ಮಗ ಬೆಂಗಳೂರಿನ ಕಂಪನಿಯೊಂದರಲ್ಲಿ ಏರೋಸ್ಪೇಸ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಅವನಿಗೂ ಕೃಷಿ ಮೇಲೆ ಹೆಚ್ಚಿನ ಆಸಕ್ತಿ ಇದೆ.ಮುಂದಿನ ದಿನಗಳಲ್ಲಿ ಅವನೂ ಕೆಲಸ ಬಿಟ್ಟು ಗ್ರಾಮಕ್ಕೆ ಬಂದು ಕೃಷಿಯಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡಿದ್ದಾನೆ. ಗ್ರಾಮೀಣ ಭಾಗದಲ್ಲಿ ಬೆಳೆದಿರುವ ನಾವು ಕೃಷಿಯನ್ನು ನಂಬಿ ಬದುಕುತ್ತಿದ್ದೆವು. ಈಗ ಅದನ್ನು ಆತ್ಮತೃಪ್ತಿಗಾಗಿ ಮಾಡುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT