ಗುರುವಾರ , ಸೆಪ್ಟೆಂಬರ್ 23, 2021
21 °C
ಯಳಂದೂರು: ವಿದ್ವತ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಸರ್ಕಾರಿ ಪ್ರೌಢ ಶಾಲೆಗಳಿಗೆ ಅಳವಡಿಕೆ

ಯಳಂದೂರು: ಇ-ಪಠ್ಯ ಕಲಿಕೆಗೆ ಆಲ್‌ ಇನ್‌ ಪ್ರೊಜೆಕ್ಟರ್‌

ನಾ,ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಕೋವಿಡ್ ನಂತರದ ಕಲಿಕೆ ಬಹು ಆಯಾಮಗಳಲ್ಲಿ ನಡೆಯುತ್ತಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಹಂತದ ವಿದ್ಯಾಭ್ಯಾಸ ಈಗ ಆಫ್‌ಲೈನ್‌ನಿಂದ ಆನ್‌ಲೈನ್‌ನತ್ತ ಹೊರಳಿದೆ. ಬದಲಾದ ಕಾಲದಲ್ಲಿ ಶಾಲೆಗಳು ನವ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೋಧನೆಗೆ ಮುಂದಡಿ ಇಟ್ಟಿವೆ. ಸರ್ಕಾರಿ ಶಾಲೆಗಳು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಈಗ ಸರ್ಕಾರಿ ಶಾಲೆಗಳಲ್ಲೂ 'ಆಲ್ ಇನ್ ಪ್ರೊಜೆಕ್ಟರ್' ಸೌಲಭ್ಯ ಬಂದಿವೆ.

ಡಿಜಿಟಲ್ ಕಲಿಕೆ ಹೊಸ ಶಿಕ್ಷಣ ನೀತಿ-2020ವು ಕಲಿಕೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ವೇದಿಕೆ ಸೃಷ್ಟಿಸಿದೆ. ತಾಲ್ಲೂಕಿನ  ಪ್ರೌಢಶಾಲೆಗಳಿಗೆ ಕಂಪ್ಯೂಟರ್, ಪ್ರೊಜೆಕ್ಟರ್ ಮತ್ತು ವಿಜ್ಞಾನ ಮಾಡೆಲ್ ಸೇರಿದಂತೆ ನೂರಾರು ಕಲಿಕೋಪಕರಣ ಒದಗಿಸಲಾಗಿದೆ. 

ಕಲಿಕೆಗೆ ಹೇಗೆ?: ವಿದ್ವತ್ ಕಂಪನಿ 'ವಿದ್ವಾನ್ ಆಲ್ ಇನ್ ಪ್ರೊಜೆಕ್ಟರ್'ಗಳನ್ನು ಶಾಲೆಗಳಿಗೆ ಪರಿಚಯಿಸಿದೆ. ಇದರಲ್ಲಿ ಕೇಬಲ್ ಮತ್ತು ಇನ್‌ಬಿಲ್ಟ್ ಕೀ ಬೋರ್ಡ್ ಮತ್ತು ಮೌಸ್ ಇದ್ದು, ಪಠ್ಯ ಪೂರಕ ಮಾಹಿತಿಯನ್ನು ಇನ್‌ಸ್ಟಾಲ್‌ ಮಾಡಲಾಗಿದೆ. ಜಾಮಿಟ್ರಿಕಲ್ ಟೂಲ್ಸ್, ಇಮೇಜ್ ಟೂಲ್ಸ್, ಗ್ರಾಫ್‌, ಚಿತ್ರ, ಭೂಪಟ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶ ಇದರಲ್ಲಿ ಇದೆ. 

ಪ್ರೊಜೆಕ್ಟರ್ ಚಾಲೂ ಮಾಡಿ ವಾಲ್ ಇಲ್ಲವೇ ಬೋರ್ಡ್ ಮೂಲಕ ಪ್ರದರ್ಶಿಸಬಹುದು. ಹೆಚ್ಚಿನ ಬೆಳಕು ಇರುವ ಸ್ಥಳಗಳಲ್ಲೂ ಚಿತ್ರ ಮತ್ತು ವಿಡಿಯೊ ಸ್ಪಷ್ಟವಾಗಿ ಮೂಡುತ್ತದೆ. ಸ್ಟೈಲಿಷ್‌ ಪೆನ್ ಬಳಸಿ ಬರವಣಿಗೆ ಮಾಡಬಹುದು. ಇಲ್ಲವೇ ಬೇಕಾದ ವಿಷಯಗಳ ಡೌನ್‌ ಲೋಡ್‌  ಮಾಡಿಕೊಳ್ಳಬಹುದು.

‘ವಿದ್ಯಾರ್ಥಿಗಳು ಪ್ರೊಜೆಕ್ಟರ್ ಬಳಸಿ ಸೆಮಿನಾರ್ ಮಾಡಬಹುದು. ವಿಷಯ ಮನನ ಮತ್ತು ಪುನರಾವರ್ತನೆಗೆ ಇದು ಸಹಕಾರಿ. ಪುಸ್ತಕದಿಂದ ಹೊರತಾದ ಆದರೆ, ಪಠ್ಯ ಪೂರಕ ಚಟುವಟಿಕೆಗಳನ್ನು ತಿಳಿಯಲು ಆನ್‌ಲೈನ್‌ ಬಳಸಿ ಗೂಗಲ್ ಮತ್ತು ಯೂಟ್ಯೂಬ್ ಸಂಪರ್ಕ ಪಡೆಯಲು ಸಾಧ್ಯವಾಗಿದೆ. ವ್ಯಾಟ್ಸ್‌ ಆ್ಯಪ್‌ ಮತ್ತು ಟೆಲಿಗ್ರಾಂಗಳಲ್ಲಿ ಸಂಗ್ರಹವಾದ ವಿಷಯಗಳನ್ನು ಪರದೆಯಲ್ಲಿ ವೀಕ್ಷಿಸುವ ಅವಕಾಶ ಇದರಲ್ಲಿ ಇರುವುದರಿಂದ ಪರಿಪೂರ್ಣ ಕಲಿಕೆ ಸಾಧ್ಯವಾಗುತ್ತದೆ’ ಎಂದು ಬಿಇಒ ವಿ.ತಿರುಮಲಾಚಾರಿ ಅವರು ಹೇಳಿದರು.

‘ವಿದ್ವತ್ ಮೂಲಕ ಪರಿಣಾಮಕಾರಿಯಾಗಿ ಕಲಿಸಬಹುದು. ಚಿತ್ರ, ವಿಡಿಯೊ ಪ್ರದರ್ಶಿಸಿ ಅಭ್ಯಾಸ ಮಾಡಿಸುವುದರಿಂದ ವಿಶೇಷ ಮಕ್ಕಳಿಗೂ ಮನನ ಸಾಧ್ಯ. ಇದರಿಂದ ಮಕ್ಕಳ ಕ್ರಿಯಾಶೀಲ ಚಟುವಟಿಕೆಗೆ ನೆರವು ಒದಗಿಸುತ್ತದೆ’ ಎಂದು ಇರಸವಾಡಿ ಪ್ರೌಢಶಾಲೆಯ ಶಿಕ್ಷಕಿಯರಾದ
ಖೈರುನ್ನಿಸಾ ಮತ್ತು ಕಾವ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಡಿಯೊ, ಆಡಿಯೊ ಆಧರಿತ ಬೋಧನೆ ಸಾಧ್ಯ’

‘ಒಂದು ಆನ್‌ ಇನ್‌ ಪ್ರೊಜೆಕ್ಟರ್‌ಗೆ ₹1.75 ಲಕ್ಷ ವೆಚ್ಚವಾಗುತ್ತದೆ. ಇಂತಹ 20 ಡಿಜಿಟಲ್ ಪ್ರೊಜೆಕ್ಟರ್‌ಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಲಾಗಿದೆ. ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಸ್ವಲ್ಪ ಹಣ ನೀಡಲಾಗಿದ್ದು, ವಿದ್ವತ್ ಕಂಪನಿಯೂ ನೆರವು ನೀಡಿದೆ. ಕಂಪನಿಯ  ಸಹಭಾಗಿತ್ವದಲ್ಲಿ ಪ್ರಥಮ ಬಾರಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಇ-ಪಠ್ಯ ಬೋಧನೆ ಸಾಧ್ಯವಾಗಿದೆ. ಇದು ಶಿಕ್ಷಕರ ಮೇಲಿನ ಒತ್ತಡವನ್ನು ತಗ್ಗಿಸಿ, ಭಾಷಾ ವಿಷಯಗಳನ್ನು ಸರಳವಾಗಿ ಕಲಿಯಲು ಹಾಗೂ ವಿಡಿಯೊ ಮತ್ತು ಆಡಿಯೊ ಮೂಲಕ ಸಂವಹನ ನಡೆಸಲು ಸಾಧ್ಯವಾಗಿಸಿದೆ. ವಿದೇಶಗಳಲ್ಲಿ ಅಳವಡಿಸಿ ಕಲಿಸುವ ತಂತ್ರಜ್ಞಾನವನ್ನು ನಮ್ಮ ಸರ್ಕಾರಿ ಶಾಲೆಗಳ ಮಕ್ಕಳಿಗೂ ಮುಟ್ಟಿಸುವ ಉದ್ದೇಶ ಹೊಂದಲಾಗಿದೆ’ ಎಂದು ಶಾಸಕ ಎನ್.ಮಹೇಶ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು