ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಜನ

ಬೇಗ ಸಿಕ್ಕಿದ್ದು ಅದೃಷ್ಟವಷ್ಟೇ, ಏಟಾಗಿದ್ದು ಅನುಕೂಲವಾಯಿತು–ಬಾಲಚಂದ್ರ
Last Updated 19 ಮೇ 2020, 20:00 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕುರೆ ವಲಯದಲ್ಲಿ 20ಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯುತ್ತಿದ್ದಂತೆಯೇ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಒಂದೂವರೆ ತಿಂಗಳಿನಿಂದ ಹುಲಿಯ ಉಪಟಳದಿಂದಚಿರಕನಹಳ್ಳಿ, ಕಡಬೂರು, ಕುಂದುಕೆರೆ, ಮಾಲಾಪುರ, ಬೊಮ್ಮನಹಳ್ಳಿ, ವಡ್ಡಗೆರೆ ಭಾಗದ ಜನರು ಹೈರಾಣರಾಗಿದ್ದರು.

ಹುಲಿ ಜಾನುವಾರುಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದುದರಿಂದ ಜಾನುವಾರುಗಳನ್ನು ಮೇಯಲು ಬಿಡಲು, ಕೃಷಿ ಚಟುವಟಿಕೆಗಳಿಗಾಗಿ ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದರು. ಅಪಾಯ ತಂದೊಡ್ಡಿರುವ ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಅರಣ್ಯ ಇಲಾಖೆ ಹುಲಿಯನ್ನು ಕಾಡಿನೊಳಕ್ಕೆ ಓಡಿಸಲು ವಾರಕ್ಕೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿತ್ತು. ಆದರೆ, ಅದರಲ್ಲಿ ಯಶಸ್ವಿಯಾಗಲಿಲ್ಲ. ಕಳೆದ ವಾರ ‌ಅರಣ್ಯ ಸಚಿವ ಆನಂದ್‌ ಸಿಂಗ್‌ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು.

ಅದರಂತೆ ಸೋಮವಾರ ಅಭಿಮನ್ಯು ಸೇರಿದಂತೆ ಆರು ಸಾಕಾನೆಗಳನ್ನು ಕರೆಸಿ, ವಿರಾಜಪೇಟೆಯಿಂದ ಪಶು ವೈದ್ಯರು ಹಾಗೂ ಅರಿವಳಿಕೆ ತಜ್ಞರನ್ನು ಕರೆಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ನಾಲ್ಕರಿಂದ ಐದು ವರ್ಷ ವಯಸ್ಸಿನ ಗಂಡು ಹುಲಿಯನ್ನು ಸೆರೆ ಹಿಡಿಯಲು ಇಲಾಖೆ ಯಶಸ್ವಿಯಾಗಿದೆ.

‘ಗೋಪಾಲಸ್ವಾಮಿ ಬೆಟ್ಟ ವಲಯದ ಚೌಡಹಳ್ಳಿ ಗ್ರಾಮದ ಬಳಿಕ, ನಮ್ಮ ಭಾಗದಲ್ಲಿ ಹುಲಿ ಹಾವಳಿ ಹೆಚ್ಚಾಗಿ 20ಕ್ಕೂ ಹೆಚ್ಚು ರೈತರು ನಷ್ಟ ಅನುಭವಿಸಿದ್ದಾರೆ. ಇಲಾಖೆ ಕೊಡುವ ಪರಿಹಾರ ಮೊತ್ತದಿಂದ ಹಸು, ಕರುಗಳನ್ನು ಖರೀದಿಸಲು ಆಗುವುದಿಲ್ಲ. ಈಗ ಹುಲಿಯನ್ನು ಸೆರೆ ಹಿಡಿದಿರುವುದರಿಂದ ಜನರಿಗೆ ಅನುಕೂಲ ಆಗಿದೆ. ಜಾನುವಾರು ಮೇಲೆ ದಾಳಿ ಮಾಡುತ್ತಿದ್ದ ಹುಲಿಯನ್ನೇ ಸೆರೆ ಹಿಡಿಯಲಾಗಿದೆಯೇ ಎಂಬುದನ್ನು ಇಲಾಖೆ ಮತ್ತೊಮ್ಮೆ ದೃಢಪಡಿಸಬೇಕು’ ಎಂದು ಕುಂದುಕೆರೆ ಗ್ರಾಮದ ರೈತ ಮುಖಂಡ ಸಂಪತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಪಶುವೈದ್ಯ ಡಾ.ನಾಗರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್, ವಲಯ ಅರಣ್ಯ ಅಧಿಕಾರಿಗಳಾದ ನವೀನ್ ಕುಮಾರ್, ಮಹದೇವ್, ಮಂಜುನಾಥ್ ಭಾಗಿಯಾಗಿದ್ದರು.

ಹುಲಿ ಸೆರೆಯಾದ ಬಳಿಕ ಶಾಸಕ ಸಿ.ಎಸ್.ನಿರಂಜನ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವಿಚಾರವನ್ನು ಅರಣ್ಯ ಸಚಿವರ ಗಮನಕ್ಕೆ ತಂದು ಚಿಕಿತ್ಸೆ ನೀಡಿ ಬೇರೆ ಕಾಡಿಗೆ ಬಿಡುವಂತೆ ಮನವಿ ಮಾಡಿದರು.

ಒಂದೂವರೆ ದಿನದಲ್ಲಿ ಮುಗಿದ ಕಾರ್ಯಾಚರಣೆ
ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಗೋಪಾಲಸ್ವಾಮಿ ಬೆಟ್ಟ ವಲಯದ ಚೌಡಹಳ್ಳಿ ವ್ಯಾಪ್ತಿಯಲ್ಲಿ ಇಬ್ಬರು ರೈತರು ಹಾಗೂ 15ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದು ಹಾಕಿದ್ದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ದೊಡ್ಡ ಸಾಹಸವನ್ನೇ ಮಾಡಿತ್ತು.

60ಕ್ಕೂ ಹೆಚ್ಚು ಸಿಬ್ಬಂದಿ, ಏಳು ಆನೆಗಳು, 200ಕ್ಕೂ ಹೆಚ್ಚು ಕ್ಯಾಮೆರಾ, ಡ್ರೋನ್‌ ಕ್ಯಾಮೆರಾಗಳನ್ನು ಬಳಸಿ ಸತತ ಐದು ದಿನ ಕಾರ್ಯಾಚರಣೆ ನಡೆಸಲಾಗಿತ್ತು.ಅದಕ್ಕೆ ಹೋಲಿಸಿದರೆ ಈ ಹುಲಿ ಬೇಗ ಸೆರೆ ಸಿಕ್ಕಿದೆ.

‘ಹುಲಿ ಇಷ್ಟು ಬೇಗ ಸೆರೆ ಸಿಕ್ಕಿರುವುದು ಅದೃಷ್ಟ ಎಂದೇ ಹೇಳಬೇಕು. ಹುಲಿಯ ಎಡಗಾಲಿಗೆ ಗಾಯವಾಗಿದ್ದರಿಂದ ಅದಕ್ಕೆ ಓಡಾಡುವುದಕ್ಕೆ ಕಷ್ಟವಾಗುತ್ತಿತ್ತು. ಹಾಗಾಗಿ, ಬೇಗ ಸೆರೆ ಹಿಡಿಯಲು ಅನುಕೂಲವಾಯಿತು. ಚೌಡಹಳ್ಳಿಯಲ್ಲಿ ಉಪಟಳ ನೀಡುತ್ತಿದ್ದುದು ಅತ್ಯಂತ ಆರೋಗ್ಯವಾಗಿದ್ದ ಹುಲಿ. ಈ ಕಾರಣದಿಂದ ಸ್ವಲ್ಪ ಹೆಚ್ಚು ಶ್ರಮ ಹಾಕಬೇಕಾಯಿತು’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡಿಗೆ ಬಿಡುವ ಸಾಧ್ಯತೆ ಹೆಚ್ಚು
ಕಾಲಿಗೆ ಏಟಾಗಿರುವುದರಿಂದ ಚಿಕಿತ್ಸೆ ನೀಡುವುದಕ್ಕಾಗಿ ಹುಲಿಯನ್ನು ಮೈಸೂರಿನ ಮೃಗಾಲಯಕ್ಕೆ ಕಳುಹಿಸಲಾಗಿದೆ. ಗಾಯ ವಾಸಿಯಾದ ನಂತರ ಅದನ್ನು ಬೇರೆ ಕಾಡಿಗೆ ಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ಹುಲಿ ಇದುವರೆಗೆ ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಹಾಗಾಗಿ, ಅರಣ್ಯಕ್ಕೆ ಬಿಡುವುದಕ್ಕೆ ತೊಂದರೆ ಇಲ್ಲ. ಈ ಬಗ್ಗೆ ಉನ್ನತ ಅಧಿಕಾರಿಗಳು ತೀರ್ಮಾನ ಕೈಗೊಳ್ಳಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚೌಡಹಳ್ಳಿಯಲ್ಲಿ ಸೆರೆಯಾದ ಹುಲಿ ಅತ್ಯಂತ ಆರೋಗ್ಯಯುತವಾಗಿದ್ದಲ್ಲದೇ ದಷ್ಟಪುಷ್ಟವಾಗಿತ್ತು. ಹಾಗಾಗಿ ಅದನ್ನು ತಳಿ ಅಭಿವೃದ್ಧಿಯ ಉದ್ದೇಶಕ್ಕೆ ಬಳಸಲು ನಿರ್ಧರಿಸಲಾಗಿತ್ತು. ಈ ಹುಲಿಯು ಭರ್ಜರಿಯಾಗಿದೆ. ಗಾಯ ವಾಸಿಯಾದ ನಂತರ ಏನು ಮಾಡಬೇಕು ಎಂಬುದನ್ನು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ನಿರ್ಧರಿಸಲಿದ್ದಾರೆ’ ಎಂದು ಬಾಲಚಂದ್ರ ಹೇಳಿದರು.

*
ಅಭಿಮನ್ಯು ಆನೆ ನಮ್ಮ ರಾಜ್ಯಕ್ಕೆ ಸಿಕ್ಕಿದ ವರ. ಅದರ ನೇತೃತ್ವದಲ್ಲೇ ಕಾರ್ಯಾಚರಣೆ ನಡೆಯಿತು. ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ.
-ಟಿ.ಬಾಲಚಂದ್ರ, ಹುಲಿ ಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT