ಶುಕ್ರವಾರ, ಮೇ 27, 2022
21 °C
ಬೆಳಿಗ್ಗೆ ಮತ್ತು ಸಂಜೆ ಪಕ್ಷಿಗಳ ಅಧ್ಯಯನ, 300ಕ್ಕೂ ಹೆಚ್ಚು ಮಂದಿ ಭಾಗಿ

ಬಂಡೀಪುರ: ಫೆ.5ರಿಂದ 7ರವರೆಗೆ ಪಕ್ಷಿಗಳ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ 5 ರಿಂದ 7ರವರೆಗೆ ಪಕ್ಷಿಗಳ ಸಮೀಕ್ಷೆ ನಡೆಯಲಿದೆ.

18 ವರ್ಷಗಳ ಬಳಿಕ ಸಮೀಕ್ಷೆ ನಡೆಯುತ್ತಿದ್ದು, ಇ‌ದಕ್ಕಾಗಿ  ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಬಂಡೀಪುರದ 13 ವಲಯಗಳ ಸಿಬ್ಬಂದಿ, ಸ್ವಯಂ ಸೇವಕರು, ಪೊನ್ನಂಪೇಟೆಯ 20 ವಿದ್ಯಾರ್ಥಿಗಳು ಸೇರಿ 300ಕ್ಕೂ ಹೆಚ್ಚಿನ ಜನರು ಸಮೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾಲ ಬೆಳಿಗ್ಗೆ 6 ರಿಂದ 10 ಗಂಟೆ ಮತ್ತು ಸಂಜೆ 3 ರಿಂದ 6 ಗಂಟೆಯವರೆಗೆ ಪಕ್ಷಿ ಸಮೀಕ್ಷೆ ನಡೆಯಲಿದೆ. 

‘ಚಳಿಗಾಲದಲ್ಲಿ ಉತ್ತರ ಭಾರತದ ವಿವಿಧ ಕಡೆಗಳಿಂದ ಕಬಿನಿ, ನುಗು ಮತ್ತು ಬಂಡೀಪುರ ಭಾಗಗಳಿಗೆ ವಲಸೆ ಬರುವ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. ಪಕ್ಷಿ ಸಮೀಕ್ಷೆಗೆ ಬರುವವರಿಗೆ ಕಳ್ಳ ಬೇಟೆ ತಡೆ ಶಿಬಿರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಆರ್.‌ನಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

150ಕ್ಕೂ ಹೆಚ್ಚು ಪ್ರಭೇದಗಳು: ‘ಹೆಜ್ಜಾರ್ಲೆ, ಕತ್ತಲು ಗುಬ್ಬಿ, ಕರಿ ಕೆಂಬರಲು, ದೊಡ್ಡ ಬೆಳ್ಳಕ್ಕಿ, ಬಣ್ಣದ ಕೊಕ್ಕರೆ, ಕಲ್ಲುಗೊರವ, ಬುಲ್‌ಬುಲ್‌, ಬೂದುಮಂಗಟ್ಟೆ ಹಕ್ಕಿ, ಹಳದಿ ಹೂ ಗುಬ್ಬಿ, ನೀರು ಕಾಗೆ, ಹೆಮ್ಮಿಂಚುಳ್ಳಿ, ಗುಲಾಬಿ ಕೊರಳಿನ ಗಿಳಿ, ಮಡಿವಾಳ ಹಕ್ಕಿ,ಗೋವಕ್ಕಿ, ಟುವ್ವಿ ಹಕ್ಕಿ, ಬಿಳಿ ಗರುಡ, ಹಾವು ಗಿಡುಗ, ಗೀಜಗ, ತೇನೆಹಕ್ಕಿ ಬೂದಬಕ, ಕೆನ್ನೀಳಿ ಬಕ, ಚಮಚದ ಕೊಕ್ಕು, ಕಾಡು ಕಾಗೆ, ನವಿಲು, ಕವಲುತೋಕೆ ಸೇರಿದಂತೆ ಬಂಡೀಪುರದ ಅರಣ್ಯ ಪ್ರದೇಶದಲ್ಲಿ 150ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳು ಕಾಣ ಸಿಗುತ್ತವೆ’ ಎಂದು ಅವರು ಮಾಹಿತಿ ನೀಡಿದರು.

‘ಸಮೀಕ್ಷೆಯಿಂದ ಬಂಡೀಪುರದ ಅರಣ್ಯ ಪ್ರದೇಶದಲ್ಲಿ ಎಷ್ಟು ಪ್ರಭೇದ ಪಕ್ಷಿಗಳಿವೆ ಎಂಬ ನಿಖರ ಮಾಹಿತಿ ಸಿಗುತ್ತದೆ. ಅಲ್ಲದೇ, ಸ್ಥಳೀಯ ಹಾಗೂ ವಲಸೆ ಪಕ್ಷಿಗಳ ವಿವರಗಳೂ ಲಭ್ಯವಾಗಲಿವೆ’ ಎಂದು ನಟೇಶ್‌ ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು