ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹಣದಲ್ಲಿ ಚುನಾವಣೆ ಎದುರಿಸುತ್ತಿರುವ ಬಿಜೆಪಿ: ಸುರ್ಜೇವಾಲ

ಬೆಂಗಳೂರಿನಲ್ಲಿ ಪತ್ತೆಯಾದ ₹2 ಕೋಟಿ ಬಿಜೆಪಿ ಹಣ ಮೈಸೂರು, ಚಾಮರಾಜನಗರಕ್ಕೆ ಬರುತ್ತಿತ್ತು–ಆರೋಪ
Published 21 ಏಪ್ರಿಲ್ 2024, 14:39 IST
Last Updated 21 ಏಪ್ರಿಲ್ 2024, 14:39 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಿಜೆಪಿಯು ಈ ಚುನಾವಣೆಯನ್ನು ಅಕ್ರಮವಾಗಿ ಸಂಪಾದಿಸಿದ ಹಣದಿಂದ ಎದುರಿಸಲು ಬಯಸಿದೆ. ಕಾಂಗ್ರೆಸ್‌ ಪಕ್ಷವು ಐದು ಗ್ಯಾರಂಟಿ ಯೋಜನೆಗಳು ಮತ್ತು ಜನ ಕಲ್ಯಾಣದ ಬದ್ಧತೆಯ ಮೇಲೆ ಎದುರಿಸುತ್ತಿದೆ. ಜೂನ್‌ 4ರಂದು ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆದ ನಂತರ ಗ್ಯಾರಂಟಿಗಳು ರಾಷ್ಟ್ರಮಟ್ಟದಲ್ಲೂ ಜಾರಿಗೆ ಬರಲಿವೆ’ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಭಾನುವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಶನಿವಾರ ಕಾರೊಂದರಲ್ಲಿ ಬಿಜೆಪಿಗೆ ಸೇರಿದ ₹2 ಕೋಟಿ ಹಣ ಪತ್ತೆಯಾಗಿದೆ. ಕಾರಿನಲ್ಲಿದ್ದ ವೆಂಕಟೇಶ್‌ ಎಂಬ ವ್ಯಕ್ತಿ, ‘ಮೈಸೂರು ಮತ್ತು ಚಾಮರಾಜನಗರಕ್ಕೆ ಕೊಂಡು ಹೋಗುತ್ತಿದ್ದ ಹಣ’ ಎಂದು ಹೇಳಿಕೆ ನೀಡಿದ್ದಾರೆ. ಕಾರಿನಲ್ಲಿ ಎರಡು ಪತ್ರಗಳೂ ಇದ್ದು, ಅದರಲ್ಲಿ ಒಂದು ಪತ್ರದಲ್ಲಿ ಈ ಹಣ ಬಿಜೆಪಿಗೆ ಸೇರಿದ್ದು ಎಂದಿದ್ದರೆ, ಇನ್ನೊಂದು ಬ್ಯಾಂಕ್‌ ಪ್ರಮಾಣಪತ್ರವಾಗಿದ್ದು, ಮಾರ್ಚ್‌ 27ರಂದು ಬಿಜೆಪಿ ಐದು ಕೋಟಿ ನಗದನ್ನು ಕೋದಂಡರಾಮಪುರದ ಕೆನರಾ ಬ್ಯಾಂಕ್‌ನಿಂದ ಡ್ರಾ ಮಾಡಿರುವ ಮಾಹಿತಿ ಇದೆ’ ಎಂದರು. 

‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ₹50 ಸಾವಿರಕ್ಕಿಂತ ಹೆಚ್ಚು ನಗದು ಹಣವನ್ನು ತೆಗೆದುಕೊಂಡು ಹೋಗುವಂತಿಲ್ಲ. ಆದರೆ, ಬಿಜೆಪಿಯವರು ಕೋಟಿಗಟ್ಟಲೆ ಹಣ ಸಾಗಿಸುತ್ತಿದ್ದಾರೆ. ಮಾರ್ಚ್‌ 27ರಂದೇ ಹಣ ಡ್ರಾ ಮಾಡಲಾಗಿದೆ. ಹಾಗಿರುವಾಗ, ಚುನಾವಣೆಗೂ ಮುನ್ನ ಅದನ್ನು 10 ಕಿ.ಮೀ ಸಾಗಿಸಲು ಒಂದು ತಿಂಗಳು ಸಮಯಬೇಕಾ? ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್‌, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಪ್ರಶ್ನೆಗೆ ಉತ್ತರಿಸಬೇಕು’ ಎಂದರು. 

‘ಹಣ ಸಾಗಿಸುವ ವಿಚಾರದಲ್ಲಿ ಮೋದಿಯವರಿಗೆ ಮತ್ತು ಬಿಜೆಪಿಗೆ ಒಂದು ನಿಯಮ, ಸಾಮಾನ್ಯ ಜನರಿಗೆ ಬೇರೆ ನಿಯಮ ಇದೆಯೇ? ಇದು ಹಣ ಅಕ್ರಮ ವರ್ಗಾವಣೆಯ ಭಾಗವೇ? ಮೈಸೂರು ಮತ್ತು ಚಾಮರಾಜನಗರಕ್ಕೆ ಹಣವನ್ನು ಯಾಕೆ ಕಳುಹಿಸಲಾಗುತ್ತಿತ್ತು? ಯಾವ ಉದ್ದೇಶಕ್ಕೆ ಈ ಹಣವನ್ನು ಬಳಸಲಾಗುತ್ತದೆ? ಈ ಹಣ ಯಾರದ್ದು? ಹಣ ಪತ್ತೆಯಾಗಿದ್ದರೂ ಚುನಾವಣಾ ಆಯೋಗ ವಿಜಯೇಂದ್ರ, ಅಶೋಕ, ನಡ್ಡಾ ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ’ ಎಂದು ಸುರ್ಜೇವಾಲ ಪ್ರಶ್ನಿಸಿದರು. 

‘ಕಾರಿನಲ್ಲಿ ಹಣ ಪತ್ತೆಯಾದ ತಕ್ಷಣ ಆದಾಯ ತೆರಿಗೆ ಇಲಾಖೆ ಬಿಜೆಪಿಯ ರಕ್ಷಣೆಗೆ ಬಂದಿದೆ. ‘ಇದು ಬ್ಯಾಂಕ್‌ನಿಂದ ಪಡೆಯಲಾದ ಹಣವಾಗಿರುವುದರಿಂದ ಬಿಜೆಪಿಗೆ ಮರಳಿಸಿ’ ಎಂದು ರಾತ್ರಿ ಆದೇಶವನ್ನೂ ಹೊರಡಿಸಿದೆ. ಆದರೆ, ಪೊಲೀಸರು ಹಣವನ್ನು ವಶಕ್ಕೆ ತೆಗೆದುಕೊಂಡು ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ’ ಎಂದರು.  

‘ಕರ್ನಾಟಕದಲ್ಲಿ ಬಿಜೆಪಿಯು ಹಣದ ಅಕ್ರಮ ವರ್ಗಾವಣೆ ಮಾಡುತ್ತಿದೆ. ರಾಜ್ಯದ ಜನರ ಪ್ರಾಮಾಣಿಕತೆ, ನಂಬಿಕೆಗಳನ್ನು ಅದು ಖರೀದಿ ಮಾಡಲು ಹೊರಟಿದೆಯೇ’ ಎಂದು ಸುರ್ಜೇವಾಲ ಕೇಳಿದರು.   

‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳನ್ನು ಅತ್ಯಂತ ಯಶಸ್ವಿಯಾಗಿ, ಪಾರದರ್ಶಕವಾಗಿ ಅನುಷ್ಠಾನ ಮಾಡಿದೆ. ಅದೇ ಮಾದರಿಯಲ್ಲಿ ಕೇಂದ್ರದಲ್ಲೂ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದೇವೆ’ ಎಂದರು. 

‘ಯಡಿಯೂರಪ್ಪ, ವಿಜಯೇಂದ್ರ, ಬಿಜೆಪಿಯ ಡಿಎನ್‌ಎ ಬಡವರ, ಹಿಂದುಳಿದವರ, ದಲಿತರ, ಅಲ್ಪಸಂಖ್ಯಾತರ ವಿರೋಧಿ. ಗ್ಯಾರಂಟಿ ಯೋಜನೆಗಳು ಜನರಿಗೆ ಹೊರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅದು ಹೇಗೆ ಹೊರೆಯಾಗುತ್ತದೆ? ನಿಮ್ಮ ಬಳಿಯಿಂದ ಯಾರು ಹಣ ತೆಗೆದುಕೊಳ್ಳುತ್ತಾರೆ? ಸಂಬಳದಿಂದ ಕೊಡಲಾಗುತ್ತಿದೆಯೇ? ಇದು ಹೊರೆಯಲ್ಲ. ಪ್ರತಿ 1.5 ಕೋಟಿ ಮಹಿಳೆಯರು ಪ್ರತಿ ತಿಂಗಳು ₹2000 ನಗದು ಪಡೆಯುತ್ತಿದ್ದಾರೆ. ಬಿಜೆಪಿ ಇದನ್ನು ವಿರೋಧಿಸುತ್ತಿದೆ. ಅದನ್ನು ಸ್ಥಗಿತಗೊಳಿಸಲು ಬಯಸುತ್ತಿದೆ. ಆದರೆ, ಅದು ಸಾಧ್ಯವಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಐದು ವರ್ಷಗಳೂ ಮುಂದುವರಿಯುತ್ತವೆ. ಜನರ ಆಶೀರ್ವಾದದಿಂದ ಪುನರಾಯ್ಕೆಯಾದರೆ ಮತ್ತೆಯೂ ಮುಂದುವರಿಯುತ್ತದೆ’ ಎಂದರು. 

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಪಕ್ಷಕ್ಕೆ ಗೆಲುವು ತರುತ್ತದೆ ಎಂಬ ವಿಶ್ವಾಸವಿದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಸುರ್ಜೇವಾಲ, ‘ಗ್ಯಾರಂಟಿ ಯೋಜನೆಗಳು ಮಾತ್ರವಲ್ಲ, ರಾಜ್ಯದ ಜನರು ನಮ್ಮನ್ನು ಬೆಂಬಲಿಸಲಿದ್ದಾರೆ. ಕರ್ನಾಟಕದ ‌6.5 ಕೋಟಿ ಜನರು ನಮಗೆ ದೇವರು’ ಎಂದರು. 

ಯುವಕರಿಗೆ ಆದ್ಯತೆ: ‘ಈ ಬಾರಿಯ ಚುನಾವಣೆಯಲ್ಲಿ ಪಕ್ಷವು ಯುವಜನರಿಗೆ ಮಣೆ ಹಾಕಿದೆ. ರಾಜ್ಯದ 28 ಅಭ್ಯರ್ಥಿಗಳ ಪೈಕಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 14 ಮಂದಿ ಇದ್ದಾರೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಂಟು ಮಂದಿ ಇದ್ದಾರೆ. ಇದು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿಯವರ ಕಾಂಗ್ರೆಸ್‌’ ಎಂದು ಸುರ್ಜೇವಾಲ ಹೇಳಿದರು.  

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ಪುಟ್ಟರಂಗಶೆಟ್ಟಿ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಸಮಿತಿ ರಾಜ್ಯಾಧ್ಯಕ್ಷೆ ಪುಷ್ಪಅಮರನಾಥ್ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT