ಭಾನುವಾರ, ಏಪ್ರಿಲ್ 18, 2021
25 °C
ಗೋಪಿನಾಥಂ ಬಳಿ ಸಫಾರಿ ಕೇಂದ್ರಕ್ಕೆ ₹5 ಕೋಟಿ, ಬೂದಿಪಡಗದಲ್ಲಿ ಆನೆ ಶಿಬಿರ ನಿರ್ಮಾಣ, ಅರಿಸಿನ ಮಾರುಕಟ್ಟೆ ಸಮಗ್ರ ಅಭಿವೃದ್ಧಿ

ಬಜೆಟ್‌: ಜಿಲ್ಲೆಗೆ ಸಿಹಿಗಿಂತ ಕಹಿಯೇ ಹೆಚ್ಚು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಿರುವ ಬಜೆಟ್‌ನಲ್ಲಿ ಗಡಿ ಜಿಲ್ಲೆಗೆ ಹೆಚ್ಚೇನು ಕೊಡುಗೆಗಳಿಗೆ ಇಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಕಣ್ಣಿಗೆ ಕಾಣುವಂತಹ ಮೂರು ಯೋಜನೆಗಳನ್ನು ಜಿಲ್ಲೆಗೆ ಘೋಷಿಸಲಾಗಿದೆ. 

ಬಜೆಟ್‌ನ ಪೂರ್ಣವಾಗಿ ಅವಲೋಕನ ಮಾಡಿದರೆ, ಜಿಲ್ಲೆಯ ಜನರ ಪಾಲಿಗೆ ಬಜೆಟ್‌ನಲ್ಲಿ ಸಿಹಿಗಿಂತ ಕಹಿಯ ಪಾಲೇ ಹೆಚ್ಚಿದೆ. 

ಎಂದಿನಂತೆ ಜಿಲ್ಲಾ ಉಸ್ತುವಾರಿ ಸಚಿವರು, ಬಿಜೆಪಿ ಶಾಸಕರು, ಜಿಲ್ಲಾ ಬಿಜೆಪಿ ಮುಖಂಡರು ಬಜೆಟ್‌ ಅನ್ನು ಕೊಂಡಾಡಿದ್ದರೆ, ಕಾಂಗ್ರೆಸ್‌ ಪಕ್ಷದ ಶಾಸಕರು, ಮುಖಂಡರು ಟೀಕಿಸಿದ್ದಾರೆ. 

ಗಡಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸದಿದ್ದರೂ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಕೃಷಿ ಕ್ಷೇತ್ರದಲ್ಲೂ ಒಂದು ಯೋಜನೆಯನ್ನು ಘೋಷಿಸಲಾಗಿದೆ. ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆಯ ಒಂದೊಂದು ಯೋಜನೆಗಳು ಜಿಲ್ಲೆಯಲ್ಲಿ ಜಾರಿಯಾಗಲಿವೆ. 

ಉಳಿದಂತೆ ಜಿಲ್ಲಾ ಕೇಂದ್ರದ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ಕಾನೂನು ಕಾಲೇಜು, ಕೃಷಿ ಕಾಲೇಜುಗಳ ಅಭಿವೃದ್ಧಿಗೆ ಅನುದಾನ, ಕೆರೆ ತುಂಬಿಸುವ ಯೋಜನೆಗಳು, ರಸ್ತೆಗಳ ಅಭಿವೃದ್ಧಿ, ರೇಷ್ಮೆ ಉದ್ಯಮದ ಪುನಶ್ಚೇತನ, ಕೈಗಾರಿಕೆಗಳಿಗೆ ಪ್ರೋತ್ಸಾಗ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಜನರ ಜೀವನ ಮಟ್ಟ ಸುಧಾರಣೆಗೆ ಬೇಕಿದ್ದ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖವಿಲ್ಲ. ಕೋವಿಡ್‌ ಸಂಕಟದ ನಡುವೆ ಮಂಡಿಸಲಾಗುತ್ತಿರುವ ಬಜೆಟ್‌ ಬಗ್ಗೆ ಜಿಲ್ಲೆಯ ಜನರು ಹೆಚ್ಚು ನಿರೀಕ್ಷೆ ಹೊಂದಿದ್ದರು. ಆದರೆ, ಅವರ ನಿರೀಕ್ಷೆಗಳು ಹುಸಿಯಾಗಿವೆ. 

ಪರಿಸರ ಪ್ರವಾಸೋದ್ಯಮಕ್ಕೆ ಒತ್ತು: ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಹೆಚ್ಚು ಇರುವ ಕಾರಣಕ್ಕೋ ಏನೋ, ಯಡಿಯೂರಪ್ಪ ಅವರು ಪರಿಸರ ಆಧರಿತ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. 

ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ಬರುವ ಗೋಪಿನಾಥಂ ಪ್ರದೇಶದಲ್ಲಿ ವನ್ಯಜೀವಿ ಸಫಾರಿ ಒಳಗೊಂಡಂತೆ ₹5 ಕೋಟಿ ವೆಚ್ಚದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಘೋಷಿಸಿರುವುದು ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿರುವ ದೊಡ್ಡ ಕೊಡುಗೆ.

ಕಾಡುಗಳ್ಳ ವೀರಪ್ಪನ್‌ ಕಾರಣಕ್ಕೆ ಅಭಿವೃದ್ಧಿಯಿಂದ ವಂಚಿತವಾಗಿದ್ದ ಗೋಪಿನಾಥಂ ಪ್ರದೇಶ ಈಗ ಸ್ವಲ್ಪ ಪ್ರಗತಿ ಹೊಂದುತ್ತಿದೆ. ಹೊಗೆನಕಲ್‌ ಜಲಪಾತ, ಮಿಸ್ಟ್ರಿ ಟ್ರಯಲ್‌ ಕ್ಯಾಂಪ್‌, ಗೋಪಿನಾಥಂ ಅಣೆಕಟ್ಟು ಸೇರಿದಂತೆ ಸುತ್ತ ಮುತ್ತ ಪ್ರವಾಸಿತಾಣಗಳಿದ್ದು, ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಭಾಗದಲ್ಲಿ ಸಫಾರಿ ಸೇರಿದಂತೆ ಇನ್ನಿತರ ಪರಿಸರ ಸ್ನೇಹಿ ಚಟುವಟಿಕೆಗಳು ನಡೆದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ, ಆ ಪ್ರದೇಶ ಇನ್ನಷ್ಟು ಅಭಿವೃದ್ಧಿಯಾಗಬಹುದು ಎಂಬುದು ಸ್ಥಳೀಯರ ನಿರೀಕ್ಷೆ. ಇಲ್ಲಿ ಪರಿಸರ ಸ್ನೇಹಿ ಚಾರಣ ಸೌಲಭ್ಯ ಕಲ್ಪಿಸುವ ಪ್ರಸ್ತಾವವನ್ನು ಅರಣ್ಯ ಇಲಾಖೆ ಈಗಾಗಲೇ ಮಾಡಿದೆ. 

ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಬೂದಿಪಡಗದಲ್ಲಿ  ₹1 ಕೋಟಿ ವೆಚ್ಚದಲ್ಲಿ ಆನೆ ಶಿಬಿರ ನಿರ್ಮಿಸುವ ಪ್ರಸ್ತಾವವೂ ಬಜೆಟ್‌ನಲ್ಲಿದೆ. ಅರಣ್ಯ ಇಲಾಖೆಯು ಕೆ.ಗುಡಿ ವಲಯದಲ್ಲಿ ಒಂದು ಆನೆಯನ್ನು ಸಾಕುತ್ತಿದೆ. ಹೊಸದಾಗಿ ಸ್ಥಾಪನೆಗೊಳ್ಳಲಿರುವ ಆನೆ ಶಿಬಿರದ ರೂಪು ರೇಷೆಗಳು ಇನ್ನಷ್ಟೇ ತಿಳಿಯಬೇಕಿದೆ. 

ಅರಿಸಿನ ಮಾರುಕಟ್ಟೆಯ ಅಭಿವೃದ್ಧಿ: ಚಾಮರಾಜನಗರ ಎಪಿಎಂಸಿ ಆವರಣದಲ್ಲಿರುವ ಅರಿಸಿನ ಮಾರುಕಟ್ಟೆಯನ್ನು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದಕ್ಕೆ ಅನುದಾನ ಏನೂ ಬಿಡುಗಡೆ ಮಾಡಿಲ್ಲ. 

ಈಗಾಗಲೇ ನಗರದಲ್ಲಿ ಅರಿಸಿನ ಮಾರುಕಟ್ಟೆ ಇದ್ದು, ವ್ಯಾಪಾರವೂ ನಡೆಯುತ್ತಿದೆ. ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ ಒಂದು ಜಿಲ್ಲೆ–ಒಂದು ಉತ್ಪನ್ನ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಅರಿಸಿನ ಬೆಳೆಯನ್ನು ಆಯ್ಕೆ ಮಾಡಲಾಗಿ‌ದೆ. ಅರಿಸಿನಕ್ಕೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಒದಗಿಸಲು ಬಜೆಟ್‌ನಲ್ಲಿ ಒತ್ತು ನೀಡಬೇಕು ಎಂಬ ಕೂಗು ಕೂಡ ಜಿಲ್ಲೆಯಲ್ಲಿ ಕೇಳಿ ಬಂದಿತ್ತು. 

‘ಮಾರುಕಟ್ಟೆಯ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಅದಕ್ಕೆ ಅನುದಾನ ಘೋಷಿಸಿಲ್ಲ. ರೂಪು ರೇಷೆಯೂ ನಿಗದಿ ಪಡಿಸಿಲ್ಲ. ಈಗಾಗಲೇ ನಮ್ಮಲ್ಲಿ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. ಇದು ಕೇವಲ ಘೋಷಣೆಯಾಗಬಾರದು’ ಎಂದು ಹೇಳುತ್ತಾರೆ ಎಪಿಎಂಸಿ ಸದಸ್ಯ, ಅರಿಸಿನ ಬೆಳಗಾರ ಬಿ.ಕೆ.ರವಿಕುಮಾರ್‌.

52 ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಿಸುವ ಘೋಷಣೆ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಜಾಗ ಖರೀದಿಸುವ ಪ್ರಕ್ರಿಯೆ ಅರ್ಧದಲ್ಲಿ ನಿಂತಿದೆ. ಪ್ರಸ್ತಾವಿತ ಯೋಜನೆಯಲ್ಲಿ ಜಿಲ್ಲೆಯಲ್ಲೂ ನಿಲ್ದಾಣ ನಿರ್ಮಾಣವಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ. 

ತೀವ್ರ ನಿಗಾ ಘಟಕ: 19 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ ಸ್ಥಾಪಿಸುವ ಪ್ರಸ್ತಾವ ಬಜೆಟ್‌ನಲ್ಲಿದೆ. ಇದರಲ್ಲಿ ಜಿಲ್ಲೆಯೂ ಸೇರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ. 

ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಗೆ ಪೂರಕವಾಗಿ ಎಲ್ಲ ಜಿಲ್ಲೆಗಳಲ್ಲೂ ಗೋಶಾಲೆ ತೆರಯಲಿದ್ದು, ಜಿಲ್ಲೆಯಲ್ಲೂ ಒಂದು ಸ್ಥಾಪನೆಯಾಗಲಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗಾಗಿ ಒಂದು ತಾತ್ಕಾಲಿಕ ವಸತಿ ಗೃಹ ನಿರ್ಮಾಣವಾಗಲಿದೆ. 

ಕಾರಿಡಾರ್‌ ಪ್ರದೇಶ ಖರೀದಿ: ಮಾನವ-ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸಲು ವನ್ಯಜೀವಿಗಳ ಸುಗಮ ಮತ್ತು ಅಭಾದಿತ ಚಲನವಲನಕ್ಕೆ ಅವಶ್ಯವಿರುವ ಎರಡು ಅರಣ್ಯ ಪ್ರದೇಶಗಳ ಮಧ್ಯದ ಕಾರಿಡಾರ್ ಪ್ರದೇಶವನ್ನು ಸರ್ಕಾರವು ಖರೀದಿಸಲು ಮಾರ್ಗಸೂಚಿಗಳನ್ನೊಳಗೊಂಡಂತೆ ಹೊಸ ನೀತಿ ರೂಪಿಸುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಮಾಡಲಾಗಿದ್ದು, ಜಿಲ್ಲೆಗೂ ಇದರ ಲಾಭ ದೊರೆಯಲಿದೆ. 

ವನ್ಯಜೀವಿಗಳ ದಾಳಿಯಿಂದ ಬೆಳೆ ಹಾನಿಯಾದರೆ ತ್ವರಿತವಾಗಿ ಪರಿಹಾರದ ಹಣ ಪಾವತಿಸಲು ‘ಅರಣ್ಯ ಇ-ಪರಿಹಾರ’ ಯೋಜನೆ ಘೋಷಿಸಲಾಗಿದ್ದು, ಇದರಿಂದ ಜಿಲ್ಲೆಯ ಕಾಡಂಚಿನ ರೈತರಿಗೆ ಅನುಕೂಲವಾಗಲಿದೆ. 

ರಾಜಕೀಯ ಧುರೀಣರು ಏನಂತಾರೆ?

ಜಿಲ್ಲೆಯ ಅಭಿವೃದ್ಧಿಗೆ ಒತ್ತು

ಕೋವಿಡ್ ವಿಷಮ ಕಾಲಘಟ್ಟದ ಸಂದರ್ಭದಲ್ಲೂ ಮುಖ್ಯಮಂತ್ರಿ ಅವರು ಗಡಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ಸಮತೋಲಿತ ಬಜೆಟ್‌ ಮಂಡಿಸಿದ್ದಾರೆ.

–ಎಸ್‌.ಸುರೇಶ್‌ ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ

ನಿರಾಶಾದಾಯಕ

ಬಜೆಟ್‌ ನಿರಾಶಾದಾಯಕವಾಗಿದೆ. ಜಿಲ್ಲೆಗೆ ಯಾವುದೇ ಶಾಶ್ವತ ಯೋಜನೆಗಳಿಲ್ಲ. ಜಿಲ್ಲೆಗೆ ಪ್ರತ್ಯೇಕ ವಿವಿ ಘೋಷಿಸಬುಹುದಿತ್ತು. ರಾಜ್ಯಮಟ್ಟದಲ್ಲೂ ಜನಪರ ಕಾರ್ಯಕ್ರಮಗಳಿಲ್ಲ

– ಆರ್‌.ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

ಪರಿಪೂರ್ಣ ಬಜೆಟ್

ಇದು ಪರಿಪೂರ್ಣ ಬಜೆಟ್. ಎಲ್ಲ ವರ್ಗಗಳ ಜನರು ಮತ್ತು ಸರ್ವ ಧರ್ಮದವರಿಗೂ ಆದ್ಯತೆ ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೃಷಿ ಆರೋಗ್ಯ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಗೂ ಹೊಸ ಯೋಜನೆಗಳು ಬಂದಿವೆ.

–ಸಿ.ಎಸ್.ನಿರಂಜನ ಕುಮಾರ್, ಗುಂಡ್ಲುಪೇಟೆ ಶಾಸಕ

ನಿರೀಕ್ಷೆ ಹುಸಿ

ಗೋಪಿನಾಥಂನಲ್ಲಿ ಸಫಾರಿ ಮತ್ತು ಬೂದಿಪಡಗದಲ್ಲಿ ಆನೆ ಶಿಬಿರ ಬಿಟ್ಟು ಬಜೆಟ್ ನಲ್ಲಿ ಜಿಲ್ಲೆಗೆ ಏನೂ ಸಿಕ್ಕಿಲ್ಲ. ಹನೂರಿನಲ್ಲಿ ಮಿನಿ ವಿಧಾನಸೌದ ನಿರ್ಮಾಣಕ್ಕೆ ಅನುದಾನ ನೀಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯ ಜನತೆಗೆ ಬಿಜೆಪಿ ಸರ್ಕಾರದಿಂದ ಒಳ್ಳೆಯದಾಗಿಲ್ಲ.

–ಆರ್. ನರೇಂದ್ರ, ಹನೂರು ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು