ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ; ತ್ರಿಭಾಷಾ ಸೂತ್ರ ಎತ್ತಿ ಹಿಡಿಯಿರಿ: ಹನೀಫ್

Last Updated 10 ಫೆಬ್ರುವರಿ 2023, 6:45 IST
ಅಕ್ಷರ ಗಾತ್ರ

‌ಕೊಳ್ಳೇಗಾಲ (ಕುಮಾರ ನಿಜಗುಣ ವೇದಿಕೆ): ‘ತ್ರಿಭಾಷಾ ಸೂತ್ರವನ್ನು ಪ್ರತಿಯೊಬ್ಬ ಕನ್ನಡಿಗನೂ ಎತ್ತಿ ಹಿಡಿಯುವ ಕೆಲಸ ಮಾಡಬೇಕು’ ಎಂದು ಕವಿ, ಪತ್ರಕರ್ತ ಬಿ.ಎಂ.ಹನೀಫ್ ಗುರುವಾರ ಹೇಳಿದರು.

ನಗರದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಚಾಮರಾಜನಗರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೇಂದ್ರ ಸರ್ಕಾರ ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ. ಬ್ಯಾಂಕ್‌ಗಳಲ್ಲಿ, ಖಾಸಗಿ ಕಂಪನಿಗಳಲ್ಲಿ ಇಂಗ್ಲಿಷ್‌, ಹಿಂದಿಗೇ ಒತ್ತು ನೀಡಲಾಗುತ್ತಿದೆ. ಕನ್ನಡಕ್ಕೂ ಅಷ್ಟೇ ಪ್ರಾಧಾನ್ಯ ನೀಡಬೇಕು. ಈ ನಿಟ್ಟಿನಲ್ಲಿ ಮೂರು ಭಾಷಾ ಸೂತ್ರ ಕಟ್ಟುನಿಟ್ಟಾಗಿ ಜಾರಿಯಾಗಬೇಕು’ ಎಂದರು.

ರಾಜಕಾರಣಿಗಳೇ ಶಾಪಗ್ರಸ್ತರು: ‘ಚಾಮರಾಜನಗರ ಜಿಲ್ಲೆ ಅತ್ಯಂತ ಶ್ರೀಮಂತ ಜಿಲ್ಲೆ. ಆದರೆ, ಈ ಜಿಲ್ಲೆ ಶಾಪಗ್ರಸ್ತ ಎಂದು ರಾಜಕಾರಣಿಗಳು ಹೇಳುತ್ತಾರೆ. ಆದರೆ ನಿಜವಾಗಿಯೂ ರಾಜಕಾರಣಿಗಳೇ ಶಾಪಗ್ರಸ್ತರು. ಕನ್ನಡಿಗರ ಶಕ್ತಿ ವರನಟ ಡಾ. ರಾಜಕುಮಾರ್ ಇದೇ ಜಿಲ್ಲೆಯವರು’ ಎಂದರು.

‘ರಾಜ್ಯ ಸರ್ಕಾರ ಹಾವೇರಿಯಲ್ಲಿ ಜಾನಪದ ವಿವಿ ಸ್ಥಾಪಿಸಿದೆ. ಆದರೆ, ಇಲ್ಲಿ ಸ್ಥಾಪನೆಯಾಗಬೇಕಿತ್ತು. ಜನಪದ, ಪರಂಪರೆ ಹಾಗೂ ಇತಿಹಾಸ ಈ ಜಿಲ್ಲೆಗಿದೆ. ಮುಂದಿನ ದಿನಗಳಲ್ಲಾದರೂ ಈ ಕೆಲಸ ಆಗಬೇಕು. ಜಾನಪದ ಸಂಸ್ಕೃತಿ, ನೀಲಗಾರರ ಸಂಸ್ಕೃತಿ ಉಳಿದಿದೆ ಅಂದರೆ ಅದು ಈ ಜಿಲ್ಲೆಯಲ್ಲಿ. ಜಿಲ್ಲೆಯಲ್ಲಿ ಶತಮಾನ ಕಂಡ 36 ಕನ್ನಡ ಶಾಲೆಗಳಿವೆ. ಅವುಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಬೇಕು’ ಎಂದರು.

‘ನಾನು ಓದಿದ್ದು ಉರ್ದು ಶಾಲೆಯಲ್ಲಿ. ನಂತರ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ. ವೃತ್ತಿ ಮಾಡಿದ್ದು ಕನ್ನಡದ ದಿನಪತ್ರಿಕೆ ‘ಪ್ರಜಾವಾಣಿ’ಯಲ್ಲಿ. ನನಗೆ ಕನ್ನಡ ಮಾತೃ ಭಾಷೆ ಅಲ್ಲ. ಆದರೆ ಅದು ನನ್ನ ತಾಯಿ ಭಾಷೆ. ಬೆಂಗಳೂರಿನಲ್ಲಿ 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡುವುದಕ್ಕೆ ಹಾಗೂ ಕನ್ನಡದಲ್ಲಿ ಬರೆಯುವುದಕ್ಕೆ ಕಷ್ಟಪಡುತ್ತಿದ್ದಾರೆ ಇನ್ನು ಕೆಲವು ಮಕ್ಕಳು ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುತ್ತಿದ್ದಾರೆ’ ಎಂದರು.

ಶಾಸಕ ಎನ್‌.ಮಹೇಶ್ ಮಾತನಾಡಿ, ‘ಕನ್ನಡಿಗರು ವಿಶಾಲ ಹೃದಯ ಉಳ್ಳವರು, ಎಲ್ಲ ಭಾಷೆ ರಚನೆಗೆ ಮೂಲ ಎಂದರೆ ಅದು ಜಾನಪದ ಕಾವ್ಯಗಳು. ಇತ್ತೀಚಿನ ದಿನಗಳಲ್ಲಿ ಅಳಿಯುತ್ತಿರುವ ಕನ್ನಡ ಶಾಲೆಗಳನ್ನು ನಾವು ಉಳಿಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು. ಇಂಗ್ಲಿಷ್‌, ಹಿಂದಿ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ಕನ್ನಡ ಭಾಷೆ ಮುಖ್ಯ. ಸಮ್ಮೇಳನದಲ್ಲಿ ಅಂಗೀಕರಿಸಿರುವ ನಿರ್ಣಯಗಳನ್ನು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೆ ತರುತ್ತೇನೆ’ ಎಂದರು.

ಸಮಾರೋಪ ಸಮಾರಂಭದಲ್ಲಿ 25 ಮಂದಿ ಸಾಧಕರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸನ್ಮಾನಿಸಲಾಯಿತು.

ಜೇತವನ ಬುದ್ಧ ವಿಹಾರ ಮನೋರಖ್ಖಿತ ಬಂತೇಜಿ, ಮುಖಂಡರಾದ ಎಸ್‌.ಬಾಲರಾಜು, ಓಲೆ ಮಹದೇವ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್‌, ತಾಲ್ಲೂಕು ಅಧ್ಯಕ್ಷ ಕೊಂಗರಹಳ್ಳಿ ನಾಗರಾಜು ಇತರರು ಇದ್ದರು.

ಚರಿತ್ರೆ ಸೃಷ್ಟಿಸಿದ ಸಮ್ಮೇಳನ

ಸಮ್ಮೇಳನದ ಸರ್ವಾಧ್ಯಕ್ಷ ಮಹಾದೇವ ಶಂಕನಪುರ ಮಾತನಾಡಿ, ‘12ನೇ ಕನ್ನಡ ಸಾಹಿತ್ಯ ಸಮ್ಮೇಳನ ಚರಿತ್ರೆ ಸೃಷ್ಟಿಸಿದೆ. ಜಾತಿ, ಧರ್ಮ, ಮತ, ಪಂಗಡ, ರಾಜಕಾರಣ ಹಾಗೂ ಪಕ್ಷಗಳನ್ನು ಮರೆದು ಇಂತಹ ಅದ್ಭುತ ಕಾರ್ಯಕ್ರಮ ಮಾಡಿರುವುದು ಸಂತಸ ತಂದಿದೆ. ಸಮ್ಮೇಳನದ ಸರ್ವಾಧ್ಯಕ್ಷನಾಗಿರುವುದು ನನ್ನ ಭಾಗ್ಯ’ ಎಂದರು.

ಮೂರು ನಿರ್ಣಯಗಳು

ಸಮ್ಮೇಳನದಲ್ಲಿ ಕಸಾಪವು ಮೂರು ನಿರ್ಣಯಗಳನ್ನು ಅಂಗೀಕರಿಸಿದೆ.

1. ರಾಜ್ಯ ಸರ್ಕಾರ ಹಾವೇರಿಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಿದಂತೆಯೇ ಚಾಮರಾಜನಗರ ಜಿಲ್ಲೆಯಲ್ಲೂ ಜಾನಪದಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು.

2. ಗಡಿನಾಡಿನ ಕನ್ನಡ ಪ್ರದೇಶಗಳ ರಕ್ಷಣೆ ಮಾಡುವ ಸಲುವಾಗಿ ರಚನೆಯಾಗಿರುವ ಮಹಾಜನ ವರದಿಯೇ ಅಂತಿಮವಾಗಬೇಕು.

3. ಕನ್ನಡ ಶಾಲೆಗಳಲ್ಲಿ ಮಾತೃ ಭಾಷೆಯನ್ನು ಕಡ್ಡಾಯಗೊಳಿಸಿಕೊಂಡೇ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಉಪಕ್ರಮಗಳನ್ನು ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT