ಚಾಮರಾಜನಗರ: ಒಂದು ವರ್ಷ ಮೂರು ತಿಂಗಳುಗಳಿಂದ ಖಾಲಿ ಉಳಿದಿದ್ದ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲಾತಿ ನಿಗದಿಪಡಿಸಿದೆ. ಈ ಬಾರಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಗಳು ‘ಸಾಮಾನ್ಯ’ ವರ್ಗಕ್ಕೆ ಮೀಸಲಾಗಿದ್ದು ಅಧಿಕಾರ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರುತ್ತಿವೆ.
ಯಾರಿಗೆ ಗದ್ದುಗೆ:
ಪ್ರಸ್ತುತ ಚಾಮರಾಜನಗರ ನಗರಸಭೆಯ 31 ವಾರ್ಡ್‌ಗಳಲ್ಲಿ 15 ಬಿಜೆಪಿ, 8 ಕಾಂಗ್ರೆಸ್, 6 ಎಸ್‌ಡಿಪಿಐ ಹಾಗೂ ತಲಾ ಒಬ್ಬರು ಬಿಎಸ್‌ಪಿ, ಪಕ್ಷೇತ್ತರ ಸದಸ್ಯ ಇದ್ದಾರೆ. ಕ್ಷೇತ್ರದ ಸಂಸದ ಸುನೀಲ್ ಬೋಸ್ ಹಾಗೂ ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ ಅವರಿಗೂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡುವ ಅರ್ಹತೆ ಇರುವುದರಿಂದ ನಗರಸಭೆಯ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ 17ರ ಮ್ಯಾಜಿಕ್ ನಂಬರ್ ತಲುಪಬೇಕು.
ಸಂಖ್ಯಾಬಲದ ಆಧಾರದಲ್ಲಿ ಮೇಲ್ನೋಟಕ್ಕೆ ಬಿಜೆಪಿ (15) ಅತಿದೊಡ್ಡ ಪಕ್ಷವಾಗಿ ಕಾಣುತ್ತದೆ. ಆದರೆ, ನಗರಸಭೆಯನ್ನು ತೆಕ್ಕೆಗೆ ತೆಗೆದುಕೊಳ್ಳುವಷ್ಟು ಸ್ವಂತ ಬಲ ಹೊಂದಿಲ್ಲ. ಹೆಚ್ಚುವರಿಯಾಗಿ ಎರಡು ಮತಗಳ ಅವಶ್ಯಕತೆ ಇದ್ದು ಬಿಎಸ್‌ಪಿ, ಪಕ್ಷೇತ್ತರ ಅಥವಾ ಎಸ್‌ಡಿಪಿಐ ಪಕ್ಷದಿಂದ ಇಬ್ಬರನ್ನು ಸೆಳೆಯುವಲ್ಲಿ ಸಫಲವಾದರೆ ನಗರಸಭೆಯಲ್ಲಿ ಕಮಲ ಅರಳಬಹುದು.
ಕಾಂಗ್ರೆಸ್ ಬಳಿ 8 ಮಂದಿ ಸದಸ್ಯರು, ಸಂಸದರು, ಶಾಸಕರು ಸೇರಿ 10 ಮತಗಳು ಇವೆ. ಅಧಿಕಾರ ಪಡೆಯಲು ಹೆಚ್ಚುವರಿಯಾಗಿ 7 ಮತಗಳು ಬೇಕಿವೆ. ಎಸ್‌ಡಿಪಿಐನ (6), ಬಿಎಸ್‌ಪಿ ಅಥವಾ ಪಕ್ಷೇತ್ತರ ಅಭ್ಯರ್ಥಿಯ ಪೈಕಿ ಒಬ್ಬರ ಬೆಂಬಲ ದೊರೆತರೂ ನಗರಸಭೆ ‘ಕೈ’ ವಶವಾಗಲಿದೆ.
ಯಾರಿಗೆ ಅಧ್ಯಕ್ಷ ಗಾದಿ:
ಮೀಸಲಾತಿ ನಿಗದಿ ಬೆನ್ನಲ್ಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಸಹಜವಾಗಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಬಹಿರಂಗವಾಗಿ ಆಕಾಂಕ್ಷಿ ಎಂದು ಘೋಷಿಸಿಕೊಳ್ಳದಿದ್ದರೂ ಕುರ್ಚಿಗಾಗಿ ಪ್ರಯತ್ನಗಳು ನಡೆಯುತ್ತಿವೆ.
ಬಿಜೆಪಿಯಿಂದ ಸುದರ್ಶನ ಗೌಡ (21ನೇ ವಾರ್ಡ್), ಎಚ್.ಎಸ್.ಮಮತಾ ಬಾಲಸುಬ್ರಹ್ಮಣ್ಯಂ (22ನೇ ವಾರ್ಡ್) ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಕಾಂಗ್ರೆಸ್‌ನಲ್ಲಿ ಆರ್.ಎಂ.ರಾಜಪ್ಪ (31ನೇ ವಾರ್ಡ್) ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಚಿನ್ನಮ್ಮ (14ನೇ ವಾರ್ಡ್), ಕಲಾವತಿ ಎಂ. (13ನೇ ವಾರ್ಡ್) ಅವರ ಹೆಸರೂ ಮುನ್ನಲೆಗೆ ಬಂದಿದೆ.
ಎಸ್‌ಡಿಪಿಐನಿಂದ ಎರಡು ಬಾರಿ ಗೆದ್ದಿರುವ ಮಹೇಶ್ ಎಂ (9ನೇ ವಾರ್ಡ್) ಹಾಗೂ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಅಬ್ರಾರ್ ಅಹಮದ್ (12ನೇ ವಾರ್ಡ್) ಹೆಸರು ಮುಂಚೂಣಿಯಲ್ಲಿವೆ. ಆದರೆ, ಯಾರ ಹೆಸರುಗಳೂ ಅಂತಿಮವಾಗಿಲ್ಲ.
‘ಕಳೆದ ಬಾರಿಗೆ ಬಿಜೆಪಿಗೆ ಅಧಿಕಾರ’
2018ರ ಆಗಸ್ಟ್‌ನಲ್ಲಿ ಚಾಮರಾನಗರ ನಗರಸಭೆಗೆ ಚುನಾವಣೆ ನಡೆದಿತ್ತು. ಆದರೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಪ್ರಕ್ರಿಯೆ ತಡವಾದ ಪರಿಣಾಮ 2 ವರ್ಷಗಳ ಬಳಿಕ 2020ರ ನವೆಂಬರ್‌ನಲ್ಲಿ ಬಿಜೆಪಿಯ ಸಿ.ಎಂ.ಆಶಾ ಅಧ್ಯಕ್ಷೆಯಾಗಿ ಪಿ.ಸುಧಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿ ಎರಡೂವರೆ ವರ್ಷ ಪೂರೈಸಿದ್ದರು. ಅಂದಿನ ಚುನಾವಣೆಯಲ್ಲಿ ಬಿಎಸ್‌ಪಿಯ ಪ್ರಕಾಶ್ ಸಂಸದರಾಗಿದ್ದ ಶ್ರೀನಿವಾಸ ಪ್ರಸಾದ್ ಬಿಜೆಪಿ ಪರವಾಗಿ ಮತ ಹಾಕಿದ್ದರಿಂದ ಅನಾಯಾಸವಾಗಿ ಗೆಲುವು ದಕ್ಕಿತ್ತು. ಪ್ರಸ್ತುತ ಕಾಂಗ್ರೆಸ್ ಸಂಸದರಿದ್ದಾರೆ ಬಿಎಸ್‌ಪಿ ಹಾಗೂ ಪಕ್ಷೇತ್ತರರ ಒಲವು ಯಾರ ಕಡೆ ಎಂಬದು ಇನ್ನೂ ಖಚಿತವಾಗಿಲ್ಲ.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದರೂ ಚುನಾವಣಾ ದಿನಾಂಕ ಘೋಷಣೆಯಾಗಿಲ್ಲ. ಮೀಸಲಾತಿಗೆ ಆಕ್ಷೇಪ ಸಲ್ಲಿಸಲು 15 ದಿನಗಳ ಕಾಲಾವಕಾಶವೂ ಇರುವುದರಿಂದ ಆಕಾಂಕ್ಷಿ ಯಾರು ಎಂಬ ತೀರ್ಮಾನ ಮಾಡಿಲ್ಲ. ರಾಜ್ಯಮಟ್ಟದ ಪಾದಯಾತ್ರೆ ಮುಗಿದ ಬಳಿಕ ಆಕಾಂಕ್ಷಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. –ಸಿ.ಎಸ್.ನಿರಂಜನ ಕುಮಾರ್ ಬಿಜೆಪಿ ಜಿಲ್ಲಾಧ್ಯಕ್ಷ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ನಡೆದಿಲ್ಲ. ಚುನಾವಣೆಗೆ ಸಮಯಾವಕಾಶ ಇರುವುದರಿಂದ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ಮುಗಿದ ಬಳಿಕ ಆಕಾಂಕ್ಷಿಗಳ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. –ಮರಿಸ್ವಾಮಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಧಾನಸಭೆ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಸ್‌ಡಿಪಿಐ ನಿರಂತರವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾ ಬಂದಿದೆ. ಈ ಬಾರಿ ನಗರಸಭೆ ಅಧ್ಯಕ್ಷ ಸ್ಥಾನ ಎಸ್‌ಡಿಪಿಐ ಸಿಗಬೇಕು ಎಂಬುದು ಪಕ್ಷದ ಬೇಡಿಕೆ. ಅಧ್ಯಕ್ಷ ಯಾರಾಗಲಿದ್ದಾರೆ ಎಂಬುದು ಪಕ್ಷದ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೀರ್ಮಾನವಾಗಲಿದೆ. –ಅಬ್ರಾರ್ ಅಹಮದ್ ಎಸ್‌ಡಿಪಿಐ ಜಿಲ್ಲಾಧ್ಯಕ್ಷ
1 ವರ್ಷ 3 ತಿಂಗಳು ಅಧಿಕಾರ ಮಾತ್ರ
ಪ್ರಸ್ತುತ ನಗರಸಭೆಯ ಅಧಿಕಾರಾವಧಿ ಕೇವಲ ಒಂದು ವರ್ಷ ಮೂರು ತಿಂಗಳು ಮಾತ್ರ ಉಳಿದಿದೆ. ಕಡಿಮೆ ಅವಧಿ ಇರುವುದರಿಂದ ಪ್ರಬಲ ಆಕಾಂಕ್ಷಿಗಳು ಸ್ಪರ್ಧಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ರಾಜಕೀಯ ಪಕ್ಷಗಳ ಆಂತರಿಕ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.