ಶನಿವಾರ, ಮೇ 30, 2020
27 °C
ಚಂಗಡಿ ಸ್ಥಳಾಂತರ ನಿರ್ಧಾರಕ್ಕೆ ಖುಷಿ, ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆ: ಗ್ರಾಮಸ್ಥರ ಮಾತು

ಚಾಮರಾಜನಗರ | ನಾಳೆನೇ ಗ್ರಾಮ ಬಿಡುವುದಕ್ಕೆ ಸಿದ್ಧ...

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಇಲ್ಲಿ ದಿನದೂಡುವುದೇ ಕಷ್ಟವಾಗಿದೆ. ನಮ್ಮನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿ ಸೌಕರ್ಯಗಳನ್ನು ಒದಗಿಸಿದರೆ ನಾಳೆನೇ ಬರುವುದಕ್ಕೆ ಸಿದ್ಧ...’

–ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿರುವ ಕುಗ್ರಾಮ ಚಂಗಡಿಯ ನಿವಾಸಿ 65 ವರ್ಷದ ಪುಟ್ಟಮ್ಮ ಅವರ ಮಾತು ಇದು. ಅವರು ಮಾತ್ರವಲ್ಲ; ಅವರ ಸಹವರ್ತಿ ಪಾರ್ವತಮ್ಮ ಅವರದ್ದೂ ಇದೇ ಅನಿಸಿಕೆ. ಇವರ ಜೊತೆಗಿದ್ದ ಮಹಿಳೆಯರ ಅಭಿಪ್ರಾಯವೂ ಇದೇ ಆಗಿದೆ. 

ಪುಟ್ಟಮ್ಮ ಅವರ ಪತಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿರುವ ಚಂಗಡಿ ಗ್ರಾಮದಲ್ಲಿ ಅವರದ್ದು ಒಂಟಿ ಜೀವನ. ಜಮೀನಿದ್ದರೂ ಕೃಷಿ ಮಾಡಲು ಅವರಿಂದ ಆಗುತ್ತಿಲ್ಲ. ವೃದ್ಧಾಪ್ಯ ವೇತನ ಬಿಟ್ಟರೆ (ಸದ್ಯ ತಿಂಗಳಿಗೆ ₹600 ಬರುತ್ತಿದೆ) ಅವರಿಗೆ ಬೇರೆ ಆದಾಯ ಇಲ್ಲ. ಊಟಕ್ಕೆ ಪಡಿತರ ಅಕ್ಕಿಯನ್ನೇ ಅವಲಂಬಿಸಿದ್ದಾರೆ. ಮೂಲಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮದಿಂದ ಯಾವಾಗ ಬೇರೆ ಕಡೆಗೆ ಹೋಗುತ್ತೇವೆಯೋ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಗ್ರಾಮವನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಒಪ್ಪಿರುವುದು ಪುಟ್ಟಮ್ಮ ಸೇರಿದಂತೆ ಗ್ರಾಮದ ಹಿರಿಯರಲ್ಲಿ ಹೊಸ ಆಸೆ, ಆಕಾಂಕ್ಷೆ ಹಾಗೂ ನಿರೀಕ್ಷೆಗಳನ್ನು ಮೂಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಗುರುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಹುತೇಕ ಮಂದಿಯಲ್ಲಿ ಇದ್ದದ್ದು ಒಂದೇ ಪ್ರಶ್ನೆ; ಸ್ಥಳಾಂತರ ಪೂರ್ಣಗೊಳ್ಳುವುದು ಯಾವಾಗ?

ನಗರದಲ್ಲಿ ನೆಲೆ: ಗ್ರಾಮದಲ್ಲಿ ಲೆಕ್ಕಕ್ಕೆ 226 ಕುಟುಂಬಗಳು ಇದ್ದರೂ, ಚಂಗಡಿಯಲ್ಲಿ ವಾಸಿಸುತ್ತಿರುವುದು 50 ಕುಟುಂಬಗಳು. ಉಳಿದವರೆಲ್ಲರೂ ಉದ್ಯೋಗ ಅರಸಿಕೊಂಡು ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರ ನಗರಗಳಿಗೆ ಹೋಗಿದ್ದಾರೆ. ಯುವಕರು ಕೂಡ ಗ್ರಾಮದಿಂದ ದೂರ ಇದ್ದಾರೆ. ಸದ್ಯ ಗ್ರಾಮದಲ್ಲಿ 200 ಜನರಿದ್ದಾರೆ. ಹೆಚ್ಚಿನವರು ವೃದ್ಧರು.

‘1ರಿಂದ 5ನೇ ತರಗತಿವರೆಗೆ ಶಾಲೆ ಇದೆ. ಸದ್ಯ 8 ಮಕ್ಕಳು ಇದ್ದಾರೆ. ಅಂಗನವಾಡಿಯಲ್ಲಿ ಇರುವುದೂ ಆರು ಮಕ್ಕಳು ಮಾತ್ರ. ಉನ್ನತ ಶಿಕ್ಷಣಕ್ಕಾಗಿ ಮಕ್ಕಳನ್ನು ದೂರ ಕಳುಹಿಸಬೇಕಾಗಿದೆ. ರಸ್ತೆ ಸರಿ ಇಲ್ಲದಿರುವುದರಿಂದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಹೆಂಗಸರು ಪಡುತ್ತಿರುವ ಕಷ್ಟ ಯಾರಿಗೂ ಬೇಡ. ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಕೃಷಿ ಮಾಡುವುದಕ್ಕೂ ಆಗುವುದಿಲ್ಲ’ ಎಂದು ಬೆಂಗಳೂರಿನಲ್ಲಿ ಕೆಲಸ ಮಾಡುವ ವೆಂಕಟಾಚಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂತಹ ಗ್ರಾಮದಲ್ಲಿ ಇರುವುದಾದರೂ ಹೇಗೆ? ಅನಿವಾರ್ಯವಾಗಿ ಊರು ಬಿಟ್ಟು ಬೆಂಗಳೂರಿಗೆ ಹೋಗಿದ್ದೇವೆ. ಎಲ್ಲ ಸೌಕರ್ಯಗಳು ನಮಗೆ ಇದ್ದಿದ್ದರೆ ನಾವೂ ಇಲ್ಲೇ ಇರುತ್ತಿದ್ದೆವು. ಕಷ್ಟವಿಲ್ಲದೆ ನೆಮ್ಮದಿಯ ಜೀವನ ನಡೆಸಬೇಕು. ಅದಕ್ಕಾಗಿ ಸ್ಥಳಾಂತರವಾಗಲು ಒಪ್ಪಿಕೊಂಡಿದ್ದೇವೆ’ ಎಂದು ಹೇಳಿದರು. 

ಸದ್ಯ 195 ಕುಟುಂಬಗಳು ಸ್ಥಳಾಂತರಕ್ಕೆ ಒಪ್ಪಿವೆ. ಇನ್ನೂ 31 ಕುಟುಂಬಗಳು ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಸಚಿವರ ಜೊತೆ ನಡೆದ ಸಂವಾದದಲ್ಲಿ ಕೆಲವರು, ‘ಭಾವನಾತ್ಮಕ ಕಾರಣಗಳಿಗಾಗಿ ಊರನ್ನು ಬಿಡಲು ಮನಸ್ಸಾಗುತ್ತಿಲ್ಲ. ಜೀವನಕ್ಕೆ ಅನುಕೂಲಕರವಾದ ಜಾಗದಲ್ಲಿ ಪುನರ್ವಸತಿ ಕಲ್ಪಿಸಬೇಕು. ಉತ್ತಮ ಪರಿಹಾರವನ್ನೂ ನೀಡಬೇಕು’ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇವುಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ಸ್ಥಳೀಯ ಶಾಸಕ ಆರ್‌.ನರೇಂದ್ರ ಅವರು ಕೂಡ, ‘ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಿಸಲು ಸಾಧ್ಯವೇ ಇಲ್ಲ. ಹಾಗಾಗಿ ಸರ್ಕಾರಿ ಸೌಲಭ್ಯಗಳು ಸಿಗಬೇಕಾದರೆ ಬೇರೆ ಕಡೆಗೆ ಸ್ಥಳಾಂತರ ಆಗುವುದು ಒಳ್ಳೆಯದು’ ಎಂಬ ಅಭಿಪ್ರಾಯವನ್ನು ಗ್ರಾಮಸ್ಥರ ಮುಂದೆ ಮಂಡಿಸಿದ್ದಾರೆ. 

‘ಊರನ್ನು ಬಿಡಬಾರದು ಎಂಬುದು ನಮ್ಮ ನಿಲುವಾಗಿತ್ತು. ಆದರೆ, ಸಚಿವರು ಹಾಗೂ ಶಾಸಕ ನರೇಂದ್ರ ಅವರು ಎಲ್ಲವನ್ನೂ ವಿವರಿಸಿದ್ದಾರೆ. ಉತ್ತಮ ಸೌಲಭ್ಯ ಕಲ್ಪಿಸುವುದಾದರೆ ನಾವು ಕೂಡ ಬೇರೆ ಕಡೆಗೆ ಬರುವುದಕ್ಕೆ ಒಪ್ಪುತ್ತೇವೆ’ ಎಂದು ಗ್ರಾಮದ ಹಿರೀಕ ರಾಮನಾಥ ಅವರು ಹೇಳಿದರು. 

ಯಶಸ್ವಿಯಾದರೆ ಇನ್ನಷ್ಟು ಗ್ರಾಮಗಳು...
ಹನೂರು ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿರುವ ದೊಡ್ಡಾಣೆ, ಕೊಕ್ಬರೆ, ತೇಕಾಣೆ, ತೋಕೆರೆ, ಪಡಸಲನತ್ತ, ನಾಗಮಲೆ ಸೇರಿದಂತೆ ಇನ್ನೂ ಕೆಲವು ಗ್ರಾಮಗಳು ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ. 

ಚಂಗಡಿ ಪುನರ್ವಸತಿ ಯೋಜನೆ ಯಶಸ್ವಿಯಾದರೆ, ಹಂತ ಹಂತವಾಗಿ ಇತರ ಕುಗ್ರಾಮಗಳನ್ನು ಸ್ಥಳಾಂತರಿಸಲು ಅವಕಾಶ ಸಿಕ್ಕಿದಂತಾಗುತ್ತದೆ. ಅಲ್ಲಿನ ಜನರು ಕೂಡ ಸ್ವಯಂ ಪ್ರೇರಿತರಾಗಿ ಬೇರೆ ಕಡೆಗೆ ಬರಲು ಒಪ್ಪಬಹುದು ಎಂಬುದು ಸಚಿವರು, ಶಾಸಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಭಾವನೆ.

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸುರೇಶ್‌ ಕುಮಾರ್‌ ಹಾಗೂ ಆರ್‌.‌ನರೇಂದ್ರ ಅವರು ಈ ಮಾತನ್ನು ಒತ್ತಿ ಒತ್ತಿ ಹೇಳಿದ್ದರು.

*
ಕೆಲವರು ವೈಯಕ್ತಿಕ ಕಾರಣಗಳಿಗಾಗಿ ಸ್ಥಳಾಂತರಗೊಳ್ಳಲು ಸಮ್ಮತಿಸಿಲ್ಲ. ಆದರೆ, ಅವರಿಗೂ ಮನವರಿಕೆಯಾಗಿ ಯೋಜನೆಗೆ ಒಪ್ಪಲಿದ್ದಾರೆ ಎಂಬ ವಿಶ್ವಾಸ ಇದೆ.
-ಚಂಗಡಿ ಕರಿಯಪ್ಪ, ಗ್ರಾಮದ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು