ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಾನ ಗಂಧರ್ವನಿಗೆ ಭಾವಪೂರ್ಣ ಶ್ರದ್ಧಾಂಜಲಿ

Last Updated 26 ಸೆಪ್ಟೆಂಬರ್ 2020, 15:43 IST
ಅಕ್ಷರ ಗಾತ್ರ

ಚಾಮರಾಜನಗರ: ಶುಕ್ರವಾರ ನಿಧನ ಹೊಂದಿದ ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

ನಗರದಲ್ಲಿ ಶನಿವಾರ ಈಶ್ವರಿ ಮ್ಯೂಸಿಕಲ್‌ ಅಂಡ್‌ ಸೋಷಿಯಲ್‌‌ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಟ್ರಸ್ಟ್‌ ವ್ಯವಸ್ಥಾಪಕ ಸಿ.ಎಂ.ವೆಂಕಟೇಶ್‌ ಅವರು, ‘ಎಸ್‌ಪಿಬಿಯವರು ರಾಷ್ಟ್ರಮಟ್ಟದಲ್ಲಿ ಅಲ್ಲದೇ ಅಂತರರಾಷ್ಟ್ರೀಯಮಟ್ಟದಲ್ಲೂ ತಮ್ಮ ಗಾಯನದ ಛಾಪು ಮೂಡಿಸಿದ್ದರು. ಬಾಲಸುಬ್ರಹ್ಮಣ್ಯಂ ಅವರು ನಮ್ಮ ಸಂಸ್ಥೆ ಜತೆಗೆ 15 ವರ್ಷಗಳ ಒಡನಾಡವಿಟ್ಟುಕೊಂಡಿದ್ದರು. ಜಿಲ್ಲೆಯ ಆರಾಧ್ಯಧೈವ ಮಲೆಮಹದೇಶ್ವರಸ್ವಾಮಿ ಹಾಗೂ ರಾಜರ್ಷಿ ಶ್ರೀ ಭಗೀರಥರ ಕುರಿತು ಹೊರತರಲಾಗಿದ್ದ ಧ್ವನಿಸುರುಳಿಗಳಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದರು. 2017ರಲ್ಲಿ ಎಸ್‌ಪಿಬಿ ಅವರ ಜನ್ಮದಿನದ ಅಂಗವಾಗಿ ಸಾಲುಮರದ ತಿಮ್ಮಕ್ಕನನ್ನು ಕರೆಸಿ 250 ಗಿಡಗಳನ್ನು ನೆಡಲಾಗಿತ್ತು’ ಎಂದು ಹೇಳಿದರು.

ಜಾನಪದ ಕಲಾವಿದ ದೊಡ್ಡಗವಿ ಬಸಪ್ಪ ಅವರು ಮಾತನಾಡಿ, ‘ಜಾನಪದ ಕಲಾವಿದರಿಗೆ ಬಾಲಸುಬ್ರಹ್ಮಣ್ಯಂ ಸ್ಫೂರ್ತಿಯಾಗಿದ್ದರು,ಸರಳ ವ್ಯಕ್ತಿತ್ವದ ಬಾಲು ಅವರ ಜೀವನ ಕಲಾವಿದರ ಬಾಳಿಗೆ ಮಾರ್ಗದರ್ಶನವಾಗಬೇಕು’ ಎಂದರು.

ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ಕಲಾವಿದ ಶಿವಸ್ವಾಮಿ, ಮಹದೇವಪ್ಪ, ಶಿಕ್ಷಕರಾದ ಮಹದೇವಶೆಟ್ಟಿ, ಮಂಜುನಾಥ್, ಮಣಿಕಂಠ, ಜಯಲಕ್ಷ್ಮೀ, ಹರಿಕೃಷ್ಣ, ನೀಲಕಂಠ ಇದ್ದರು.

ಸ್ವರ ಮಾಧುರ್ಯ ಶಾಶ್ವತ: ರಾಮಸಮುದ್ರದ ಕುಲುಮೆ ರಸ್ತೆಯಲ್ಲಿ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅಭಿಮಾನಿಗಳ ಸಂಘದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.ಎಸ್‌ಪಿಬಿ ಅವರ ಬೃಹತ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಿವಣ್ಣ ಅವರು, ‘ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ,ಅವರ ಸ್ವರ ಮಾಧುರ್ಯ ಭಾರತೀಯರ ಮನೆ ಮನೆಯಲ್ಲೂ ಶಾಶ್ವತವಾಗಿ ನೆಲೆಯಾಗಿರುತ್ತದೆ’ ಎಂದರು.

ಉಪನ್ಯಾಸಕಸುರೇಶ್ ಎನ್. ಋಗ್ವೇದಿ ಅವರು ಮಾತನಾಡಿ, ‘ಗಾಯನದ ಮೂಲಕ ಅಮರತ್ವ ಪಡೆದ ‌ಎಸ್‌ಪಿಬಿ ಅವರ ಹೆಸರು ಸದಾ ಮನದಲ್ಲಿ ಇರುತ್ತದೆ’ ಎಂದರು.

ರಾಮಸಮುದ್ರ ನಂಜುಂಡಸ್ವಾಮಿ ಅವರು ಮಾತನಾಡಿದರು.ಪ್ರಕಾಶ್, ನಾಗೇಂದ್ರ, ವೇಣುಗೋಪಾಲ್, ಅಪ್ಪು ಬಳಗದ ಮಣಿ, ಆಲೂರು ದೊರೆಸ್ವಾಮಿ, ನಲ್ಲೂರು ಪ್ರಕಾಶ್, ಅವತಾರ ಪ್ರವೀಣ್, ಚಾಮರಾಜೇಶ್ವರ ಕಲಾವಿದ ಬಳಗ ಅಧ್ಯಕ್ಷ ಮಂಜು ಇದ್ದರು.

ಕಲಾವಿದರಿಂದ ಅಶ್ರುತರ್ಪಣ: ಶ್ರೀ ಚಾಮರಾಜೇಶ್ವರ ಕಲಾವಿದರ ಸಂಘದ ಪದಾಧಿಕಾರಿಗಳು ಮೇರುಗಾಯಕನ ನಿಧನಕ್ಕೆ ಸಂತಾಪ ಸೂಚಿಸಿದರು.

ಶ್ರೀಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಸಂಘದ ಅಧ್ಯಕ್ಷ ಮಂಜು ಅವರು ಎಸ್‌ಪಿಬಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಮಾತನಾಡಿದ ಅವರು, ‘ಎಸ್.ಪಿ.ಬಾಲಸುಬ್ರಹ್ಮಣ್ಯಂ ಶ್ರೇಷ್ಠ ಗಾಯಕರಾಗಿದ್ದರು. ಅವರ ನಿಧನದಿಂದ ದೇಶ, ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸರಳ ವ್ಯಕ್ತಿತ್ವ ಹೊಂದಿದ್ದ ಅವರು ಗಾಯನದ ಜೊತೆಗೆ ನಟನೆಯಲ್ಲೂ ಮಿಂಚಿದ್ದರು’ ಎಂದರು.

ಸಂಘದ ಉಪಾಧ್ಯಕ್ಷ ಕಾಳನಹುಂಡಿ ಬಸವರಾಜು, ಕಾರ್ಯದರ್ಶಿ ಪ್ರವೀಣ್ ಅವತಾರ್, ಸಂಘಟನಾ ಕಾರ್ಯದರ್ಶಿ ಪ್ರಸಾದ್, ಖಜಾಂಚಿ ಶಿವಣ್ಣ, ನಾಗೇಂದ್ರ, ಆಲೂರುದೊರೆ, ಪ್ರವೀಣ್, ಉದ್ಯಮಿ ಜಯಸಿಂಹ, ಗಾಯಕರಾದ ಸಿ.ಎಂ.ನರಸಿಂಹಮೂರ್ತಿ, ಸಿ.ಎಂ.ವೆಂಕಟೇಶ್, ಮುಖಂಡರಾದ ಸುರೇಶ್‌ನಾಯಕ, ನಟರಾಜು, ಚಾ.ರಂ.ಶ್ರೀನಿವಾಸಗೌಡ, ಶಿವಶಂಕರ್, ಕೌಶಿಕ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT