ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲ್ಮನೆ ಚುನಾವಣೆ: ‘ಕೈ’ ಟಿಕೆಟ್‌ಗೆ ಕಸರತ್ತು

ಜಿ.ಎನ್‌.ನಂಜುಂಡಸ್ವಾಮಿ, ಪು.ಶ್ರೀನಿವಾಸ ನಾಯಕರಿಂದ ಸಿ.ಎಂ ಭೇಟಿ
Published 29 ಮೇ 2024, 5:32 IST
Last Updated 29 ಮೇ 2024, 5:32 IST
ಅಕ್ಷರ ಗಾತ್ರ

ಚಾಮರಾಜನಗರ: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಜಿಲ್ಲೆಯಿಂದ ಇಬ್ಬರು ಕಸರತ್ತು ನಡೆಸುತ್ತಿದ್ದಾರೆ. 

ಲೋಕಸಭಾ ಟಿಕೆಟ್‌ ವಂಚಿತ, ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ಹಾಗೂ ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸ ನಾಯಕ ಅವರು ಟಿಕೆಟ್‌ ಪ್ರಬಲ ಆಕಾಂಕ್ಷಿಗಳಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. 

11 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ ಏಳು ಸ್ಥಾನಗಳು ಸಿಗಲಿವೆ. ಅಭ್ಯರ್ಥಿಗಳ ಆಯ್ಕೆ ಕುರಿತು ವರಿಷ್ಠರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ದೆಹಲಿಗೆ ತೆರಳಿದ್ದಾರೆ. 

ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾದ ನಂತರ, ಜಿಲ್ಲಾ ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ಗೆ ಯಾರೂ ಆಯ್ಕೆಯಾಗಿಲ್ಲ. 

ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ಅವರು ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಪಕ್ಷದ ಟಿಕೆಟ್‌ ಕೈತಪ್ಪುವುದು ಖಾತ್ರಿಯಾಗುತ್ತಿದ್ದಂತೆಯೇ ಅವರು ಕಾಂಗ್ರೆಸ್‌ ಸೇರಿದ್ದರು. 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಕೊನೆಯವರೆಗೂ ಅವರ ಹೆಸರು ಕೇಳಿ ಬಂದಿತ್ತು. ವರಿಷ್ಠರು ಅಂತಿಮವಾಗಿ ಸುನಿಲ್‌ ಬೋಸ್‌ ಅವರಿಗೆ ಮಣೆ ಹಾಕಿದ್ದರು. 

ಈ ಸಂದರ್ಭದಲ್ಲಿ ವರಿಷ್ಠರು ನಂಜುಂಡಸ್ವಾಮಿ ಅವರಿಗೆ ಭವಿಷ್ಯದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಕೆಲವೇ ವಾರಗಳಲ್ಲಿ ಅವರನ್ನು ಕೆಪಿಸಿಸಿ ಉಪಾಧ್ಯಕ್ಷರನ್ನಾಗಿಯೂ ನೇಮಿಸಲಾಗಿತ್ತು. 

‘ಲೋಕಸಭಾ ಟಿಕೆಟ್‌ ಬೋಸ್‌ಗೆ ಘೋಷಿಸುವ ಸಂದರ್ಭದಲ್ಲಿ ಸಿ.ಎಂ. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವರಿಷ್ಠರು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ದರು. ಹಾಗಾಗಿ, ನಮ್ಮ ನಾಯಕರನ್ನು ಪಕ್ಷ ಪರಿಗಣಿಸಲಿದೆ’ ಎಂದು ಹೇಳುತ್ತಾರೆ ನಂಜುಂಡಸ್ವಾಮಿ ಆಪ್ತರು.  

ಪು.ಶ್ರೀನಿವಾಸ ನಾಯಕ ಅವರು 1977ರಿಂದಲೂ ರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಸೇರ್ಪಡೆಯಾದಾಗ ಇವರೂ ‘ಕೈ’ ಪಕ್ಷಕ್ಕೆ ಬಂದಿದ್ದರು. ಅದಕ್ಕೂ ಮೊದಲು ಜನತಾಪಕ್ಷ, ಜನತಾದಳದಲ್ಲಿ ಇದ್ದರು. 

ಮೇಲ್ಮನೆ ಸದಸ್ಯರಾಗಲು ಬಯಸಿರುವ ಅವರು, ಸಿದ್ದರಾಮಯ್ಯ ಅವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಿದ್ದಾರೆ. 

‘ವರಿಷ್ಠರು ಪರಿಗಣಿಸುವ ವಿಶ್ವಾಸವಿದೆ’

‘ಲೋಕಸಭೆ ಟಿಕೆಟ್‌ ಕೊನೆ ಕ್ಷಣದಲ್ಲಿ ಕೈತಪ್ಪಿತ್ತು. ಆಗ ಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷರು ಪಕ್ಷದ ವರಿಷ್ಠರು ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನೆನಪಿಸಿದ್ದೇನೆ. ‘ಗೊತ್ತಿದೆ ಕಣಯ್ಯ’ ಎಂದು ಅವರೂ ಹೇಳಿದ್ದಾರೆ. ‌ಪ‍ಕ್ಷಕ್ಕೆ ನಿಷ್ಠನಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುತ್ತಿದ್ದೇನೆ. ಈ ಚುನಾವಣೆಯಲ್ಲಿ ನನಗೆ ಅವಕಾಶ ನೀಡುವ ವಿಶ್ವಾಸವಿದೆ’ ಎಂದು ಜಿ.ಎನ್‌.ನಂಜುಂಡಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸಿ.ಎಂಗೆ ಮನವಿ ಮಾಡಿದ್ದೇನೆ’

‘ನಾನು ಟಿಕೆಟ್‌ ಆಕಾಂಕ್ಷಿ ನಿಜ. 1977ರಿಂದಲೂ ಸಾರ್ವಜನಿಕ ಜೀವನವದಲ್ಲಿದ್ದೇನೆ. ಕಾಂಗ್ರೆಸ್‌ಗಾಗಿ ದುಡಿಯುತ್ತಿದ್ದೇನೆ. ಈವರೆಗೂ ಯಾವುದೇ ಅಧಿಕಾರ ಸ್ಥಾನಮಾನ ಪಡೆದಿಲ್ಲ. ನನಗೊಂದು ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಅವರು ಭರವಸೆಯನ್ನೂ ನೀಡಿದ್ದಾರೆ’ ಎಂದು ಪು.ಶ್ರೀನಿವಾಸ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT