ಶನಿವಾರ, ಜುಲೈ 31, 2021
24 °C
ಗರ್ಭಿಣಿ, ಎರಡು ವರ್ಷದ ಮಗು ಸೇರಿ 19 ಮಂದಿಗೆ ಸೋಂಕು, ಪ್ರಕರಣಗಳ ಸಂಖ್ಯೆ 102

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೋವಿಡ್‌–19 ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಮೊದಲ ಕೋವಿಡ್‌–19 ಪ್ರಕರಣ ವರದಿಯಾಗಿ (ಜೂನ್‌ 8) 27 ದಿನಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ಶತಕ ದಾಟಿದೆ. 

ಹನೂರು ತಾಲ್ಲೂಕಿನ ಲೊಕ್ಕನಹಳ್ಳಿಯ 24 ವರ್ಷದ ಗರ್ಭಿಣಿ, ಚಾಮರಾಜನಗರದ ಎರಡು ವರ್ಷದ ಹೆಣ್ಣು ಮಗು ಸೇರಿದಂತೆ 19 ಮಂದಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 102 ಮಂದಿಗೆ ಕೋವಿಡ್‌–19 ತುತ್ತಾಗಿದ್ದಾರೆ. ನಾಲ್ವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 98 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಜೂನ್‌ 8ರಂದು ಮುಂಬೈನಿಂದ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿದ್ದು ಜಿಲ್ಲೆಯ ಮೊದಲ ಪ್ರಕರಣ. ಜೂನ್‌ 19ರಂದು ಗುಂಡ್ಲುಪೇಟೆ ಚಾಲಕರೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಎರಡನೇ ಪ್ರಕರಣ. ಅದಾಗಿ ಎರಡು ವಾರಗಳಲ್ಲಿ ಕೋವಿಡ್‌–19 ಪೀಡಿತರ ಸಂಖ್ಯೆ 100 ದಾಟಿದೆ. 

ಸದ್ಯ ಜಿಲ್ಲೆಯಲ್ಲಿರುವ ಕೋವಿಡ್‌ ಆಸ್ಪತ್ರೆಯಲ್ಲಿ 98 ಹಾಸಿಗೆಗಳಿದ್ದು, ಅಷ್ಟೇ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ತಗುಲಿದ್ದರೂ, ರೋಗ ಲಕ್ಷಣ ಇಲ್ಲದವರನ್ನು ಕೋವಿಡ್‌ ಕೇರ್‌ ಕೇಂದ್ರಗಳಿಗೆ ವರ್ಗಾಯಿಸಲು ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದೆ. ಇದರ ಜೊತೆಗೆ 17 ಮಂದಿ ಪೂರ್ಣ ಪ‍್ರಮಾಣದಲ್ಲಿ ಚೇತರಿಸಿಕೊಂಡಿದ್ದು, ಅವರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ವರದಿ ನೆಗೆಟಿವ್‌ ಬಂದರೆ ಅವರು ಮನೆಗೆ ತೆರಳಲಿದ್ದಾರೆ.

ಭಾನುವಾರ ದೃಢಪಟ್ಟ ಪ್ರಕಣಗಳಲ್ಲಿ 12 ಪ್ರಕರಣಗಳು ಗುಂಡ್ಲುಪೇಟೆ ತಾಲ್ಲೂಕಿನದು. ಚಾಮರಾಜನಗರ, ಯಳಂದೂರು ಹಾಗೂ ಹನೂರು ತಾಲ್ಲೂಕುಗಳಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ. ಕೊಳ್ಳೇಗಾಲದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. 

19 ಮಂದಿಯ ಪೈಕಿ 12 ಮಂದಿ ಸೋಂಕಿತರ ಸಂಪರ್ಕಿತರು. ಬೆಂಗಳೂರಿನಿಂದ ಬಂದವರು ಇಬ್ಬರು ಇದ್ದಾರೆ. ಉಳಿದ ಗರ್ಭಿಣಿ ಸೇರಿದಂತೆ ಉಳಿದ ಐವರಿಗೆ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ಆರೋಗ್ಯ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಕೋವಿಡ್‌ಗೆ ತುತ್ತಾದವರಲ್ಲಿ 13 ಮಂದಿ ಮಹಿಳೆಯರು. ಆರು ಮಂದಿ ಪುರುಷರು. 

ಭಾನುವಾರ 606 ಮಂದಿಯ ಗಂಟಲ ದ್ರವದ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 587 ಮಾದರಿಗಳ ವರದಿ ನೆಗೆಟಿವ್‌ ಬಂದಿದೆ. ಭಾನುವಾರ 776 ಗಂಟಲ ದ್ರವ ಮಾದರಿಗಳನ್ನು ಕೋವಿಡ್‌ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು,  ಒಟ್ಟು 1,204 ಮಂದಿಯ ವರದಿ ಬರಬೇಕಿದೆ. 

ಸಂಪರ್ಕಿತರ ಸಂಖ್ಯೆ 980ಕ್ಕೆ: ಈ ಮಧ್ಯೆ, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಸಂಖ್ಯೆ 980ಕ್ಕೆ ಏರಿದೆ. ಭಾನುವಾರ 106 ಮಂದಿಯನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಲಾಗಿದ್ದು, ಇವರ ಒಟ್ಟು ಸಂಖ್ಯೆ 543ಕ್ಕೆ ತಲುಪಿದೆ. ಹೊಸದಾಗಿ 35 ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಒಟ್ಟು ಸಂಖ್ಯೆ 437ಕ್ಕೆ ತಲುಪಿದೆ. ಎಲ್ಲರನ್ನೂ ಮನೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ.

ಹನೂರು: ಮೂರು ಕಂಟೈನ್‌ಮೆಂಟ್‌ ವಲಯ

ಹನೂರು: ತಾಲ್ಲೂಕಿನ ಗೋಪಿಶೆಟ್ಟಿಯೂರು, ಲೊಕ್ಕನಹಳ್ಳಿ ಹಾಗೂ ಮಂಗಲ ಗ್ರಾಮಗಳಲ್ಲಿ ಕೋವಿಡ್‌–19 ದೃಢಪಟ್ಟಿರುವುದರಿಂದ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮೂರು ಗ್ರಾಮಗಳಲ್ಲಿ ಸೋಂಕಿತರು ಇದ್ದ ಬಡಾವಣೆಯನ್ನು ಸೀಲ್‍ಡೌನ್ ಮಾಡಿದ್ದಾರೆ.

ಗೋಪಿಶೆಟ್ಟಿಯೂರು ಗ್ರಾಮದ ನಿವಾಸಿಗೆ ಮೂರು ದಿನಗಳ ಹಿಂದೆ ಜ್ವರ ಕಂಡು ಬಂದಿದ್ದರಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾಗ ಚಿಕಿತ್ಸೆ ನೀಡಿ ಆತನ ರಕ್ತ ಹಾಗೂ ಗಂಟಲಿನ ದ್ರವ ಪರೀಕ್ಷೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಶುಕ್ರವಾರ ಪಾಸಿಟಿವ್ ವರದಿ ಬಂದಿರುವುದರಿಂದ ಆತನಿಗೆ ಚಿಕಿತ್ಸೆ ನೀಡಿದ್ದ ರಾಮಾಪುರ ವೈದ್ಯಾಧಿಕಾರಿ ಸೇರಿದಂತೆ 4 ಜನ ವೈದ್ಯಕೀಯ ಸಿಬ್ಬಂದಿಗಳನ್ನು ದ್ವಿತೀಯ ಸಂಪರ್ಕದಲ್ಲಿದ್ದವರು ಎಂದು ಗುರುತಿಸಿ ಕೋವಿಡ್‌ ತಪಾಸಣೆ ನಡೆಸಿ, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಹಿಸಿಕೊಡಲಾಗಿತ್ತು‌. ಇವರ ವರದಿ ನೆಗಟಿವ್ ಬಂದಿದೆ.

ಲೊಕ್ಕನಹಳ್ಳಿ ಗ್ರಾಮದಲ್ಲಿ ಗರ್ಭಿಣಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಂಗಲ ಗ್ರಾಮದ ಮಹಿಳೆಯೊಬ್ಬರು ಗುರುವಾರ ಕೊಳ್ಳೇಗಾಲದಲ್ಲಿ ಪರೀಕ್ಷೆಗಾಗಿ ಗಂಟಲ ದ್ರವ ನೀಡಿದ್ದರು. ಬಳಿಕ ಸಮೀಪದ ಕಣ್ಣೂರು ಗ್ರಾಮದ ಸಂಬಂಧಿಕರ ಮನೆಗೆ ಶನಿವಾರ ಬಂದಿದ್ದರು. ಭಾನುವಾರ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಶೌಚಾಲಯ ಇಲ್ಲದೆ ಕುಟುಂಬದ ಪರದಾಟ

ಚಾಮರಾಜನಗರದ ಸೋಮವಾರಪೇಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿರುವುದರಿಂದ ಅವರ ಮನೆಯ ಬಳಿ ಸೀಲ್‌ಡೌನ್‌ ಮಾಡಿ, ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ. 

ಈ ವಲಯದಲ್ಲಿರುವ ಮನೆಯೊಂದಕ್ಕೆ ಶೌಚಾಲಯ ಇಲ್ಲದೇ ಇರುವುದರಿಂದ, ಆ ಮನೆಯ ಸದಸ್ಯರು ಶೌಚಕ್ಕೆ ಹೋಗಲು ಪರದಾಟ ನಡೆಸುತ್ತಿದ್ದಾರೆ. ಪತಿ, ಪತ್ನಿ, ಮಗ, ಮಗಳು ಮನೆಯಲ್ಲಿದ್ದಾರೆ. ಕಂಟೈನ್‌ಮೆಂಟ್‌ ವಲಯ ಆಗಿರುವುದರಿಂದ ಹೊರಗಡೆ ಹೋಗುವಂತಿಲ್ಲ. ಅದೇ ಬೀದಿಯ ಇನ್ನೊಂದು ಮನೆಯಲ್ಲೂ ಶೌಚಾಲಯ ಇಲ್ಲ. ಆದರೆ, ಆ ಮನೆ ಬಫರ್‌ ವಲಯದಲ್ಲಿ ಬರುವುದರಿಂದ ಓಡಾಡುವುದಕ್ಕೆ ತೊಂದರೆ ಇಲ್ಲ.

‘ಬಹಿರ್ದೆಸೆಗೆ ಹೋಗಲು ಆಗುತ್ತಿಲ್ಲ. ಹೊರಗಡೆ ಹೋದರೆ ಜನರು ಬೈಯುತ್ತಿದ್ದಾರೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ. ಅಧಿಕಾರಿಗಳು ಏನಾದರೂ ವ್ಯವಸ್ಥೆ ಮಾಡಬೇಕು’ ಎಂದು ಶೌಚಾಲಯದ ಇಲ್ಲದ ಮನೆಯ ಮಹಿಳೆ ‘ಪ್ರಜಾವಾಣಿ’ಗೆ ತಿಳಿಸಿದರು. 

ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಿದರೆ, ಅವರ ಸಮಸ್ಯೆ ಬಗೆಹರಿಸಬಹುದು ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶರವಣ ಅವರು, ‘ಬೆಳಿಗ್ಗೆ ಭೇಟಿ ನೀಡಿದ್ದೆ. ಮನೆಯವರು ನಮ್ಮ ಗಮನಕ್ಕೆ ಈ ವಿಚಾರವನ್ನು ಗಮನಕ್ಕೆ ತಂದಿಲ್ಲ. ಪರಿಶೀಲಿಸಿ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು