ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಆಮ್ಲಜನಕ ದುರಂತಕ್ಕೆ ವರ್ಷ: ಸಂತ್ರಸ್ತರಿಗೆ ಸಿಗದ ನ್ಯಾಯ

13 ಕುಟುಂಬಗಳಿಗೆ ₹5 ಲಕ್ಷ ಪರಿಹಾರ, 11 ಕುಟುಂಬಗಳಿಗೆ ₹2 ಲಕ್ಷ, ತಪ್ಪಿತಸ್ಥರಿಗೆ ಆಗದ ಶಿಕ್ಷೆ
Last Updated 1 ಮೇ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೆ ಹಲವಾರು ರೋಗಿಗಳು ಮೃತಪಟ್ಟ ಪ‍್ರಕರಣಕ್ಕೆ ಸೋಮವಾರ (ಮೇ 2) ವರ್ಷ ತುಂಬುತ್ತದೆ.

ಮೃತಪಟ್ಟವರಲ್ಲಿ 24 ಮಂದಿಯ ಕುಟುಂಬಗಳಿಗೆ ಹೈಕೋರ್ಟ್‌ ಸೂಚನೆಯಂತೆ ಸ್ವಲ್ಪ ಪರಿಹಾರವನ್ನು ಸರ್ಕಾರ ನೀಡಿದ್ದು ಬಿಟ್ಟರೆ, ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಸಿಗುವಂತಹ ಬೆಳವಣಿಗೆಗಳು ಏನೂ ನಡೆದಿಲ್ಲ. ಬಡಕುಟುಂಬಗಳು ಈಗಲೂ ನ್ಯಾಯದ ನಿರೀಕ್ಷೆಯಲ್ಲಿವೆ.

‘ಜಿಲ್ಲಾಡಳಿತ ಹಾಗೂ ಆಸ್ಪತ್ರೆಯ ಆಡಳಿತದ ನಿರ್ಲಕ್ಷ್ಯದಿಂದಾಗಿಯೇ ಈ ದುರಂತ ಸಂಭವಿಸಿದೆ’ ಎಂದು ಹೈಕೋರ್ಟ್‌ ನೇಮಿಸಿದ್ದ ತನಿಖಾ ಸಮಿತಿ ಹೇಳಿತ್ತು. ಆದರೆ, ಇದುವರೆಗೆ ಯಾವೊಬ್ಬ ಅಧಿಕಾರಿ, ವೈದ್ಯಾಧಿಕಾರಿಯ ವಿರುದ್ಧವೂ ಸರ್ಕಾರ ಕ್ರಮಕೈಗೊಂಡಿಲ್ಲ.

ಸರ್ಕಾರದ ಅಂಕಿ ಅಂಶಗಳಲ್ಲಿ ಆ ದಿನ 24 ಮಂದಿ ಮೃತಪಟ್ಟಿದ್ದಾರೆ ಎಂದಿದೆ. 36 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಕರಣದ ತನಿಖೆಗಾಗಿ ಹೈಕೋರ್ಟ್‌ ನೇಮಿಸಿದ್ದ ತನಿಖಾ ಸಮಿತಿ ಅಭಿಪ್ರಾಯಪಟ್ಟಿತ್ತು. ಮೇ 2ರಂದು ರಾತ್ರಿಯೇ ಎಲ್ಲರೂ ಕೊನೆಯುಸಿರೆಳೆಯದಿದ್ದರೂ, ಆ ಅವಧಿಯಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಅದರ ಪರಿಣಾಮದಿಂದ ಕೆಲವು ದಿನಗಳ ನಂತರ ರೋಗಿಗಳು ಮೃತಪಟ್ಟಿರಬಹುದು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಪ್ರಕರಣವುಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಸರ್ಕಾರವು ತನಿಖೆಗಾಗಿ ನೇಮಿಸಿದ್ದ ಏಕ ಸದಸ್ಯ ಸಮಿತಿಯ ವರದಿ ಇನ್ನೂ ಬಹಿರಂಗ‌ವಾಗಿಲ್ಲ.

ಅಲ್ಪ ಪರಿಹಾರ:ಹೈಕೋರ್ಟ್‌ನ ಸೂಚನೆಯಂತೆ, ಮೃತಪಟ್ಟ 24 ಮಂದಿಯ ಕುಟುಂಬಗಳಿಗೆ ಕಳೆದ ವರ್ಷದ ಜೂನ್‌ ತಿಂಗಳ ಆರಂಭದಲ್ಲಿ ತಲಾ ₹2 ಲಕ್ಷ ಹಾಗೂ ಆಗಸ್ಟ್‌ ಎರಡನೇ ವಾರದಲ್ಲಿ 13 ಮಂದಿಯ ಕುಟುಂಬಗಳಿಗೆ ಹೆಚ್ಚುವರಿಯಾಗಿ ತಲಾ ₹3 ಲಕ್ಷ ಹಣವನ್ನು ತಾತ್ಕಾಲಿಕ ಪರಿಹಾರವಾಗಿ ಜಿಲ್ಲಾಡಳಿತ ವಿತರಿಸಿದೆ.ಮೇ 2ರ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ5ಗಂಟೆಯ ಅವಧಿಯಲ್ಲಿ ಮೃತಪಟ್ಟ ಕೋವಿಡ್‌ ರೋಗಿಗಳನ್ನು ಮಾತ್ರ ಹೆಚ್ಚುವರಿ ಪರಿಹಾರಕ್ಕೆ ಪರಿಗಣಿಸಲಾಗಿದೆ.

ಕೆಲವು ಕುಟುಂಬಗಳಿಗೆ ಮಾತ್ರ ಹೆಚ್ಚುವರಿ ಪರಿಹಾರ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಮೃತಪಟ್ಟ ಎಲ್ಲ 36 ಮಂದಿಯ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.

ಸಿಗದ ಪರಿಹಾರ: ದುರಂತದಲ್ಲಿ ಕೋವಿಡ್‌ ರೋಗಿಗಳು ಮಾತ್ರವಲ್ಲದೇ, ಕೋವಿಡ್‌ ಲಕ್ಷಣ ಇದ್ದರೂ ಸೋಂಕು ದೃಢಪಡದೆ ಇದ್ದವರೂ ಮೃತಪಟ್ಟಿದ್ದರು ಅವರ ಕುಟುಂಬದವರಿಗೆ ಪರಿಹಾರ ಸಿಕ್ಕಿಲ್ಲ.

ಆದರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ಎಲ್ಲ 36 ಮಂದಿಯ ಮನೆಗಳಿಗೆ ಭೇಟಿ ನೀಡಿ ತಲಾ ₹1 ಲಕ್ಷ ಪರಿಹಾರ ನೀಡಿದೆ.

ಹೋರಾಟ ನಡೆಸಿದ್ದ ಎಸ್‌ಡಿಪಿಐ: ಜಿಲ್ಲೆಯಲ್ಲಿ ದೊಡ್ಡ ದುರಂತ ನಡೆದಿದ್ದರೂ, ಎಸ್‌ಡಿಪಿಐ ಬಿಟ್ಟು, ಇತರ ಸಂಘ ಸಂಸ್ಥೆಗಳು, ಸಂಘಟನೆಗಳು ಹೋರಾಟ ನಡೆಸಲಿಲ್ಲ.

ಕಾಂಗ್ರೆಸ್‌ ಆರಂಭದಲ್ಲಿ ಪ್ರತಿಭಟನೆ ನಡೆಸಿದ್ದು ಬಿಟ್ಟರೆ, ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲಿಲ್ಲ. ಆದರೆ, ಎಸ್‌ಡಿಪಿಐ ಮುಖಂಡರು ಮಾತ್ರ ಆರಂಭದಿಂದಲೂ ಘಟನೆಯ ವಿರುದ್ಧ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಮಾಡುತ್ತಲೇ ಇದ್ದಾರೆ. ಸಂತ್ರಸ್ತರ ಕುಟುಂಬಗಳನ್ನು ರಾಜ್ಯಪಾಲರ ಬಳಿಗೂ ಕರೆದುಕೊಂಡು ಹೋಗಿ ಮನವಿ ಕೊಡಿಸಿದ್ದಾರೆ. ಸಂತ್ರಸ್ತರಿಗೆ ದಾಖಲೆಗಳ ಸಂಗ್ರಹ, ಸರ್ಕಾರಿ ಕಚೇರಿಗಳಲ್ಲಿ ಮಾಡಬೇಕಾದ ಕೆಲಸ ಸೇರಿದಂತೆ ಎಲ್ಲದಕ್ಕೂ ನೆರವಾಗಿದ್ದಾರೆ.

ಮೇ 2ರಂದು ನಡೆದಿದ್ದೇನು?

ಮೇ 2ರಂದು ಜಿಲ್ಲೆಯ ಕೋವಿಡ್‌ ಆಸ್ಪತ್ರೆಗೆ ಮೈಸೂರಿನಿಂದ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೇ ಇದ್ದುದರಿಂದ ರಾತ್ರಿ 10.30ರಿಂದ ಬೆಳಗಿನ ಜಾವ 2.30ರವರೆಗೆ ಆಮ್ಲಜನಕದ ಕೊರತೆ ಉಂಟಾಗಿತ್ತು. ಆ ಅವಧಿಯಲ್ಲಿ ವೆಂಟಿಲೇಟರ್‌, ಐಸಿಯು, ಆಮ್ಲಜನಕದ ನೆರವಿನಲ್ಲಿದ್ದ ಹಲವು ರೋಗಿಗಳು ಕೊನೆಯುಸಿರೆಳೆದಿದ್ದರು.

ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಎರಡೂ ಜಿಲ್ಲೆಯ ಉನ್ನತ ಅಧಿಕಾರಿಗಳ ನಡುವೆ ಗುದ್ದಾಟವೂ ನಡೆದಿತ್ತು.

‘ನಮಗೆ ನ್ಯಾಯ ಸಿಕ್ಕಿಲ್ಲ’

ದುರಂತದಲ್ಲಿ ನನ್ನ ಅಣ್ಣನನ್ನು ಕಳೆದುಕೊಂಡು ಒಂದು ವರ್ಷವಾಯಿತು. ನಮಗೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಿಕ್ಕಿಲ್ಲ. ಹೈಕೋರ್ಟ್‌ ಸೂಚನೆ ಕೊಟ್ಟ ಬಳಿಕ ಸರ್ಕಾರ ಸ್ವಲ್ಪ ಪರಿಹಾರ ಕೊಟ್ಟಿದೆ. ನಮಗೆ ದುಡ್ಡೇನು ಮುಖ್ಯವಲ್ಲ. ನಿರ್ಲಕ್ಷ್ಯ ವಹಿಸಿ ಇಂತಹ ಘಟನೆಗೆ ಕಾರಣರಾದ ಜಿಲ್ಲಾಡಳಿತದ ಅಧಿಕಾರಿಗಳು, ಆಸ್ಪತ್ರೆಯ ವೈದ್ಯರು ಅಥವಾ ಆಮ್ಲಜನಕ ಪೂರೈಕೆ ಹೊಣೆ ಹೊತ್ತವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಗರದ ನಿವಾಸಿ, ನಗರಸಭೆ ಸದಸ್ಯರೂ ಆಗಿರುವ ಸಿ.ಜಿ.ಚಂದ್ರಶೇಖರ್‌ ಹೇಳಿದರು.

‘ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಹೈಕೋರ್ಟ್‌ ನೇಮಿಸಿದ್ದ ಸಮಿತಿಯೂ ಅದನ್ನೇ ಹೇಳಿದೆ. ಹಿಂದಿನ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೇರಿದಂತೆ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಂದಿನಿಂದಲೇ ಒತ್ತಾಯಿಸುತ್ತಾ ಬಂದಿದ್ದೇವೆ. ಕನಿಷ್ಠ ಪಕ್ಷ ಯಾರೊಬ್ಬರ ಅಮಾನತು ಕೂಡ ಆಗಿಲ್ಲ. ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ನ್ಯಾಯ ಸಿಕ್ಕಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

--

ನಾವು ಆರಂಭದಿಂದಲೂ ಸಂತ್ರಸ್ತರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇನ್ನೂ ಮಾಡುತ್ತೇವೆ. ಸೋಮವಾರ ಪ್ರತಿಭಟನೆಯನ್ನೂ ನಡೆಸಲಿದ್ದೇವೆ.

ಎಂ.ಮಹೇಶ್‌, ‌ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT