ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್‌ ಉಲ್ಲಂಘಿಸಿದ ಕೊಳ್ಳೇಗಾಲ ನಗರಸಭೆಯ ಏಳು ಬಿಎಸ್‌ಪಿ ಸದಸ್ಯರು ಅನರ್ಹ

ಕೊಳ್ಳೇಗಾಲ ನಗರಸಭೆ: ಮಹೇಶ್‌ ಬಣಕ್ಕೆ ಹಿನ್ನಡೆ, ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶ
Last Updated 6 ಸೆಪ್ಟೆಂಬರ್ 2021, 16:51 IST
ಅಕ್ಷರ ಗಾತ್ರ

ಚಾಮರಾಜನಗರ: ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದ್ದ, ನಗರಸಭೆ ಅಧ್ಯಕ್ಷೆ ಗಂಗಮ್ಮ ಸೇರಿದಂತೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಏಳು ಮಂದಿಯ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಎಲ್‌.ನಾಗಮಣಿ (2ನೇ ವಾರ್ಡ್‌), ನಾಸೀರ್‌ ಷರೀಫ್‌ (7ನೇ ವಾರ್ಡ್‌), ಎನ್‌.ಪವಿತ್ರ (13ನೇ ವಾರ್ಡ್), ಪ್ರಕಾಶ್‌ (21ನೇ ವಾರ್ಡ್‌), ರಾಮಕೃಷ್ಣ (25ನೇ ವಾರ್ಡ್‌), ನಾಗಸುಂದ್ರಮ್ಮ (26ನೇ ವಾರ್ಡ್‌) ಅವರು ಸದಸ್ಯತ್ವದಿಂದ ಅನರ್ಹರಾದ ಇತರ ಆರು ಸದಸ್ಯರು.

ನಗರಸಭಾ ಚುನಾವಣೆಯಲ್ಲಿ ಬಿಎಸ್‌ಪಿಯ ಒಂಬತ್ತು ಮಂದಿ ಗೆದ್ದಿದ್ದರು. ಈ ಪೈಕಿ ಈ ಏಳು ಮಂದಿಶಾಸಕ ಎನ್‌.ಮಹೇಶ್‌ ಅವರ ಬೆಂಬಲಿಗರು. ಎನ್‌.ಮಹೇಶ್‌ ಅವರನ್ನು ಬಿಎಸ್‌ಪಿಯಿಂದ ಉಚ್ಚಾಟನೆ ಮಾಡಿದ ಬಳಿಕ ಇವರು ಕೂಡ ಪಕ್ಷದಿಂದ ದೂರವಾಗಿ ಮಹೇಶ್‌ ಅವರೊಂದಿಗೆ ಗುರುತಿಸಿಕೊಂಡಿದ್ದರು.

2020ರ ಅಕ್ಟೋಬರ್‌ 29ರಂದು ಕೊಳ್ಳೇಗಾಲದ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಬಿಎಸ್‌ಪಿಯಿಂದ 23ನೇ ವಾರ್ಡ್‌ ಸದಸ್ಯೆ ಜಯಮೇರಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಪಕ್ಷದ ವತಿಯಿಂದ ಎಲ್ಲ ಸದಸ್ಯರಿಗೂ ವಿಪ್‌ ಜಾರಿಗೊಳಿಸಲಾಗಿತ್ತು. ಆದರೆ, ಇದನ್ನು ಉಲ್ಲಂಘಿಸಿದ್ದ ಏಳು ಸದಸ್ಯರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 6ನೇ ವಾರ್ಡ್‌ ಗಂಗಮ್ಮ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಬಿಜೆಪಿಯ ಕವಿತ ಅವರು (8ನೇ ವಾರ್ಡ್‌) ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದರು.

ಪಕ್ಷದ ಏಳು ಸದಸ್ಯರು ವಿಪ್‌ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜಯಮೇರಿ ಅವರು ಕರ್ನಾಟಕ ಸ್ಥಳೀಯ ಪ್ರಾಧಿಕಾರದಗಳ (ಪಕ್ಷಾಂತರ ನಿಷೇಧ) ಕಾಯ್ದೆ–1987ರ ಸೆಕ್ಷನ್‌ 4 (i)(ಎ)(ಬಿ) ಅಡಿಯಲ್ಲಿ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದರು. ಆಯುಕ್ತರು ಅದನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ರವಾನಿಸಿದ್ದರು.

ಎಂಟು ತಿಂಗಳ ವಾದ ಪ್ರತಿವಾದದ ಬಳಿಕ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದಾರೆ.

‘ಬಹುಜನ ಸಮಾಜ ಪಕ್ಷದ ಕೌನ್ಸಿಲರ್‌ಗಳು ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ನಿರ್ದೇಶನಕ್ಕೆ ವಿರುದ್ಧವಾಗಿ ಮತಚಲಾಯಿಸಿರುವುದು ಸಾಬೀತಾಗಿದೆ. ಅಕ್ಟೋಬರ್‌ 29ರಂದು ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಸಭೆಯ ನಂತರ 15 ದಿನಗಳಲ್ಲಿ ಪಕ್ಷವು ವಿಪ್‌ ಉಲ್ಲಂಘನೆ ಮಾಡಿದ ಸದಸ್ಯರನ್ನು ಮನ್ನಿಸದ ಕಾರಣದಿಂದ ಸೆಕ್ಷನ್‌ 3(1)(ಬಿ) ಅಡಿಯಲ್ಲಿ ಪಕ್ಷಾಂತರದ ಆಧಾರದ ಮೇಲೆ ಅನರ್ಹತೆಯನ್ನು ಆಕರ್ಷಿಸುತ್ತದೆ’ ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ –1987ರ ಸೆಕ್ಷನ್‌ 3(1)(ಎ)(ಬಿ) ಅನ್ವಯ ಆದೇಶ ಹೊರಡಿಸಿರುವ ಡಾ.ಎಂ.ಆರ್.ರವಿ ಅವರು, ‘ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ ಸೆಕ್ಷನ್‌ 4(2)(iii)ರಲ್ಲಿ ನೀಡಲಾಗಿರುವ ಅಧಿಕಾರದ ಅನ್ವಯ ಏಳು ಸದಸ್ಯರನ್ನು ಕೊಳ್ಳೇಗಾಲ ನಗರಸಭೆ ಸದಸ್ಯತ್ವದ ಅನ್ವಯ ಅನರ್ಹಗೊಳಿಸಿ ಆದೇಶಿಸಿರುತ್ತೇನೆ’ ಎಂದು ಹೇಳಿದ್ದಾರೆ.

---

ವಿಪ್‌ ಉಲ್ಲಂಘಿಸಿದ್ದರ ವಿರುದ್ಧ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೆವು. ಈಗ ನಮ್ಮ ಪರವಾಗಿ ಆದೇಶವಾಗಿದೆ
– ಎನ್‌.ನಾಗಯ್ಯ, ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT