ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಲ್ಲಿ ಜಲಕ್ಷಾಮ: ಜಿಂಕೆಗಳ ಸಾವು..!

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬತ್ತಿದ ಜಲಮೂಲಗಳು, ಅರಣ್ಯ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ
Published 18 ಏಪ್ರಿಲ್ 2024, 20:42 IST
Last Updated 18 ಏಪ್ರಿಲ್ 2024, 20:42 IST
ಅಕ್ಷರ ಗಾತ್ರ

ಹನೂರು (ಚಾಮರಾಜನಗರ): ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮದಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿ ತಲೆದೋರಿದ್ದು, ನೀರು ಅರಸಿ ಕಾಡಂಚಿಗೆ ಬರುತ್ತಿರುವ ಜಿಂಕೆಗಳು ಅಸ್ವಸ್ಥಗೊಂಡು ಮೃತಪಡುತ್ತಿವೆ. ಅಲ್ಲದೇ, ಬೀದಿನಾಯಿಗಳ ದಾಳಿಯಿಂದಲೂ ಸಾವಿಗೀಡಾಗುತ್ತಿವೆ.

ವನ್ಯಧಾಮದ ಕೊಳ್ಳೇಗಾಲ ಬಫರ್, ಹನೂರು ಬಫರ್, ಪಿ.ಜಿ ಪಾಳ್ಯ, ಹೂಗ್ಯಂ, ರಾಮಾಪುರ, ಮಹದೇಶ್ವರ ಬೆಟ್ಟ ಹಾಗೂ ಪಾಲಾರ್ ವನ್ಯಜೀವಿ ವಲಯಗಳಲ್ಲಿರುವ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ಸಂಪೂರ್ಣವಾಗಿ ಬತ್ತಿವೆ. ಕೆಲವು ಕೆರೆಗಳಲ್ಲಿ ನೀರು ತಳಸೇರಿದ್ದು, ಕೆಸರಿನಿಂದ ಕೂಡಿದೆ. ಹೀಗಾಗಿ ವನ್ಯಪ್ರಾಣಿಗಳು ನೀರಿಗಾಗಿ ಅಲೆದಾಡುವಂತಾಗಿದೆ.

ಕಳೆದ ವರ್ಷ ಸಮರ್ಪಕ ಮಳೆಯಾಗದ ಕಾರಣ, ಜಲಮೂಲಗಳು ಮಾರ್ಚ್‌ ವೇಳೆಗೇ ಬತ್ತಿ ಹೋಗಿವೆ. ಹೀಗಾಗಿ ನೀರಿಗೆ ಹಾಹಾಕಾರ ಉಂಟಾಗಿದೆ.

‘ಮಲೆಮಹದೇಶ್ವರ ವನ್ಯಧಾಮಕ್ಕೆ ಹೊಂದಿಕೊಂಡು ತಮಿಳುನಾಡಿನ ಅರಣ್ಯವೂ ಇದ್ದು, ಅಲ್ಲಿಂದಲೂ ಪ್ರಾಣಿಗಳು ಬಂದು ನೀರಿಗಾಗಿ ಗ್ರಾಮಗಳಿಗೆ ನುಗ್ಗುತ್ತಿವೆ. ಇಲಾಖೆ ವತಿಯಿಂದ ನೀರು ಪೂರೈಕೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬಿಗಡಾಯಿಸಲಿದೆ’ ಎನ್ನುತ್ತಾರೆ ಇಲಾಖೆ ಸಿಬ್ಬಂದಿ.

ಜಿಂಕೆಗಳ ಸಾವು: ನೀರನ್ನು ಹುಡುಕುತ್ತಾ ಜಿಂಕೆಗಳು ಜಮೀನುಗಳ ಕಡೆಗೆ ಹೆಚ್ಚು ಬರುತ್ತಿದ್ದು, ನಿರ್ಜಲೀಕರಣದಿಂದಾಗಿ ಮೃತಪಡುತ್ತಿವೆ. ಹನೂರು ಬಫರ್, ರಾಮಾಪುರ, ಹೂಗ್ಯಂ ಹಾಗೂ ಪಿ.ಜಿ.ಪಾಳ್ಯ ವನ್ಯಜೀವಿ ವಲಯಗಳಲ್ಲಿ ಇಂತಹ ಘಟನೆಗಳು ನಡೆದಿರುವುದನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ದೃಢಪಡಿಸಿದ್ದಾರೆ. ನಾಡಿನತ್ತ ಬರುವ ಜಿಂಕೆಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು, ಇದರಿಂದಾಗಿಯೂ ಮೃತಪಡುತ್ತಿವೆ. ಈ ಭಾಗದಲ್ಲಿ 25ಕ್ಕೂ ಹೆಚ್ಚು ಜಿಂಕೆಗಳು ಮೃತಪಟ್ಟಿವೆ ಎಂದು ಮೂಲಗಳು ತಿಳಿಸಿವೆ. 

ಆನೆ ಸಾವು: ವನ್ಯಧಾಮದ ಹೂಗ್ಯ ವಲಯದಲ್ಲಿ ಇತ್ತೀಚೆಗೆ ಆನೆಯೊಂದು ಆಹಾರ ಜೀರ್ಣವಾಗದೆ ಮೃತಪಟ್ಟಿದೆ ಎನ್ನಲಾಗಿದೆ. ಕುಡಿಯಲು ಸಾಕಷ್ಟು ನೀರು ಸಿಗದಿರುವುದರಿಂದಲೇ ಹೀಗಾಗಿರಬಹುದು ಎಂದು ಶಂಕಿಸಲಾಗಿದೆ.  

ಟ್ಯಾಂಕರ್‌ ನೀರು: ಪ್ರಾಣಿಗಳಿಗೆ ನೀರಿನ ಕೊರತೆಯಾಗದಂತೆ, ಅರಣ್ಯ ಇಲಾಖೆ ಟ್ಯಾಂಕರ್‌ ಮೂಲಕ ಕೆರೆಗಳನ್ನು ತುಂಬಿಸುತ್ತಿದೆ. ಸಿಮೆಂಟ್‌ ತೊಟ್ಟಿ, ತಾತ್ಕಾಲಿಕ ತೊಟ್ಟಿ ನಿರ್ಮಿಸಿ, ನೀರು ಪೂರೈಸುತ್ತಿದೆ. ಐದು ಕಡೆ ಸೋಲಾರ್‌ ವ್ಯವಸ್ಥೆ ಮೂಲಕ ಕೊಳವೆ ಬಾವಿಗಳಿಂದ ನೀರೆತ್ತಿ ನೀರು ಪೂರೈಸಲಾಗುತ್ತಿದೆ. ಆದರೆ, ಬಿಸಿಲಿನ ತೀವ್ರತೆ ಹೆಚ್ಚುತ್ತಿರುವುದರಿಂದ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆಯೂ ಸಾಧ್ಯವಾಗುತ್ತಿಲ್ಲ. 

ಪ್ರಾಣಿಗಳಿಗೆ ಜಲಮೂಲವಾಗಿರುವ ಪಾಲಾರ್‌ ಹಳ್ಳ ಸಂಪೂರ್ಣವಾಗಿ ಬತ್ತಿದೆ
ಪ್ರಾಣಿಗಳಿಗೆ ಜಲಮೂಲವಾಗಿರುವ ಪಾಲಾರ್‌ ಹಳ್ಳ ಸಂಪೂರ್ಣವಾಗಿ ಬತ್ತಿದೆ
ಸಂತೋಷ್‌ಕುಮಾರ್‌
ಸಂತೋಷ್‌ಕುಮಾರ್‌

ನೀರಿನ ಸಮಸ್ಯೆ ಭೀಕರವಾಗಿದೆ. ಮಳೆಯಾಗುವವರೆಗೆ ಪ್ರಾಣಿಗಳಿಗೆ ತೊಂದರೆಯಾಗದಂತೆ ಸಾಧ್ಯವಾದಷ್ಟು ಮಟ್ಟಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

–ಜಿ ಸಂತೋಷ್ ಕುಮಾರ್ ಡಿಸಿಎಫ್ ಮಲೆ ಮಹದೇಶ್ವರ ವನ್ಯಧಾಮ

ಬತ್ತಿದ ಪಾಲಾರ್ ಹಳ್ಳ

ರಾಜ್ಯ ಗಡಿಯಂಚಿನಲ್ಲಿರುವ ಪಾಲಾರ್ ಹಳ್ಳ ವನ್ಯಪ್ರಾಣಿಗಳಿಗೆ ಜೀವನಾಡಿಯಾಗಿದೆ. ಹೂಗ್ಯಂ ರಾಮಾಪುರ ಹಾಗೂ ಪಾಲಾರ್ ವನ್ಯಜೀವಿ ವಲಯಗಳ ಸಮೀಪವೇ ಹರಿಯುವ ಈ ಹಳ್ಳದಲ್ಲಿ ಈಗ ನೀರು ಬತ್ತಿದೆ. ಮಲೆಮಹದೇಶ್ವರ ವನ್ಯಧಾಮದೊಳಗೆ ಬರುವ ಉಡುತೊರೆ ಜಲಾಶಯ ಮಿಣ್ಯತ್ತಳ್ಳ ಜಲಾಶಯ ರಾಮನಗುಡ್ಡೆ ಜಲಾಶಯ ಹುಬ್ಬೆಹುಣಸೆ ಕೆರೆಗಳಲ್ಲಿ ನೀರಿನ ಪ್ರಮಾಣವೂ ಕುಸಿದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT