ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ | 9 ಕೆರೆಗಳಿಗೆ ಹೊಸ ರೂಪ

ಅವಿನ್‌ ಪ್ರಕಾಶ್‌ ವಿ
Published 23 ನವೆಂಬರ್ 2023, 5:18 IST
Last Updated 23 ನವೆಂಬರ್ 2023, 5:18 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕೆರೆಗಳ ಉಳಿವಿಗಾಗಿ, ಕೆರೆಗಳ ಅಭಿವೃದ್ಧಿಗಾಗಿ ಹಾಗೂ  ಅಂತರ್ಜಲ ವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆರಂಭಿಸಿರುವ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕಿನಾದ್ಯಂತ ಒಂಬತ್ತು ಕೆರೆಗಳು ಹೊಸ ರೂಪ ಪಡೆದಿವೆ.

ಇತ್ತೀಚೆಗೆ ಹೊಸಮಾಲಂಗಿಯ ಕೆರೆ, ಕುಂತೂರು ಕೆರೆಗಳು ಅಭಿವೃದ್ಧಿ ಹೊಂದಿದ ಕೆರೆಗಳ ಪಟ್ಟಿಗೆ ಸೇರಿವೆ.  

ತಾಲ್ಲೂಕಿನ ಪಾಳ್ಯ ಗ್ರಾಮದ ಗಿರಿ ಶೆಟ್ಟಿಕೆರೆ, ಜಕ್ಕಳಿ ಗ್ರಾಮದ ಕೆರೆ, ಮಾಲೂರು ಕೆರೆ, ಹೂಗಲ್ಲಯ್ಯನ ಕಟ್ಟೆ, ತೇರಂಬಳ್ಳಿ ಕೆರೆ, ಬಸ್ತಿಪುರ ಕೆರೆ, ಬೂದಿತಿಟ್ಟು ಕೆರೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ. ಹೊಸ ಮಾಲಂಗಿಯ ಚಿಕ್ಕಕೆರೆ ಮತ್ತು ಕುಂತೂರು ಕೆರೆಗಳ ಅಭಿವೃದ್ಧಿ ಕೆಲಸ ಬಹುತೇಕ ಮುಗಿದಿದೆ. 

ಹೂಳು ತೆಗೆದು, ನೀರು ಭರ್ತಿ

ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆಯು ಕೆರೆಗಳ ಹೂಳು ತೆಗೆದು ಕೆರೆಯನ್ನು ಸ್ವಚ್ಛಗೊಳಿಸಿ, ನೀರು ತುಂಬಿಸುತ್ತದೆ. ಕೆರೆಯ ಅಂಗಳದಿಂದ ತೆಗೆದ ಹೂಳಿನ ಮಣ್ಣನ್ನು ಗ್ರಾಮದ ರೈತರಿಗೆ ಉಚಿತವಾಗಿ ನೀಡುತ್ತದೆ.   

‘ಒಂದು ಕೆರೆಯನ್ನು ಅಭಿವೃದ್ಧಿ ಮಾಡಬೇಕಾದರೆ ₹3ಲಕ್ಷದಿಂದ ₹4 ಲಕ್ಷ ಖರ್ಚಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸರ್ಕಾರದಿಂದಾಗಲಿ ಅಥವಾ ಸಾರ್ವಜನಿಕರಿಂದಾಗಲಿ ಹಣವನ್ನು ಸಂಗ್ರಹಿಸುವುದಿಲ್ಲ. ಸಂಸ್ಥೆಯೇ ಮಾಡುತ್ತದೆ’ ಎಂದು ಯೋಜನೆಯ ಕೃಷಿ ಮೇಲ್ವಿಚಾರಕ ಚಂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇತ್ತೀಚಿನ  ದಿನಗಳಲ್ಲಿ ಕೆರೆಗಳು ಮಾಯವಾಗುತ್ತಿವೆ.  ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಕೆರೆಗಳು ಒತ್ತುವರಿಯಾಗಿವೆ. ರೈತರಿಗೆ, ಗ್ರಾಮಸ್ಥರಿಗೆ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಈ ವರ್ಷ ಮಳೆಯಾಗದ ಕಾರಣ ಗ್ರಾಮಗಳಲ್ಲಿರುವ ಕೆರೆಗಳು ಬತ್ತಿ ಹೋಗುತ್ತಿವೆ. ಊರಿನ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಭಾಗಗಳ ಅನೇಕ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು. 

15 ಹೆಚ್ಚು ಅರ್ಜಿ

ವಿವಿಧ ಗ್ರಾಮಗಳಲ್ಲಿ ಸಂಸ್ಥೆ ಕೆರೆ ಅಭಿವೃದ್ಧಿ ಮಾಡುವುದನ್ನು ಕಂಡು ಬೇರೆ ಬೇರೆ 15 ಗ್ರಾಮಗಳ ಜನರು ಸಂಸ್ಥೆಗೆ ಅರ್ಜಿ ಹಾಕಿದ್ದಾರೆ. 

‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಡವರ ಪರ ಇರುವ ಸಂಸ್ಥೆ. ಬಡವರಿಗೆ ನಿರ್ಗತಕರಿಗೆ ಹಾಗೂ ಸಾರ್ವಜನಿಕರಿಗೆ ಅನೇಕ ಅನುಕೂಲಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಅನೇಕ ಯೋಜನೆಗಳನ್ನು ರೂಪಿಸಿದೆ. ಗ್ರಾಮಗಳ ಕೆರೆಗಳ ಅಭಿವೃದ್ಧಿಯೂ ಒಂದು. ತಾಲ್ಲೂಕಿನ ಒಂಬತ್ತು ಕೆರೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಇದನ್ನು ಕಂಡು ಅನೇಕ ಗ್ರಾಮದವರು ತಮ್ಮ ಗ್ರಾಮದ ಕೆರೆಗಳನ್ನು ಅಭಿವೃದ್ಧಿ ಮಾಡಿ ಎಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಇತರ ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾ ನಿರ್ದೇಶಕ ದೀನರಾಜ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಮನೆ ಇಲ್ಲದವರಿಗೆ ಮನೆ...

ಸಂಸ್ಥೆಯು ವಾತ್ಸಲ್ಯ ಯೋಜನೆ ಅಡಿ ನಿರ್ಗತಿಕರಿಗೆ ಮನೆ ಇಲ್ಲದವರಿಗೆ ತಾಲೂಕಿನಲ್ಲಿ ಏಳು ಮನೆಗಳನ್ನು ನಿರ್ಮಿಸಿದೆ.  ಕಡು ಬಡವರನ್ನು ಗುರುತಿಸಿ ಸಹಾಯಧನವನ್ನು ನೀಡಲಾಗುತ್ತಿದೆ.  ಅಂಗವಿಕಲರಿಗೆ ಸಲಕರಣೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಟ್ಯೂಷನ್ ಮದ್ಯವರ್ಜನ ಶಿಬಿರ ಸಮುದಾಯ ಅಭಿವೃದ್ಧಿ ಕುಡಿಯುವ ನೀರಿನ ಯೋಜನೆ ರೈತರಿಗೆ ಕೃಷಿ ಯಂತ್ರಗಳು ವಿತರಣೆ ಆರೋಗ್ಯ ಶಿಬಿರ ಸ್ವಯಂ ಉದ್ಯೋಗ ಶಿಬಿರ ಜ್ಞಾನದೀಪ’ ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ದೀನರಾಜ್‌ ಶೆಟ್ಟಿ ವಿವರಿಸಿದರು. ‘ಸಂಸ್ಥೆಯು ನಮಗೆ ವಾತ್ಸಲ್ಯ ಯೋಜನೆ ಅಡಿ ಮನೆಯನ್ನು ಕಟ್ಟಿಕೊಟ್ಟಿದೆ. ಅದಕ್ಕಾಗಿ ಹಣ ಸಂಸ್ಥೆ ಹಣ ಪಡೆದಿಲ್ಲ’ ಎಂದು ವಾತ್ಸಲ್ಯ ಯೋಜನೆಯ ಫಲಾನುಭವಿ ಭಾಗ್ಯಮ್ಮ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT