ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹನೂರು: ಆಲೂಗೆಡ್ಡೆ ಬೆಳೆ ಕ್ಷೇತ್ರ ಆವರಿಸಿದ ಬೆಳ್ಳುಳ್ಳಿ

ಗುಣಮಟ್ಟದ ಬಿತ್ತನೆ ಬೀಜ ಕೊರತೆಯಿಂದಾಗಿ ಬೆಳ್ಳುಳ್ಳಿ ಮೊರೆ ಹೋದ ರೈತರು
Published : 3 ಆಗಸ್ಟ್ 2024, 8:07 IST
Last Updated : 3 ಆಗಸ್ಟ್ 2024, 8:07 IST
ಫಾಲೋ ಮಾಡಿ
Comments

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆಯುತ್ತಿದ್ದ ಆಲೂಗೆಡ್ಡೆ ಕೃಷಿ ಭೂಮಿ ಈಗ ಬಹುತೇಕ ಬೆಳ್ಳುಳ್ಳಿ ಪಾಲಾಗಿದ್ದು ರೈತರು ಬೆಳ್ಳುಳ್ಳಿ ಬೆಳೆಯಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.

 ಪಿ.ಜಿ ಪಾಳ್ಯ, ಹುತ್ತೂರು ಹಾಗೂ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರು ಆಲೂಗೆಡ್ಡೆ ಬದಲಿಗೆ ಬೆಳ್ಳುಳಿ ಫಸಲಿನ ಕಡೆಗೆ ಮುಖ ಮಾಡುತ್ತಿರುವುದು ಕಂಡುಬಂದಿದೆ. ನೂರಾರು ಎಕರೆಯಲ್ಲಿ ಆಲೂಗೆಡ್ಡೆ ಬೆಳೆಯುತ್ತಿದ್ದ ಕೃಷಿ ಭೂಮಿಯನ್ನು ಈ ಬಾರಿ ಬೆಳ್ಳುಳ್ಳಿ ಆಕ್ರಮಿಸಿಕೊಂಡಿದೆ. ಸದಾ ಶೀತದ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಲೊಕ್ಕನಹಳ್ಳಿ ಹೋಬಳಿಯ ಗ್ರಾಮಗಳು ತರಕಾರಿ ಬೆಳೆಗೆ ಹೆಚ್ಚು ಹೆಸರುವಾಸಿಯಾಗಿವೆ. ತಾಲೂಕಿನಲ್ಲಿ ತರಕಾರಿ ಬೆಳೆದು ಅದನ್ನು ರಫ್ತು ಮಾಡುವಲ್ಲಿ ಹೆಸರುವಾಸಿಯಾಗಿರುವ ಗ್ರಾಮಗಳು ವರ್ಷಪೂರ್ತಿ ಒಂದಿಲ್ಲೊಂದು ತರಕಾರಿ ಬೆಳೆಯುತ್ತಿದ್ದು ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಗಳಿಗೆ ಪೂರೈಕೆ ಮಾಡುತ್ತಾರೆ.

ಖುಷ್ಕಿ ಹಾಗೂ ನೀರಾವರಿ ಕೃಷಿ ಭೂಮಿಯಲ್ಲಿ ಯೆತೇಚ್ಛವಾಗಿ ಬೆಳೆಯುತ್ತಿದ್ದ ಆಲೂಗೆಡ್ಡೆ ರೈತರಿಗೆ ಸಮರ್ಪಕವಾಗಿ ಇಳುವರಿ ನೀಡದ ಪರಿಣಾಮ ಈಗ ರೈತರು ಬೆಳ್ಳುಳ್ಳಿ ಬೆಳೆಯತ್ತ ಹೊರಳಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಆಲೂಗೆಡ್ಡೆ ಫಸಲು ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಕಳಪೆ ಗುಣಮಟ್ಟದ ಬಿತ್ತನ ಬೀಜ ಇಳುವರಿ ಕುಸಿತಕ್ಕೆ ಕಾರಣ ಎಂದು ರೈತ ಸಂಘಟನೆ ಕಾರ್ಯಕರ್ತರು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕಡೆ ಬೊಟ್ಟು ತೋರಿಸುತ್ತಾರೆ.

ಈ ಭಾಗದಲ್ಲಿ ಆಲೂಗೆಡ್ಡೆ ಮುಖ್ಯ ಬೆಳೆಯಾಗಿರುವುದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಗುಣಮಟ್ಟದ ಬಿತ್ತನೆ ಬೀಜ ಪೂರೈಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ರೈತರು ಸಹಜವಾಗಿಯೇ ಆಲೂಗೆಡ್ಡೆ ಬೆಳೆಯಲು ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ ರೈತರು. ನಾಲ್ಕೈದು ವರ್ಷಗಳಿಂದ ರೈತರು ಆಲೂಗೆಡ್ಡೆ ಬೆಳೆದು ಕೈ ಸುಟ್ಟುಕೊಳ್ಳುತ್ತಲೇ ಇದ್ದಾರೆ. ಇದರಿಂದ ಬೇಸತ್ತು ಈ ಬಾರಿ ಬೆಳ್ಳುಳ್ಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ ಎನ್ನುತ್ತಾರೆ ರೈತರು.

ತೋಟಗಾರಿಕೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 2022-23ನೇ ಸಾಲಿನಲ್ಲಿ ಲೊಕ್ಕನಹಳ್ಳಿ ಹೋಬಳಿಯಲ್ಲಿ 210 ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಹಾಗೂ 700 ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆಯಲಾಗಿತ್ತು. 2023-24ರಲ್ಲಿ 113 ಹೆಕ್ಟೇರ್ ಬೆಳ್ಳಳ್ಳಿ, 549 ಹೆಕ್ಟೇರ್‌ನಲ್ಲಿ ಆಲೂಗೆಡ್ಡೆ ಬೆಳೆಯಲಾಗಿತ್ತು. ಪ್ರಸ್ತುತ ವರ್ಷದಲ್ಲಿ ಅಂದಾಜು 250 ಹೆಕ್ಟೇರ್‌ನಲ್ಲಿ ಮಾತ್ರ ಆಲೂಗಡ್ಡೆ, 450 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಬೆಳ್ಳುಳ್ಳಿಯನ್ನು ಬಿತ್ತನೆ ಮಾಡಲಾಗಿದೆ.

ಬಿತ್ತನೆ ಬೀಜ ದುಬಾರಿ

ಪ್ರತಿ ವರ್ಷ 50 ಕೆಜಿ ಚೀಲದ ಆಲೂಗೆಡ್ಡೆ ಬಿತ್ತನೆ ಬೀಜಕ್ಕೆ 300 ರಿಂದ 400 ರೂಪಾಯಿ ದರ ಇರುತ್ತಿತ್ತು. ಆದರೆ, ಈ ಬಾರಿ ₹1600 ರೂಪಾಯಿಗೆ ಏರಿಕೆಯಾಗಿದೆ. ಇಷ್ಟು ದುಡ್ಡು ಕೊಟ್ಟು ಬಿತ್ತನೆ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬರುತ್ತದೆ ಎಂಬುದು ರೈತರ ಅಸಮಾಧಾನ. ಪರಿಣಾಮ ರೈತರು ಸಹಜವಾಗಿ ಬೆಳ್ಳುಳ್ಳಿ ಬೆಳೆಯುವತ್ತ ಮುಂದಾಗಿದ್ದಾರೆ.

ಈಗ ಬಿತ್ತನೆ ಮಾಡಿರುವ ಬೆಳ್ಳುಳ್ಳಿಗೆ ರೋಗ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಖಾಸಗಿ ಅಂಗಡಿಗಳಲ್ಲಿ ಸಾವಿರಾರು ರೂಪಾಯಿ ಔಷಧಿ ಖರೀದಿಸಿ ಸಿಂಪಡಿಸಬೇಕಿದೆ. ಸಂಬಂಧಪಟ್ಟ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಬೇಟಿ ಪರಿಶೀಲಿಸಿದರೆ ರೈತರಿಗೆ ಸರಿಯಾದ ಮಾರ್ಗದರ್ಶನ ಸಿಗಲಿದೆ. ಆದರೆ, ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡದ ಪರಿಣಾಮ ರೈತರು ದಿಕ್ಕು ತೋಚದಂತಿದ್ದಾರೆ ಎನ್ನುತ್ತಾರೆ ಪಿ.ಜಿ ಪಾಳ್ಯ ಗ್ರಾಮದ ಸಿದ್ದರಾಜು.

ದುಬಾರಿಯಾದ ಆಲೂಗಡ್ಡೆ ಬಿತ್ತನೆ ಬೀಜದ ದರ ಇಳುವರಿಯೂ ಕಡಿಮೆ, ರೋಗ ಬಾಧೆ ಬೆಳ್ಳುಳ್ಳಿ ಬೆಳೆಯುವತ್ತ ರೈತರ ಚಿತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT