ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಬಂದಿಳಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದೆ ರೈತ ಮುಖಂಡರು ಹಲವು ಬೇಡಿಕೆಗಳನ್ನು ಇಟ್ಟರು.
ಮನವಿ ಪತ್ರವನ್ನು ಶಿವಕುಮಾರ್‌ಗೆ ನೀಡಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, 'ಕಳೆದ ಸಾಲಿನ ಕಬ್ಬಿನ ಬಾಕಿ ಪ್ರತಿ ಟನ್‌ಗೆ ₹150 ಕೊಡಿಸಲು ಹಾಗೂ ನ್ಯಾಯಾಲಯದ ತಡೆ ತೆರವುಗೊಳಿಸಲು ಸರ್ಕಾರ ಕ್ರಮ ವಹಿಸಬೇಕು’ ಎದು ಆಗ್ರಹಿಸಿದರು.
ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿ ನೀವು ಪಾದಯಾತ್ರೆ ಆಡಿದ್ದೀರಿ. ಅದರಂತೆ ಯೋಜನೆನ್ನು ತಕ್ಷಣವೇ ಜಾರಿಗೊಳಿಸಬೇಕು. ನೀರಿನ ಕೊರತೆ ಇದ್ದರೂ, ತಮಿಳುನಾಡಿಗೆ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ನೀರು ಹರಿಸುವುದನ್ನು ನಿಲ್ಲಿಸಬೇಕು. ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಬೇಕು. ಒಂದು ವೇಳೆ ನೀರು ಬಿಡಲು ಆಗದಿದ್ದರೆ ಬೆಳೆ ನಷ್ಟ ಪರಿಹಾರವನ್ನು ಎಕರೆಗೆ ₹50 ಸಾವಿರದಂತೆ ನೀಡಬೇಕು. ಕೃಷಿ ಪಂಪ್ ಸೆಟ್‌ಗೆ ಆಧಾರ್ ಲಿಂಕ್ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ 90ರಷ್ಟು ಉದ್ಯೋಗಾವಕಾಶ ನೀಡಬೇಕು. ಕೃಷಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಹಗಲಿನಲ್ಲಿ ಕನಿಷ್ಠ 10 ಗಂಟೆ ನೀಡಬೇಕು. ಕರಾ ನಿರಾಕರಣೆ ಚಳವಳಿಯ ವಿದ್ಯುತ್ ಬಾಕಿಯನ್ನು ಸರ್ಕಾರವೇ ಭರಿಸಬೇಕು. ಅನ್ನಭಾಗ್ಯ ಯೋಜನೆಗೆ ರೈತರಿಂದ ನೇರವಾಗಿ ಭತ್ತ, ರಾಗಿ, ಜೋಳ, ಸಿರಿಧಾನ್ಯ ಖರೀದಿ ಮಾಡಬೇಕು’ ಎದು ಭಾಗ್ಯರಾಜ್ ಆಗ್ರಹಿಸಿದರು.
ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ‘ಎಲ್ಲವೂ ನನ್ನ ಗಮನದಲ್ಲಿ ಇದೆ. ಕಾರ್ಯರೂಪಕ್ಕೆ ತರುತ್ತೇವೆ’ ಎಂದರು.
ರೈತ ಮುಖಂಡರಾದ ಹೊನ್ನೂರು ಬಸವಣ್ಣ, ಹಾಲಿನ ನಾಗರಾಜ್, ಪಟೇಲ್ ಶಿವಮೂರ್ತಿ, ಕಿರಗಸೂರು ಶಂಕರ, ಹಾಡ್ಯ ರವಿ, ಪ್ರಸಾದ್ ನಾಯಕ, ಮಲೆಯೂರು ಹರ್ಷ, ಬಸವರಾಜಪ್ಪ. ಮಹೇಂದ್ರ, ಸತೀಶ್, ಸಿದ್ದರಾಜು, ನಂಜುಂಡ ನಾಯಕ, ಮಂಜುನಾಥ್ ಗುರುಪ್ರಸಾದ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.