ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿತ: ಯಳಂದೂರು ಮೆಣಸಿನಕಾಯಿ ಬೆಳೆಗಾರರು ಕಂಗಾಲು

ಉತ್ತಮ ಫಸಲು ನೀಡಿದ ಶ್ರೀರಂಗ ಮೆಣಸಿನಕಾಯಿ
Last Updated 29 ಮೇ 2022, 19:30 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಮೆಣಸಿನಕಾಯಿ ಬೆಳೆಗಾರರು ಈ ಬಾರಿಯೂ ಕೈಸುಟ್ಟು ಕೊಂಡಿದ್ದಾರೆ.

ಉತ್ತಮ ಫಸಲು ಬಂದರೂ, ಲಾಭ ಮಾತ್ರ ನಿರೀಕ್ಷಿಸದಂತೆ ಆಗಿದೆ. ಸತತ ಮಳೆ, ಸಾಗಣೆ, ನಿರ್ವಹಣೆ ವೆಚ್ಚದ ಸುಳಿಯಲ್ಲಿ ರೈತ ಕಂಗೆಟ್ಟಿದ್ದು, 'ಖಾರ' ಬೆಳೆದವರು ಅತಂತ್ರರಾಗಿದ್ದಾರೆ.

ಬೆಳೆಗಾರರು ಪ್ರತಿ ವರ್ಷ ಮುಂಗಾರು ಪೂರ್ವದಲ್ಲಿ ಮಿಶ್ರ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ, ಮೆಣಸಿನಕಾಯಿ ನಾಟಿ ಮಾಡುವವರು ಹೆಚ್ಚಿನ ಇಳುವರಿ ಮತ್ತು ಹಲವು ತಿಂಗಳು ನಿರಂತರ ಕೊಯ್ಲಿಗೆ ಬರುವ ಹೊಸ ತಳಿಗಳತ್ತ ಚಿತ್ತ ಹರಿಸುತ್ತಾರೆ. ತಾಕಿನಲ್ಲಿ ಹದವಾದ ಬಿಸಿಲು, ಸಸಿಗಳ ದಟ್ಟಣೆ ನಿಯಂತ್ರಿಸಿ, ಕಳೆ ನಿಯಂತ್ರಣ, ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಆದರೆ, ಈಚೆಗೆ ನಿರೀಕ್ಷೆಗೂ ಮೀರಿ ಸುರಿದ ಮಳೆ ಕೃಷಿಕರ ಯೋಜನೆಗಳನ್ನು ಹಿಮ್ಮೆಟ್ಟಿಸಿದೆ. ಹೆಚ್ಚು ಖರ್ಚು–ವೆಚ್ಚಕ್ಕೆ ಕಾರಣವಾಗಿದೆ.

‘ಒಂದು ಎಕರೆಯಲ್ಲಿ ಶ್ರೀರಂಗ ತಳಿ ಬಿತ್ತನೆ ಮಾಡಿದ್ದೆವು. 3 ತಿಂಗಳ ನಂತರ ಗಿಡದಲ್ಲಿ ಕಾಯಿ ಕಚ್ಚಿದೆ. ಉತ್ತಮ ಕಾಯಿ ಬಿಟ್ಟಿದೆ. ಆದರೆ, ಕಳೆದ ವರ್ಷ ಮೂರಂಕಿ ಇದ್ದ ಬೆಲೆ ಈಗ ಕನಿಷ್ಠ ಹಂತ ಮುಟ್ಟಿದೆ. ಆದರೆ, ನಿರ್ವಹಣೆಗೆ ಹೋಲಿಸಿದರೆ ಹಾಕಿದ ಬಂಡವಾಳವೂ ಕೈಗೆ ಬರುವುದಿಲ್ಲ. ಕೊಯ್ಲು ಮುಂದೂಡಿದರೆ ಕಾಯಿ ಕೆಂಪಾಗಿ ತೂಕ ಕಳೆದುಕೊಳ್ಳುವ ಅಪಾಯ ಇದೆ’ಎನ್ನುತ್ತಾರೆ ಅಂಬಳೆಯ ಎ.ಎಸ್.ರವಿ.

‘ಮೈಸೂರು ಎಪಿಎಂಸಿಯ ದರವನ್ನೇ ಜಿಲ್ಲೆಯ ರೈತರಿಗೂ ನಿಗದಿ ಪಡಿಸಲಾಗಿದೆ. ಪ್ರತಿ ದಿನ ಮಾರುಕಟ್ಟೆಯ ಏರಿಳಿತಗಳು ಇಲ್ಲೂ ಅನ್ವಯಿಸುತ್ತವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮೆಣಸಿನಕಾಯಿ 1 ಕೆಜಿಗೆ ₹ 100 ಇತ್ತು. ಮೇ ಆರಂಭದಲ್ಲಿ ₹ 35 ಇದ್ದ ಬೆಲೆ ಈಗ ₹ 17ಕ್ಕೆ ಕುಸಿದಿದೆ. ಧಾರಣೆ ಏರುವ ತನಕ ಮೆಣಸಿನಕಾಯಿ ಕಾಪಿಡುವ ಶೀತಲೀಕತಣ ವ್ಯವಸ್ಥೆ ಇಲ್ಲಿಲ್ಲ. ಸರ್ಕಾರ ತೋಟಗಾರಿಕೆ ಬೆಳೆಗಾರರ ಹಿತ ಕಾಯುವತ್ತ ಹೆಚ್ಚಿನ ಗಮನ ಹರಿಸಬೇಕು’ ಎಂದು ಅವರು ಹೇಳಿದರು.

ಬುಲೆಟ್ ತಳಿಯತ್ತ ರೈತರ ಚಿತ್ತ

ಯುವ ಕೃಷಿಕರು ನಿರಂತರ ಆದಾಯ ನೀಡುವ ಹೊಸ ತಳಿಗಳನ್ನು ನಾಟಿ ಮಾಡುತ್ತಾರೆ. ಶ್ರೀರಂಗ ಬುಲೆಟ್ ತಳಿ ಹೆಚ್ಚಿನ ಖಾರ ಹಾಗೂ ಬೇಗ ಕೊಯ್ಲಿಗೆ ಬರುತ್ತದೆ. ಸಸಿ ನಾಟಿ ಮಾಡಿದ 3ರಿಂದ 8 ತಿಂಗಳ ತನಕ ಬೆಳೆ ಸಮೃದ್ಧವಾಗಿ ಸಿಗುತ್ತದೆ.

‘ಮುಕ್ಕಾಲು ಎಕರೆಗೆ ₹ 75 ಸಾವಿರ ಔಷಧಕ್ಕೆ ಖರ್ಚಾಗಿದೆ. ಪ್ರತಿ ದಿನ ಮೆಣಸಿಕಾಯಿ ಬಿಡಿಸಲು 10 ಮಹಿಳೆಯರು ದುಡಿಯುತ್ತಿದ್ದು, ₹ 3,000 ಖರ್ಚಾಗುತ್ತಿದೆ. ಮಳೆ ಪ್ರತಿ ದಿನವೂ ಸುರಿಯುತ್ತಿದ್ದು, ಫಸಲನ್ನು ಒಂದೆರಡು ದಿನ ನಿರ್ಲಕ್ಷಿಸಿದರೂ ಹಾಕಿದ ಬಂಡವಾಳ ಕೈ ಬಿಡುತ್ತದೆ' ಎಂದು ಬೆಳೆಗಾರರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT