ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದದಲ್ಲಿ ಬೆಂಕಿ: ಕಾಡು ಭಸ್ಮ

Published 30 ಏಪ್ರಿಲ್ 2024, 16:31 IST
Last Updated 30 ಏಪ್ರಿಲ್ 2024, 16:31 IST
ಅಕ್ಷರ ಗಾತ್ರ

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ಹದ್ದಿನ ಕಲ್ಲುಹಾರೆ ಹಾಗೂ ಮದ್ದೂರು ವಲಯದ ಕರಡಿಕಲ್ಲು ಗುಡ್ಡದ ಬಳಿ ಸೋಮವಾರ ರಾತ್ರಿ ಬೆಂಕಿ ಬಿದ್ದು ನೂರಾರು ಎಕರೆ ಕಾಡು ಭಸ್ಮವಾಗಿದೆ ಎಂದು ಹೇಳಲಾಗಿದೆ. 

ಅಧಿಕಾರಿಗಳು 18 ಎಕರೆ ಪ್ರದೇಶ ಸುಟ್ಟಿದೆ ಎಂದು ಹೇಳುತ್ತಿದ್ದಾರೆ. ಆದರೆ, ಸಂಜೆ ಆರು ಗಂಟೆಗೆ ಕಂಡು ಬಂದ ಬೆಂಕಿಯನ್ನು ನಂದಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಬೆಳಿಗ್ಗೆ 6 ಗಂಟೆಯವರೆಗೂ ಕಾರ್ಯಾಚರಣೆ ಮಾಡಿದ್ದಾರೆ. ಹಾಗಾಗಿ, ದೊಡ್ಡ ಪ್ರಮಾಣದಲ್ಲಿ ಅರಣ್ಯ ಸುಟ್ಟಿರಬಹುದು ಎಂದು ಹೇಳಲಾಗುತ್ತಿದೆ. 

ಸೋಮವಾರ ಸಂಜೆ 6ರ ವೇಳೆಗೆ ಗುಡ್ಡದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆಯೇ ಗಸ್ತು ಸಿಬ್ಬಂದಿ ಅಧಿಕಾರಿಗಳ ಗಮನಕ್ಕೆ ತಂದರೂ ಅಕ್ಕಪಕ್ಕದ ವಲಯಗಳ ಸಿಬ್ಬಂದಿಯನ್ನು ಕರೆಸಿ ಸ್ಥಳಕ್ಕೆ ತೆರಳುವ ವೇಳೆಗೆ ಬೆಂಕಿ ಗೋಪಾಲಸ್ವಾಮಿಬೆಟ್ಟ ವಲಯಕ್ಕೂ ವ್ಯಾಪಿಸಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್‌, ‘ಮದ್ದೂರು ವಲಯದಲ್ಲಿ 10 ಎಕರೆ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಅಂದಾಜು ಎಂಟು ಎಕರೆ ಪ್ರದೇಶ ಸುಟ್ಟಿದೆ. ನೆಲಬೆಂಕಿಯಾಗಿದ್ದರಿಂದ ಹುಲ್ಲು, ಸಣ್ಣ ಪುಟ್ಟ ಗಿಡಗಳು ಸುಟ್ಟಿವೆ’ ಎಂದು ತಿಳಿಸಿದರು.

ಸ್ಥಳಕ್ಕೆ ಹುಲಿ ಸಂರಕ್ಷಿತ ಪ್ರದೇಶಗಳ ಕ್ಷೇತ್ರ ನಿರ್ದೇಶಕ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಮಳೆ ಆಗುವವರೆಗೂ ಯಾರೂ ಹೊರ ಹೋಗಬಾರದು, ನೇಮಕ ಮಾಡಿರುವ ಸ್ಥಳದಲ್ಲೇ ಇರಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾಡಿನ ಮಧ್ಯದಲ್ಲಿ ಬೆಂಕಿ: ಈ ಬಾರಿಯ ಬೇಸಿಗೆಯಲ್ಲಿ ಬಂಡೀಪುರದಲ್ಲಿ ಕಂಡು ಬಂದ ದೊಡ್ಡ ಕಾಳ್ಗಿಚ್ಚು ಪ್ರಕರಣ ಇದು. ಕಿಡಿಗೇಡಿಗಳು ಸಂಜೆಯ ಹೊತ್ತಿಗೆ ಕಾಡಿನ ಒಳಗೆಯೇ ಬೆಂಕಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದ್ದ ಬೆಂಕಿ ವೀಕ್ಷಕರನ್ನು ಮಳೆ ಆರಂಭ ಆಗುವುದಕ್ಕೆ ಮೊದಲೇ ಕೆಲಸದಿಂದ ತೆಗೆದಿರುವುದೇ ಈ ಕಾಳ್ಗಿಚ್ಚಿಗೆ ಕಾರಣ ಎನ್ನಲಾಗುತ್ತಿದೆ.

ಆಫ್‌ಲೈನ್‌ ಸಫಾರಿ ಇಲ್ಲ: ಕಾಡಿಗೆ ಬೆಂಕಿ ಬಿದ್ದ ಕಾರಣಕ್ಕೆ ಬಂಡೀಪುರದಲ್ಲಿ ಆಫ್‌ಲೈನ್‌ ಟಿಕೆಟ್‌ ಸಫಾರಿಯನ್ನು ಮಂಗಳವಾರ ರದ್ದುಗೊಳಿಸಲಾಗಿತ್ತು. ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಿದ್ದ ಪ್ರವಾಸಿಗರನ್ನು ಸಫಾರಿಗೆ ಕಳುಹಿಸಲಾಗಿತ್ತು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT