ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 15ರಿಂದ 18 ವರ್ಷ ವಯಸ್ಸಿನ 45 ಸಾವಿರ ಮಕ್ಕಳಿಗೆ ಇಂದಿನಿಂದ ಲಸಿಕೆ

ಜಿಲ್ಲೆಯಲ್ಲಿ ಇಂದಿನಿಂದ ಮಕ್ಕಳಿಗೆ ಕೋವಿಡ್‌ ಲಸಿಕೆ, ಕೋವ್ಯಾಕ್ಸಿನ್‌ ವಿತರಣೆ; 320 ತಂಡ
Last Updated 2 ಜನವರಿ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: 15ರಿಂದ 18 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಸೋಮವಾರದಿಂದ ರಾಜ್ಯದಾದ್ಯಂತ ಕೋವಿಡ್‌ ಲಸಿಕೆ ನೀಡುತ್ತಿದ್ದು, ಜಿಲ್ಲಾಡಳಿತವೂ ಸಿದ್ಧತೆ ನಡೆಸಿದೆ.

ಜಿಲ್ಲೆಯಲ್ಲಿ ಈ ವಯೋಮಾನದ 45 ಸಾವಿರ ಮಕ್ಕಳನ್ನು ಗುರುತಿಸಲಾಗಿದ್ದು, ಸರ್ಕಾರದಿಂದ ಸೂಚನೆಯಂತೆ ಅವರಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಜ್ಜುಗೊಂಡಿದೆ.

9ನೇ ತರಗತಿ, ಎಸ್ಸೆಸ್ಸೆಲ್ಸಿ, ಐಟಿಐ, ಪಿಯುಸಿ, ಡಿಪ್ಲೊಮಾ ವಿದ್ಯಾರ್ಥಿಗಳು 15ರಿಂದ 18ರ ವಯೋಮಾನದಲ್ಲಿ ಬರುತ್ತಾರೆ. 45 ಸಾವಿರ ಮಕ್ಕಳ ಪೈಕಿ 4,500 ಮಕ್ಕಳು ಶಿಕ್ಷಣ ಸಂಸ್ಥೆಗಳಿಂದ ಹೊರಗಡೆ ಇದ್ದಾರೆ.

ಒಂದು ವಾರದ ಅವಧಿಯಲ್ಲಿ ಎಲ್ಲ ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಅಧಿಕಾರಿಗಳು ಹಾಕಿಕೊಂಡಿದ್ದಾರೆ.

ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ, ಪಿಯು ಶಿಕ್ಷಣ ಇಲಾಖೆ ಸೇರಿದಂತೆ ಆಯಾ ಇಲಾಖೆಗಳ ಸಹಕಾರದಿಂದ ಅಭಿಯಾನ ಕೈಗೊಳ್ಳಲಾಗುತ್ತಿದ್ದು,ಜಿಲ್ಲೆಯಲ್ಲಿ 320 ತಂಡ ರಚಿಸಲಾಗಿದೆ. ತಂಡಗಳು ಶಾಲಾ–ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಿವೆ.

‘ಒತ್ತಾಯ ಪೂರ್ವಕವಾಗಿ ಲಸಿಕೆ ಕೊಡುವಂತಿಲ್ಲ. ವಿದ್ಯಾರ್ಥಿಗಳ ಮನವೊಲಿಸಿ ನೀಡಲಾಗುವುದು. ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಪೋಷಕರ ಸಭೆ ನಡೆಸಿ, ಲಸಿಕೆ ಪಡೆಯುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ದಿನವೊಂದಕ್ಕೆ ಎಷ್ಟು ಸಾಧ್ಯವೋ ಅಷ್ಟು ಮಕ್ಕಳಿಗೆ ಲಸಿಕೆ ನೀಡುತ್ತೇವೆ. ಒಂದು ವಾರದಲ್ಲಿ ಅಭಿಯಾನ ಪೂರ್ಣಗೊಳಿಸುವ ಉದ್ದೇಶ ಇದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಶಾಲಾ–ಕಾಲೇಜುಗಳಲ್ಲಿ ಇಲ್ಲದ ಮಕ್ಕಳು ಈ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯಬಹುದು’ ಎಂದು ಅವರು ಮಾಹಿತಿ ನೀಡಿದರು.

10 ಗಂಟೆಗೆ ಚಾಲನೆ:ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಸೋಮವಾರ (ಜ.3) ಬೆಳಿಗ್ಗೆ 10 ಗಂಟೆಗೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಶಾಲಾ–ಕಾಲೇಜುಗಳಲ್ಲಿ ಸಿದ್ಧತೆ

ಇತ್ತ ಮಕ್ಕಳಿಗೆ ಲಸಿಕೆ ಹಾಕಿಸುವುದಕ್ಕಾಗಿ ಶಾಲಾ–ಕಾಲೇಜುಗಳಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪೋಷಕರ ಸಭೆಗಳನ್ನು ನಡೆಸಲಾಗಿದ್ದು, ಲಸಿಕೆ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಗಿದೆ. ಮಕ್ಕಳಿಗೂ ಈ ಬಗ್ಗೆ ತಿಳಿಹೇಳುವ ಕೆಲಸವನ್ನು ಬೋಧಕರು ಮಾಡಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳ ವಿವರಗಳನ್ನು ಈಗಾಗಲೇ ಆರೋಗ್ಯ ಇಲಾಖೆಗೆ ನೀಡಿದ್ದಾರೆ. 15 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಮಾತ್ರ ಲಸಿಕೆ ನೀಡುವುದರಿಂದ 9ನೇ ತರಗತಿಯಲ್ಲಿ ಓದುತ್ತಿರುವ ಕೆಲವು ಮಕ್ಕಳು ಲಸಿಕೆ ಪಡೆಯಲು ಅರ್ಹರಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

---

ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಲಿದ್ದೇವೆ. ಸದ್ಯ ನಮ್ಮ ಬಳಿ 33 ಸಾವಿರ ಡೋಸ್‌ ಲಸಿಕೆ ಲಭ್ಯ ಇದೆ. ಮುಗಿಯುತ್ತಿದ್ದಂತೆಯೇ ಪೂರೈಕೆಯಾಗಲಿದೆ

- ಡಾ.ಕೆ.ಎಂ.ವಿಶ್ವೇಶ್ವರಯ್ಯ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT