ಬುಧವಾರ, ಫೆಬ್ರವರಿ 19, 2020
16 °C
ಬಿಳಿಗಿರಿ ರಂಗನಬೆಟ್ಟ: ಗಿರಿಜನ ಉತ್ಸವದಲ್ಲಿ ಮಿಂದೆದ್ದ ಅರಣ್ಯ ವಾಸಿಗಳು

ಗಿರಿಜನರ ಬದುಕೇ ಸಾಮಾಜಿಕ ಚಿಕಿತ್ಸೆ: ಎನ್‌. ಮಹೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಭಾರತ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣದಲ್ಲಿರುವ ಈ ಸಂದರ್ಭಕ್ಕೆ ಚಿಕಿತ್ಸೆ ಕೊಡುವಂತಹ ಸಾಮಾಜಿಕ, ಸಾಂಸ್ಕೃತಿ ಮೌಲ್ಯಗಳು ಗಿರಿಜನರ ಬದುಕಿನಲ್ಲಿ ಅಡಗಿವೆ’ ಎಂದು ಶಾಸಕ ಎನ್‌. ಮಹೇಶ್‌ ಅವರು ಶುಕ್ರವಾರ ಪ್ರತಿಪಾದಿಸಿದರು. 

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಗಿರಿಜನ ಉತ್ಸವದಲ್ಲಿ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತ ದೇಶದ ಸಂಸ್ಕೃತಿಯ ಮೂಲ, ಇಲ್ಲಿನ ಮೂಲ ನಿವಾಸಿಗಳಾದ ಗಿರಿಜನರಲ್ಲಿದೆ. ಭಾರತೀಯ ಪರಂಪರೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಇರುವಂತಹ ಭಾರತೀಯ ಸಂಸ್ಕೃತಿ ಎಂದರೆ ಅದು ಗಿರಿಜನ ಸಂಸ್ಕೃತಿ. ಗಿರಿಜನರು ಇಡೀ ದೇಶದ ಸಾಂಸ್ಕೃತಿಕ ರಾಯಭಾರಿಗಳು. ಆದರೆ, ಇವರ ಸಂಸ್ಕೃತಿ ನಶಿಸುತ್ತಿರುವುದು ದುರಂತದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ವಾರ್ಷಿಕವಾಗಿ ಇಂತಹ ಸಾಂಸ್ಕೃತಿಕ ಉತ್ಸವ ಜರುಗಬೇಕು. ಯಾವುದೇ ಸಂಸ್ಕೃತಿ ಅಳಿವಿನ ಅಂಚಿನಲ್ಲಿದ್ದರೆ, ಅದರ ಬಗ್ಗೆ ಸರ್ಕಾರ ಮತ್ತು ಇಲಾಖೆ ಹೆಚ್ಚು ಗಮನ ಹರಿಸಬೇಕು. ಗಿರಿಜನರಿಗೆ ಆರ್ಥಿಕ, ಸುಭದ್ರ ನೆಲೆ ಕಟ್ಟಿಕೊಟ್ಟರೆ ಇವರ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಡಾ.ಸಿ. ಮಾದೇಗೌಡ ಮಾತನಾಡಿ, ‘ಇಲ್ಲಿ 50 ಬುಡಕಟ್ಟು ಪಂಗಡಗಳು ವಾಸವಿದ್ದೇವೆ. ಇದರಲ್ಲಿ 12 ಪಂಗಡಗಳನ್ನು ಮೂಲ ಅರಣ್ಯವಾಸಿಗಳು ಎಂದು ಕರೆಯಲಾಗುತ್ತದೆ. ಇವರು ಕಾಡಿನೊಳಗೆ ಹಾಗೂ ಅಂಚಿನಲ್ಲಿ ಜೀವನ ಸಾಗಿಸುತ್ತಿದ್ದಾರೆ’ ಎಂದು ಹೇಳಿದರು.

‘ಪ್ರಾಣಿ ಪಕ್ಷಿಗಳ ಚಲನವಲನದಿಂದ ಗಿರಿಜನರ ಸಂಸ್ಕೃತಿ ಪ್ರಾರಂಭವಾಗಿದೆ. ಅವರ ಹಾಡು, ನೃತ್ಯಗಳೆಲ್ಲವೂ ಇವುಗಳ ಆಧಾರಿತ. ಅವರ ವೇಷಭೂಷಣವೂ ವಿಶೇಷವೇ. ಗಿರಿಜನರು ಬಳಸುವ ವಾದ್ಯಗಳೂ ವಿಶೇಷವಾದುದು’ ಎಂದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ, ಸದಸ್ಯೆ ಕೃಷ್ಣವೇಣಿ, ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ. ಮಹದೇವ, ಸಂಯೋಜಕ ಸಿ. ಮಾದಪ್ಪ, ತಾಲ್ಲೂಕು ಸೋಲಿಗ ಸಂಘದ ಅಧ್ಯಕ್ಷ ರಂಗೇಗೌಡ, ಪಿಎಸ್‌ಐ ರವಿಕುಮಾರ್, ಪಿಡಿಒ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಕೆ. ಗಿರೀಶ್‌ ಇದ್ದರು.

ಕಲಾ ಮೆರವಣಿಗೆಗೆ ವಿದೇಶಿಯರ ಸಾಥ್
ಗಿರಿಜನ ಸಂಸ್ಕೃತಿಯ ಗೊರುಕನ ನೃತ್ಯ ಹಾಗೂ ಇನ್ನಿತರ ಕಲಾ ತಂಡದೊಂದಿಗೆ ಶಾಸಕ ಎನ್. ಮಹೇಶ್ ಅವರು ಕೂಡ ‘ಗೊರು ಗೊರುಕನ... ಗೊರು ಗೊರುಕ ನಾ...’ ಹಾಡಿಗೆ ಹೆಜ್ಜೆ ಹಾಕಿ ಕಲಾವಿದರ ಉತ್ಸಾಹವನ್ನು ಇಮ್ಮಡಿಗೊಳಿಸಿದರು. 

ಬಿಳಿಗಿರಿರಂಗನ ಬೆಟ್ಟದ ಗಂಗಾಧರೇಶ್ವರ ದೇವಸ್ಥಾನದಿಂದ ಆರಂಭಗೊಂಡ ವಿವಿಧ ಕಲಾ ತಂಡಗಳ ಮೆರವಣಿಗೆಯಲ್ಲಿ ವಿದೇಶಿಯರು ಕೂಡ ಸಾಥ್ ನೀಡಿದರು.

ಗೊರುಕನ ನೃತ್ಯ, ಬೀಸು ಕಂಸಾಳೆ, ಹಾಡಿ ನೃತ್ಯ ಸೇರಿದಂತೆ 10ಕ್ಕೂ ಹೆಚ್ಚು ಕಲಾ ತಂಡಗಳೊಂದಿಗೆ ದಾರಿಯುದ್ದಕ್ಕೂ ನಡೆದು ನೃತ್ಯ ಮಾಡಿ ಸಾರ್ವಜನಿಕರನ್ನು ರಂಜಿಸಿದರು. 

ಗಿರಿಜನ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಗಳು ಮೆರವಣಿಗೆಯಲ್ಲಿ ಎಲ್ಲರನ್ನೂ ಆಕರ್ಷಿಸಿತು. ಕೋಡಂಗಿ ವೇಷಧಾರಿ ಎಲ್ಲರ ಗಮನ ಸೆಳೆದರು. ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

‘ಗೊರುಕನ’ ರೆಸಾರ್ಟ್‌ ಅಲ್ಲ: ಸುದರ್ಶನ್‌
ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ (ವಿಜಿಕೆಕೆ) ಗೌರವ ಕಾರ್ಯದರ್ಶಿ ಡಾ.ಎಚ್‌. ಸುದರ್ಶನ್‌ ಅವರು, ‘ವಿಜಿಕೆಕೆ ಸಂಸ್ಥೆಗಾಗಿ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ‘ಗೊರುಕನ’ ಹೆಸರಿನಲ್ಲಿ ನಡೆಯುತ್ತಿರುವ ‘ಪರಿಸರ ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ’ದಿಂದ ಬರುವ ಹಣದಿಂದ ಸಂಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.

‘ಜಮೀನು, ಶಾಲೆಗೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಹೊರಗಿನವರಿಂದ ಆರ್ಥಿಕ ನೆರವು ಪಡೆದು ಅಭಿವೃದ್ಧಿಗೆ ಮುಂದಾಗಿದ್ದೇವೆ. ₹60 ಲಕ್ಷ ವೆಚ್ಚದಲ್ಲಿ ಶಾಲೆಯ ರೂಪ ಬದಲಿಸಿ ಮತ್ತಷ್ಟು ಅಭಿವೃದ್ಧಿಗೆ ಮುಂದಾಗಿದ್ದೇವೆ. ಈ ಹಣ ‘ಗೊರುಕನ’ದಿಂದ ಬಂದ ಹಣವಾಗಿದೆ. ಇದು ರೆಸಾರ್ಟ್ ಅಲ್ಲ. ಗಿರಿಜನರ ಅಭಿವೃದ್ಧಿಗಾಗಿ ಭಿಕ್ಷೆ ಬೇಡುವ ಬದಲು ಈ ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು ಎನ್ನುವ ಉದ್ದೇಶದಿಂದ ‘ಗೊರುಕನ’ದಲ್ಲಿ ಬಂದ ಹಣ ಬಳಕೆ ಮಾಡಿಕೊಂಡು ಗಿರಿಜನರ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು