ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ: ಮಳೆಗೆ ಮುದುಡಿದ ಸೂರ್ಯಕಾಂತಿ

Published 21 ಆಗಸ್ಟ್ 2024, 6:33 IST
Last Updated 21 ಆಗಸ್ಟ್ 2024, 6:33 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಸೂರ್ಯಕಾಂತಿ ಬೆಳೆಯಿಂದ ಉತ್ತಮ ಆದಾಯ ಸಿಗುತ್ತದೆ ಎಂಬ ರೈತರ ಆಸೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆ ತಣ್ಣೀರೆರಚಿದೆ. ಸಾಲ ಮಾಡಿ ಸೂರ್ಯಕಾತಿ ಬೆಳೆದಿದ್ದ ರೈತರು ಕಟಾವು ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಲ ದಿನಗಳಿಂದ ತಾಲ್ಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಕೊಂಚ ಬಿಡುವು ನೀಡಿದೆ ಎನ್ನುವಷ್ಟರಲ್ಲಿ ಮಳೆ ಜಿಟಿ ಹಿಡಿಯುತ್ತಿರುವುದು ಸೂರ್ಯಕಾಂತಿ ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ತುಂತುರು ಮಳೆಯಿಂದ ಜಮೀನಿನಲ್ಲಿ ನಿಂತಿರುವ ನೀರು ಹೊರಹೋಗದೆ, ಇಂಗದೆ ಸೂರ್ಯಕಾಂತಿ ಕಟಾವಿಗೆ ಅಡ್ಡಿಯಾಗಿದೆ.

ಕೆಲವು ರೈತರು ಮಳೆ ಕಡಿಮೆಯಾಗುತ್ತಿದ್ದಂತೆ ಸೂರ್ಯಕಾಂತಿಯನ್ನು ಕಟಾವು ಮಾಡುತ್ತಿದ್ದು ಒದ್ದೆಯಾಗಿರುವ  ಸೂರ್ಯಕಾಂತಿಯ ಬೀಜ ಒಣಗಿಸಲು ಅಗತ್ಯ ಪ್ರಮಾಣದ ಬಿಸಿಲು ಇಲ್ಲದಿರುವುದು ಸಮಸ್ಯೆಯಾಗಿದೆ. ಅತಿಯಾದ ತೇವಾಂಶ ಬೀಜದ ಗುಣಮಟ್ಟ ಕುಸಿಯಲು ಕಾರಣವಾಗುತ್ತಿದೆ ಎಂದು ರೈತರು ಅಸಹಾಯತೆ ತೋಡಿಕೊಂಡಿದ್ದಾರೆ.

ಅತಿಯಾದ ಮಳೆಯಿಂದ ಸೂರ್ಯಕಾಂತಿ ಕಟಾವು ಸಾಧ್ಯವಾಗದೆ ಬೆಳೆ ನಾಶವಾಗುತ್ತಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಮುಖಂಡ ಮಾಧು ಹಂಗಳ ಒತ್ತಾಯಿಸಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 11,300 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತ ಬಿತ್ತನೆ ಮಾಡಲಾಗಿದ್ದು ಈಗಾಗಲೇ ಕಟಾವು ಹಂತ ತಲುಪಿದ್ದು 11,500 ಟನ್ ಇಳುವರಿ ನಿರೀಕ್ಷೆ ಮಾಡಲಾಗಿದೆ. ಬಿಸಿಲು ಬರಲು ತಡವಾದರೆ ಇಳುವರಿ ಕುಸಿತವಾಗಿ ರೈತರು ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತ ಮುಖಂಡ ಮಾಧು ತಿಳಿಸಿದ್ದಾರೆ.

‘ಬಿಸಿಲು ಬಂದರೆ ಹೆಚ್ಚು ಸಮಸ್ಯೆಯಾಗದು. ಆದರೆ, ಶೀತ ವಾತಾವರಣ ಮುಂದುವರಿದರೆ ಒಣಗಿದ ಸೂರ್ಯಕಾಂತಿಗೆ ಶೀಲಿಂಧ್ರ ಸೇರಿದಂತೆ ಇತರ ರೋಗಗಳು ತಗುಲಿ ರೈತರಿಗೆ ಭಾರಿ ನಷ್ಟ ಸಂಭವಿಸಲಿದೆ. ಈಗಾಗಲೇ ತಾಲ್ಲೂಕಿನಲ್ಲಿ ಸೂರ್ಯಕಾಂತಿ ಬೆಳೆ ಕಟಾವಿಗೆ ಬಂದಿದ್ದು, ದಲ್ಲಾಳಿಗಳು ನಾಲ್ಕು ಸಾವಿರದಿಂದ ನಾಲ್ಕುವರೆ ಸಾವಿರದವರೆಗೆ ರೈತರಿಂದ ಸೂರ್ಯಕಾಂತಿ ಖರೀದಿ ಮಾಡುತ್ತಿದ್ದು ರೈತರಿಗೆ ಉತ್ತಮ ದರ ಸಿಗುತ್ತಿಲ್ಲ. 

ಸರ್ಕಾರ ಖರೀದಿ ಕೇಂದ್ರ ತೆರೆಯದ ಪರಿಣಾಮ ಬೆಲೆ ಭಾರಿ ಕುಸಿತವಾಗಿದೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ದಲ್ಲಾಳಿಗಲು ರೈತರಿಂದ ಕಡಿಮೆ ದರಕ್ಕೆ ಸೂರ್ಯಕಾಂತಿ ಖರೀದಿಸಿ ಶೇಖರಿಸಿಟ್ಟುಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದರ ಹೆಚ್ಚಾದ ಬಳಿಕ ಹೆಚ್ಚಿನ ಲಾಭಕ್ಕೆ ಮಾರಿಕೊಳ್ಳುತ್ತಾರೆ. ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆದರೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿ ಅದರ ಲಾಭ ರೈತರಿಗೆ ದೊರೆಯಲಿದೆ ಎಂದು ರೈತರು ಒತ್ತಾಯಿಸಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿಯಾದ ಮಳೆಗೆ ಸೂರ್ಯಕಾಂತಿ ಬೆಳೆ ಹಾಳಾಗಿಲ್ಲ. ಆದರೆ ಕಟಾವಿಗೆ ತೊಂದರೆಯಾಗುತ್ತಿದೆ. ಬಿಸಿಲು ಬಂದರೆ ಒಳ್ಳೆಯ ಬೆಳೆ ರೈತರ ಕೈ ಸೇರಲಿದೆ.
-ಶಶಿಧರ್‌ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT