ಶನಿವಾರ, ಮಾರ್ಚ್ 25, 2023
22 °C
ಬೇಡಗಂಪಣ ಸಮುದಾಯದ 101 ಹೆಣ್ಣುಮಕ್ಕಳು ಭಾಗಿ, ಮಹದೇಶ್ವರ ಸ್ವಾಮಿಗೆ ಜಲಾಭಿಷೇಕ

ಮಹದೇಶ್ವರ ಬೆಟ್ಟದಲ್ಲಿ ಹಾಲರವೆ ಉತ್ಸವದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಪವಾಡ ಪುರುಷ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ದೀಪಾವಳಿಯ ಅಮಾವಾಸ್ಯೆ ದಿನವಾದ ಗುರುವಾರ ಹಾಲರವಿ ಉತ್ಸವವು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. 

ಬೆಟ್ಟದಿಂದ ಏಳೆಂಟು ಕಿ.ಮೀ ದೂರದಲ್ಲಿರುವ ಹಾಲಹಳ್ಳದಿಂದ ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳು ಕಲಶಗಳಲ್ಲಿ ಹೊತ್ತು ತಂದ ನೀರನ್ನು ಮಲೆ ಮಹದೇಶ್ವರಸ್ವಾಮಿಗೆ ಅಭಿಷೇಕ ನಡೆಸಲಾಯಿತು. ಬೆಳಿಗ್ಗೆ 11 ಗಂಟೆಗೆ ಸಾಲೂರು ಮಠದ ಪೀಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನಸ್ವಾಮೀಜಿ ಅವರ ನೇತೃತ್ವದಲ್ಲಿ ಉತ್ಸವ ನೆರವೇರಿತು.

ದೀಪಾವಳಿ ಜಾತ್ರೆ ಸಮಯದಲ್ಲಿ ನಡೆಯುವ ಈ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗುತ್ತಾರೆ. ಕೋವಿಡ್‌ ಕಾರಣದಿಂದ ಭಕ್ತರ ಪ್ರವೇಶ ನಿರ್ಬಂಧಿಸಿರುವುದರಿಂದ ಸ್ಥಳೀಯರು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ, ಅಧಿಕಾರಿಗಳು ಹಾಗೂ ಆಹ್ವಾನಿತ ಭಕ್ತರು ಇದ್ದರು. 

ಆಚರಣೆ ವಿಶೇಷ: ಸ್ಥಳೀಯ ಬೇಡಗಂಪಣ ಸಮುದಾಯದವರು ಮಹದೇಶ್ವರನಿಗೆ ನಡೆಸುವ ಉತ್ಸವ ಇದು. ಸಮುದಾಯದ 10ರಿಂದ 12 ವರ್ಷದ 101 ಹೆಣ್ಣು ಮಕ್ಕಳು ಇದರಲ್ಲಿ ಭಾಗಿಯಾಗುವುದು ವಿಶೇಷ.

ಉತ್ಸವದಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು, ಉಪವಾಸವಿದ್ದು, ಮುಂಜಾವು ನಾಲ್ಕು ಗಂಟೆಗೇ ಬೆಟ್ಟದಿಂದ ಏಳೆಂಟು ಕಿ.ಮೀ ದೂರದಲ್ಲಿರುವ ಹಾಲಹಳ್ಳಕ್ಕೆ ಪೋಷಕರ ಜೊತೆಗೆ ಹೋಗುತ್ತಾರೆ. ಅಲ್ಲಿ ಶುಚೀರ್ಭೂತಗೊಂಡು, ಹಿತ್ತಾಳೆಯ ಕಳಶದಲ್ಲಿ ನೀರನ್ನು ತುಂಬಿಕೊಳ್ಳುತ್ತಾರೆ. ನಂತರ ಕಲಶಗಳಿಗೆ ಪೂಜೆ ಮಾಡಲಾಗುತ್ತದೆ. ಆ ಕಳಶಗಳನ್ನು ಹೊತ್ತುಕೊಳ್ಳುವ ಬಾಲೆಯರು, ಕಾಲ್ನಡಿಗೆಯಲ್ಲೇ ಸಾಗಿ ಬಂದು ಬೆಟ್ಟದ ಪ್ರವೇಶ ದ್ವಾರ ತಲುಪುತ್ತಾರೆ.

ತಂಬಡಿಗೇರಿಯ ಮುಖ್ಯದ್ವಾರದಲ್ಲಿ ಕತ್ತಿಪವಾಡವನ್ನು ನೆರವೇರಿಸಿ ನಂತರ ಮಂಗಳವಾಧ್ಯಗಳ ಸಮೇತವಾಗಿ ಮೆರವಣಿಗೆಯ ಮೂಲಕ ಕಲಶಗಳನ್ನು ದೇವಾಲಯಕ್ಕೆ ತಂದು ಒಂದು ಪ್ರದಕ್ಷೀನೆ ಮಾಡಿದ ನಂತರ ಒಳ ಆವರಣದಲ್ಲಿ ಕಳಶಗಳನ್ನು ಇರಿಸಲಾಗುತ್ತದೆ. ಅಲ್ಲಿ ಅವುಗಳಿಗೆ ಪೂಜೆ ಸಲ್ಲಿಸಿದ ನಂತರ, ಆ ಜಲದಿಂದ ಮಹದೇಶ್ವರ ಸ್ವಾಮಿಗೆ ಅಭಿಷೇಕ ನಡೆಸಲಾಗುತ್ತದೆ. 

ಹಾಲರವಿ ಉತ್ಸವ ಜರಗುವುದಕ್ಕೂ ನಡೆಯುವ ಕತ್ತಿ ಪವಾಡ ಆಚರಣೆಯ ಹಿಂದೆ ಒಂದು ಉದ್ದೇಶ ಇದೆ. ಹರಕೆ ಹೊತ್ತ ಭಕ್ತರೊಬ್ಬರು ಕತ್ತಿಯ ಅಲಗಿನ ಮೇಲೆ ಮಲಗುತ್ತಾರೆ. ಅವರ ಮೇಲೆ ಬೇಡಗಂಪಣ ಅರ್ಚಕರು ನಡೆದುಕೊಂಡು ಹೋಗುತ್ತಾರೆ.

‘ಕಳಶಗಳಲ್ಲಿ ನೀರು ತರುವ ಮಾರ್ಗ ಮಧ್ಯದಲ್ಲಿ ಹೆಣ್ಣುಮಕ್ಕಳು ಅಥವಾ ‌ನೀರಿನ ಮೇಲೆ ಯಾವುದಾದರೂ ನಕಾರಾತ್ಮಕ ಶಕ್ತಿಗಳ ಕಣ್ಣು ಬಿದ್ದಿದ್ದರೂ ಕತ್ತಿ ಪವಾಡ ಮಾಡುವ ಸ್ಥಳದಲ್ಲಿ ಇವು ನಿಲ್ಲುವುದಿಲ್ಲ. ಪವಾಡ ಮಾಡಿದ ಸ್ಥಳದಿಂದ ಹಾಲರವೆ ಗಂಗೆ ಶುದ್ಧಳಾಗುತ್ತಾಳೆ’ ಎಂಬ ನಂಬಿಕೆ ಸ್ಥಳೀಯರದ್ದು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು