ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಮುಳುಗು ಸೇತುವೆ; ತಪ್ಪದ ಜನರ ಗೋಳು-ಸೇತುವೆ ನಿರ್ಮಾಣಕ್ಕೆ ಒತ್ತಾಯ

ಪ್ರತಿ ಮಳೆಗಾಲದಲ್ಲಿ ಗ್ರಾಮಗಳ ಸಂಪರ್ಕ ಕಡಿತ, ಜನರ ಸಂಚಾರಕ್ಕೆ ತೊಂದರೆ
Last Updated 19 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬಹುತೇಕಸೇತುವೆಗಳು ತಳಮಟ್ಟದಲ್ಲಿದ್ದು (ಮುಳುಗು ಸೇತುವೆ), ಮಳೆಗಾಲದ ಸಂದರ್ಭದಲ್ಲಿ ಸೇತುವೆಯ ಮೇಲೆಯೇ ನೀರು ಹರಿಯುವುದರಿಂದ ಗ್ರಾಮಗಳಿಗೆ ಸಂಪರ್ಕವೇ ಕಡಿತಗೊಂಡು ಗ್ರಾಮಸ್ಥರು ಹಾಗೂ ವಾಹನ ಸವಾರರು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಈ ಬಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕಳೆದ ತಿಂಗಳು ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದವು. ಹಳ್ಳ ಕೊಳ್ಳಗಳು ಉಕ್ಕಿ ಹರಿದಿದ್ದವು. ನೀರಿನ ಹರಿಯುವಿಕೆ ಹೆಚ್ಚಾದ ಕಾರಣಕ್ಕೆ ತಗ್ಗು ಪ್ರದೇಶದಲ್ಲಿರುವ ಸೇತುವೆಗಳು ಮುಳುಗಿದ್ದರಿಂದ ಹಲವು ಗ್ರಾಮಗಳಲ್ಲಿ ಜನರು ಸುಗಮ ಸಂಚಾರಕ್ಕೆ ತೊಂದರೆ ಅನುಭವಿಸಿದ್ದರು.

ಬೆಟ್ಟಗುಡ್ಡ, ಅರಣ್ಯ ಪ್ರದೇಶದಿಂದ ಕೂಡಿರುವ ಹನೂರು ತಾಲ್ಲೂಕು ಭೌಗೋಳಿಕವಾಗಿ ಜಿಲ್ಲೆಯಲ್ಲೇ ಅತಿ ಹೆಚ್ಚು ವಿಸ್ತಾರವಾದ ತಾಲ್ಲೂಕು. ಇಲ್ಲಿನ ಬಹುತೇಕ ಗ್ರಾಮಗಳು ಅರಣ್ಯದಂಚಿನಲ್ಲಿವೆ. ಬೆಟ್ಟಗುಡ್ಡಗಳಿಂದಲೇ ಆವೃತವಾಗಿರುವ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ಹಳ್ಳ, ದಿಣ್ಣೆಗಳಿಂದ ಕೂಡಿವೆ. ಈ ರಸ್ತೆಗಳಿಗೆ ಹಳ್ಳಗಳು ಇರುವ ಕಡೆಗಳಲ್ಲಿ ಮುಳುಗು ಸೇತುವೆಗಳನ್ನು ನಿರ್ಮಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದಾಗ, ಸೇತುವೆಗಳು ಮುಳುಗುತ್ತವೆ.

ತಾಲ್ಲೂಕಿನಲ್ಲಿರುವ ರಾಮಾಪುರ, ಹನೂರು ಹಾಗೂ ಲೊಕ್ಕನಹಳ್ಳಿ... ಮೂರು ಹೋಬಳಿಗಳಲ್ಲೂ ಮುಖ್ಯರಸ್ತೆಗಳಲ್ಲಿ ತಳಮಟ್ಟದ ಸೇತುವೆಗಳಿದ್ದು ಇದರಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಆ ದಿನ ಇಡೀ ರಾತ್ರಿ ಅಥವಾ ಬೆಳಿಗ್ಗೆ ಸಂಪರ್ಕವೇ ಕಡಿತಗೊಳ್ಳುತ್ತದೆ. ತರ್ತು ಕೆಲಸಗಳಿಗೆ ಬರುವ ಜನರು ಈ ಸಮಸ್ಯೆಯಿಂದಾಗಿ ತಮ್ಮ ಕಾರ್ಯಗಳಿಗೆ ಅಡ್ಡಿಯುಂಟಾಗಿ ವಾಪಸ್‌ ಮನೆಗೆ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿವೆ.

ಲೊಕ್ಕನಹಳ್ಳಿಮಾರ್ಗವಾಗಿಒಡೆಯರಪಾಳ್ಯಸೇರುವಮತ್ತುತಮಿಳುನಾಡುಸಂಪರ್ಕಕಲ್ಪಿಸುವಈರಸ್ತೆಯಲ್ಲಿಜಡೆತಡಿ ಸೇತುವೆ ಇದೆ. ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ರಕ್ಷಿತರಾಣ್ಯದಲ್ಲಿ ಮಳೆಯಾದರೆ ಈ ಸೇತುವೆ ಮೇಲೆ ನೀರು ಹರಿಯುತ್ತದೆ. ಮಳೆಗಾಲದ ಸಂದರ್ಭದಲ್ಲಂತೂ ಈ ಭಾಗದ ಜನರು ಪಾಡು ಹೇಳತೀರದು. ಒಮ್ಮೊಮ್ಮೆ ನೀರಿನ ಹರಿವು ಕಮ್ಮಿಯಾಗುವವರೆಗೂ ರಾತ್ರಿಯಿಡೀ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾದ ಸಂಭವ ಎದುರಾಗುತ್ತದೆ. ಇಲ್ಲಿ ಮೇಲ್ಮಟ್ಟದ ಸೇತುವೆ ನಿರ್ಮಿಸಬೇಕು ಎಂಬ ಕೂಗು ದಶಕದಿಂದಲೂ ಕೇಳಿ ಬರುತ್ತಲೇ ಇದೆ.

ಎಲ್ಲೆಮಾಳದಿಂದ ಬಿ.ಎಂ.ಹಳ್ಳಿಸಂಪರ್ಕಕಲ್ಪಿಸುವಮಾರ್ಗದಲ್ಲಿರುವ ಸೇತುವೆ, ಪಾಲಾರ್‌ನಿಂದ ಗೋಪಿನಾಥಂ ಸಂಪರ್ಕ ಕಲ್ಪಿಸುವ ಸೇತುವೆ, ಪೊನ್ನಾಚಿಯ ಮರೂರಿನಿಂದ ಚಿಕ್ಕಮರೂರಿಗೆ ಹೋಗುವ ಸೇತುವೆ, ಹನೂರಿನಿಂದ ಚಿಂಚಳ್ಳಿಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮಳೆಗಾಲದಲ್ಲಿ ಆಗಾಗ ಮುಳುಗಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುತ್ತವೆ.

‘ಸೇತುವೆ ಮೇಲೆ ನೀರು ಹರಿದು ಸಂಪರ್ಕ ಕಡಿತವಾಗುವುದರಿಂದ ಮಕ್ಕಳು, ವೃದ್ಧರು, ಅನಾರೋಗ್ಯಪೀಡಿತರು ಪರದಾಡುವುವುದು ಒಂದೆಡೆಯಾದರೆ, ಮಕ್ಕಳುಶಾಲಾಕಾಲೇಜಿಗೆತೆರಳದೆಮನೆಗೆ ವಾಪಸ್‌ ಆಗುತ್ತಾರೆ. ಪ್ರತಿ ಬಾರಿ ಈ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತದೆ. ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಲೇ ಇದೆ. ಹಾಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ತಾಲ್ಲೂಕಿನ ಜನರ ಆರೋಪ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮಸ್ವಾಮಿ ಅವರು, ‘ತಳಮಟ್ಟದಲ್ಲಿರುವ ಕೆಲವು ಸೇತುವಗಳನ್ನು, ನೀರು ಸರಾಗವಾಗಿ ಹರಿದು ಹೋಗಲಿ ಎಂಬ ಉದ್ದೇಶದಿಂದ ನಿರ್ಮಿಸಲಾಗಿದೆ. ಲೊಕ್ಕನಹಳ್ಳಿಯಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಜಡೆತಡಿ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಸೇತುವೆ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

ಸೇತುವೆ ನಿರ್ಮಾಣಕ್ಕೆ ಒತ್ತಾಯ

ಹೆಚ್ಚು ಮಳೆಯಾದರೆ ಗ್ರಾಮೀಣ ಭಾಗದ ಜನರು ಸೇತುವೆ ಇಲ್ಲದಿರುವ ಕಾರಣಕ್ಕೆ ತೊಂದರೆ ಅನುಭವಿಸಬೇಕಾಗುತ್ತದೆ. ಹನೂರು ಪ್ರತ್ಯೇಕ ತಾಲ್ಲೂಕು ಎಂದು ಘೋಷಣೆಯಾದರೂ, ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರ, ಜಿಲ್ಲಾಡಳಿತ ಏನೂ ಕ್ರಮ ಕೈಗೊಂಡಿಲ್ಲ. ಯಾವುದೇ ಪ್ರದೇಶದ ಅಭಿವೃದ್ಧಿಯಾಗಬೇಕಾದರೂ ರಸ್ತೆಗಳು, ಸೇತುವೆಗಳು ಚೆನ್ನಾಗಿರಬೇಕು. ತಾಲ್ಲೂಕಿನಲ್ಲಿ ಅದೇ ಸರಿ ಇಲ್ಲ. ಹೀಗಿರುವಾಗ ಹನೂರು ಅಭಿವೃದ್ಧಿಯಾಗುವುದು ಹೇಗೆ? ಅಗತ್ಯವಿರುವ ಕಡೆಗಳಲ್ಲಿ ಸೇತುವೆ ನಿರ್ಮಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂಬುದು’ ನಾಗರಿಕರ ಒಕ್ಕೊರಲ ಒತ್ತಾಯ.

ಶಿಥಿಲಾವಸ್ಥೆಯ ಸೇತುವೆಗಳು

ಸೇತುವೆ ಮೇಲೆ ನೀರು ಹರಿದು ಸಂಚಾರಕ್ಕೆ ಅಡಚಣೆಯಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದು ಕಡೆ ಇರುವ ಸೇತುವೆಗಳು ಶಿಥಿಲಗೊಳ್ಳುತ್ತಿರುವುದು ಜನರು ಹಾಗೂ ವಾಹನ ಸವಾರರನ್ನು ಆತಂಕಕ್ಕೆ ದೂಡಿದೆ. ಈಚೆಗೆ ಬಿದ್ದಂತಹನಿರಂತರ ಮಳೆಯಿಂದಾಗಿ ಕೆ.ಗುಂಡಾಪುರಸಮೀಪವಿರುವ ಸೇತುವೆಯೂ ನೀರುಕೊರೆದುಹಾನಿಗೀಡಾಗಿದೆ. ಮಣಗಳ್ಳಿ ಬಳಿಯಿರುವ ಸೇತುವೆ ಬಿರುಕುಬಿಟ್ಟಿದೆ. ಪಾಲಾರ್‌ನಿಂದ ಗೋಪಿನಾಥಂಗೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲೂ ಬಿರುಕು ಕಾಣಿಸಿಕೊಳ್ಳತೊಡಗಿದೆ.

––

ತಟ್ಟೆಹಳ್ಳ, ಸ್ವಾಮಿಹಳ್ಳ, ಜಡೆತಡಿ ಹಳ್ಳಗಳಿಗೆ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆದು ಹಣವೂ ಬಿಡುಗಡೆಯಾಗಿದೆ. ₹5.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಬೂದಿಪಡಗ ಬಳಿಯಿರುವ ಸೇತುವೆಯನ್ನು ಮುಂದಿನ ದಿನಗಳಲ್ಲಿ ಮೇಲ್ದರ್ಜೆಗೇರಿಸಲಾಗುವುದು

– ಆರ್.ನರೇಂದ್ರ, ಶಾಸಕ

***

ಜನರು ಏನಂತಾರೆ?

ಸಂಚಾರ ದುಸ್ತರ

ಉಡುತೊರೆ ಜಲಾಶದಿಂದ ನೀರು ಹರಿಸಿದರೆ ಪ್ರತಿ ಬಾರಿಯೂ ಇದೇ ಸಮಸ್ಯೆಯಾಗುತ್ತಿದೆ. ಮಕ್ಕಳು, ವೃದ್ಧರು ಗ್ರಾಮಕ್ಕೆ ಬರುವುದು, ಹೋಗುವುದೇ ದುಸ್ತರವಾಗಿದೆ.

–ಮಂಜುಳಾ,ಗ್ರಾಮಪಂಚಾಯಿತಿ ಸದಸ್ಯೆ ಎಲ್ಲೇಮಾಳ

***

ದುರಸ್ತಿ ಪಡಿಸಿ

ಹನೂರಿನಿಂದ ಶಾಗ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿರುವ ಸೇತುವೆಗಳು ಶಿಥಿಲಗೊಂಡಿದ್ದು, ಸಂಚಾರಕ್ಕೆ ಭಯ ಪಡಬೇಕಾದ ಸ್ಥಿತಿ ಇದೆ. ತಾಲ್ಲೂಕು ಆಡಳಿತ ಅವುಗಳನ್ನು ಶೀಘ್ರವಾಗಿ ದುರಸ್ತಿಪಡಿಸಲು ಕ್ರಮ ವಹಿಸಬೇಕು.

–ಶಿವಚಂದ್ರು, ಬಂಡಳ್ಳಿ

***

ಸೇತುವೆ ನಿರ್ಮಿಸಿ

ತಾಲ್ಲೂಕಿನ ಗಿರಿಜನ ಹಾಡಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸೇತುವೆಗಳಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ತೀವ್ರ ತೊಂದರೆಯಾಗುತ್ತಿದೆ. ಸೇತುವೆಗಳನ್ನು ನಿರ್ಮಿಸಿ ಹಾಡಿಗಳ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.

– ಮುತ್ತಯ್ಯ, ಕಾರ್ಯದರ್ಶಿ, ಸೋಲಿಗ ಅಭಿವೃದ್ಧಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT