ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷಿತ ಹೊಗೆನಕಲ್: ಅಭಿವೃದ್ಧಿ ಮರೀಚಿಕೆ, ಬಾರದ ಪ್ರವಾಸಿಗರು

ರುದ್ರ ರಮಣೀಯ ಜಲಪಾತದ ಬಳಿ ಮೂಲ ಸೌಕರ್ಯಗಳ ಕೊರತೆ
Last Updated 29 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಹನೂರು: ಜಿಲ್ಲೆ–ರಾಜ್ಯದ ಗಡಿ ಪ್ರದೇಶಹೊಗೆನಕಲ್‌ನ, ಕಲ್ಲಿನ ಕೊರಕಲಿನ ನಡುವೆ ಕಾವೇರಿ ವಿಸ್ತಾರವಾಗಿ ಹರಿಯುತ್ತಾಳೆ. ಜೀವ ನದಿ ಕಾವೇರಿಯು ತಮಿಳುನಾಡು ಪ್ರವೇಶಿಸುವ ಜಾಗ ಇದು.

ಕೊರಕಲಾದ ಕಪ್ಪು ಕಲ್ಲಿನ ನಡುವೆ ವಿಸ್ತಾರವಾಗಿ ಹರಡಿಕೊಂಡು ಜಲಪಾತವಾಗಿ ಧುಮ್ಮಿಕ್ಕುವ ಕಾವೇರಿಯ ರುದ್ರ ರಮಣೀಯ ದೃಶ್ಯ ನೋಡುವ ಸದಾವಕಾಶ ಇಲ್ಲಿದೆ. ಕರ್ನಾಟಕ ಹಾಗೂ ತಮಿಳುನಾಡಿಗೂ ಇದು ಪ್ರವಾಸಿ ಸ್ಥಳ.

ತಮಿಳುನಾಡು ಸರ್ಕಾರ ಇಲ್ಲಿನ ಪ್ರವಾಸೋದ್ಯಮದಿಂದ ಉತ್ತಮ ಆದಾಯ ಗಳಿಸುತ್ತಿದ್ದರೆ, ಕರ್ನಾಟಕಕ್ಕೆ ಬರುವ ಆದಾಯ ಕಡಿಮೆ. ಕಾರಣ ಪ್ರವಾಸಿ ತಾಣ ಅಭಿವೃದ್ಧಿಯಾಗದೇ ಇರುವುದು. ಕನಿಷ್ಠ ಮೂಲಸೌಕರ್ಯಗಳೇ ಇಲ್ಲಿಲ್ಲ.

ಬೆಂಗಳೂರು ಹಾಗೂ ಇತರೆಡೆಗಳ ಕನ್ನಡಿಗರು ಕೂಡ ತಮಿಳುನಾಡಿನ ಧರ್ಮಪುರಿ ಮಾರ್ಗವಾಗಿ ಬಂದು ನೆರೆ ರಾಜ್ಯದ ಕಡೆಯಿಂದ ಜಲಪಾತ ವೀಕ್ಷಿಸುತ್ತಾರೆ.

ವಾಸ್ತವದಲ್ಲಿ ಹೊಗೆನಕಲ್‌ ಜಲ ಪಾತ ಇರುವುದು ಕರ್ನಾಟಕದ ಭಾಗದಲ್ಲಿ. ಅದನ್ನು ವೀಕ್ಷಿಸುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲ.ಜಲಪಾತ ವೀಕ್ಷಣೆಗಾಗಿಯೇ ಪಾಲಮೇಡು ಸೇತುವೆ ನಿರ್ಮಿಸಲಾಗಿತ್ತು. ಮೂರು ವರ್ಷದ ಹಿಂದೆ ಪ್ರವಾಹಕ್ಕೆ ಸಿಲುಕಿ ಅದು ಮುರಿದು ಹೋಗಿದೆ. ಅದನ್ನು ದುರಸ್ತಿ ಮಾಡುವ ಅಥವಾ ಹೊಸ ಸೇತುವೆ ನಿರ್ಮಿಸುವ ಕೆಲಸ ಆಗಿಲ್ಲ. ನದಿ ದಾಟಿ ಹೋಗಿ ಜಲಪಾತ ವೀಕ್ಷಿಸುವ ಗೋಪುರವೂ ಇತ್ತು. ಕಳೆದ ಬಾರಿ ಅದು ಕೂಡ ಪ್ರವಾಹಕ್ಕೆ ಸಿಲುಕಿ ಹಾನಿಗೀಡಾಗಿದೆ.

ನೀರು ಕಡಿಮೆ ಇದ್ದರೆ, ತೆಪ್ಪದಲ್ಲಿ ಸಾಗಿ ಜಲಪಾತವನ್ನು ಕೆಳಭಾಗದಿಂದ ವೀಕ್ಷಿಸಬಹುದು. ನೀರಿನ ಮಟ್ಟ ಹೆಚ್ಚಿದ್ದರೆ ನೇರವಾಗಿ ವೀಕ್ಷಿಸುವ ಭಾಗ್ಯ ಸಿಗುವುದಿಲ್ಲ.

ತೆಪ್ಪದಲ್ಲಿ ನದಿಯನ್ನು ದಾಟಿ, ಒಂದು ಕಿ.ಮೀ. ನಡೆದುಕೊಂಡು ಹೋಗಿ ದೂರದಿಂದ ಜಲಪಾತದ ದೊಡ್ಡ ಝರಿಯ ಒಂದು ಭಾಗ ಮಾತ್ರ ನೋಡಬಹುದು. ಉಳಿದ ಕಡೆಗಳಲ್ಲಿ ಸಣ್ಣ ಸಣ್ಣ ಕವಲುಗಳನ್ನು ಮಾತ್ರ ನೋಡ ಬಹುದು.

ಹೊಗೆನಕಲ್‌ನಲ್ಲಿ ಪ್ರವಾಸಿಗರಿಗೆ ಹೆಚ್ಚು ಸೌಲಭ್ಯಗಳಿಲ್ಲ. ಶೌಚಾಲಯವಿದೆ. ಆದರೆ, ನಿರ್ವಹಣೆ ಸಮರ್ಪಕವಾಗಿಲ್ಲ. ಕುಳಿತು ಕೊಳ್ಳಲು ಸರಿಯಾದ ಜಾಗ ಇಲ್ಲ.

ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದ ಕಡೆಯಿಂದ ಬರುವ ಪ್ರವಾ ಸಿಗರ ಸಂಖ್ಯೆ ಕಡಿಮೆ. ವಾರಾಂತ್ಯದಲ್ಲಿ ಮಾತ್ರ ಸ್ವಲ್ಪ ಪ್ರವಾಸಿಗರು ಬರುತ್ತಾರೆ. ಜಲಪಾತದ ಬಳಿ ತೆಪ್ಪವನ್ನು ಓಡಿಸಿಯೇ ಬದುಕು ಕಟ್ಟಿಕೊಳ್ಳುವ 350 ಕುಟುಂಬ ಗಳಿದ್ದು, ಪ್ರವಾಸಿಗರು ಕಡಿಮೆಯಾದರೆ ಅವರ ಸಂಪಾದನೆಗೂ ಕತ್ತರಿ ಬೀಳುತ್ತದೆ.

ಪ್ರವಾಸಿಗರನ್ನು ಸೆಳೆಯುವುದಕ್ಕಾಗಿ ಜಿಲ್ಲಾಡಳಿತದ ಇಲ್ಲಿ ಇನ್ನಷ್ಟು ಸೌಲಭ್ಯ ಕಲ್ಪಿಸಬೇಕು ಎಂದು ತೆಪ್ಪ ಓಡಿಸುವವರು ಆಗ್ರಹಿಸುತ್ತಾರೆ.

ತಂಗುವ ವ್ಯವಸ್ಥೆ ಇಲ್ಲ: ಜಿಲ್ಲಾ ಕೇಂದ್ರ ಚಾಮರಾಜನಗರದಿಂದ ಹೊಗೆನಕಲ್‌ 145 ಕಿ.ಮೀ. ದೂರವಿದೆ. ಕೊಳ್ಳೇಗಾಲದಿಂದ 100 ಕಿ.ಮೀ., ಮಹದೇಶ್ವರ ಬೆಟ್ಟದಿಂದ 50 ಕಿ.ಮೀ. ದೂರವಿದೆ. ಮಹದೇಶ್ವರ ಬೆಟ್ಟದಿಂದ ಪಾಲಾರ್‌ ವರೆಗೆ ರಸ್ತೆ ಚೆನ್ನಾಗಿದೆ. ಅಲ್ಲಿಂದ ಗೋಪಿನಾಥಂ –ಹೊಗೆನಕಲ್‌ ರಸ್ತೆ ಕಿರಿದಾಗಿದ್ದು ಹೇಳಿಕೊಳ್ಳುವಂತಹ ಗುಣಮಟ್ಟವಿಲ್ಲ. ಸಂರಕ್ಷಿತ ಪ್ರದೇಶದ ಮೂಲಕ ರಸ್ತೆ ಸಾಗುವುದರಿಂದ ರಸ್ತೆ ವಿಸ್ತರಣೆಗೆ ಅವಕಾಶವಿಲ್ಲ. ಆದರೆ, ಇರುವ ರಸ್ತೆಯನ್ನು ದುರಸ್ತಿ ಮಾಡು ವುದಕ್ಕೆ ತೊಂದರೆ ಇಲ್ಲ. ಆ ಕೆಲಸ ನಡೆದಿಲ್ಲ.

ಹೊಗೆನಕಲ್‌ಗೆ ಬರುವ ಪ್ರವಾಸಿ ಗರಿಗೆ ಕೊಳ್ಳೇಗಾಲದಿಂದ ನೇರವಾಗಿ ಬಸ್ ಸೌಲಭ್ಯವಿದೆ. ಖಾಸಗಿ ವಾಹನಗಳ ಮೂಲಕವೂ ಬರಬಹುದು. ಮಧ್ಯಾಹ್ನದ ಊಟಕ್ಕೆ ಹೋಟೆಲ್‌ಗಳಿವೆ. ಆದರೆ, ತಂಗಲು ಯಾವುದೇ ವ್ಯವಸ್ಥೆ ಇಲ್ಲ.

ನನೆಗುದಿಗೆ ಬಿದ್ದ ಮಾಸ್ಟರ್ ಪ್ಲಾನ್

2015-16ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್.ಎಸ್‌.ಮಹದೇವಪ್ರಸಾದ್ ಹೊಗೆನಕಲ್ ಜಲಪಾತಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದ್ದರು.

ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವುದಕ್ಕಾಗಿ ಹೊಗೆನಕಲ್‌ ಪ್ರದೇಶವನ್ನು ಸುಂದರ ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಸುವಂತೆ ಸೂಚಿಸಿದ್ದರು. ಅವರ ನಿಧನದ ನಂತರ ಯೋಜನೆ ನನೆಗುದಿಗೆ ಬಿದ್ದಿದೆ.

ಜಲಪಾತ ಪ್ರದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ರಾಘವೇಂದ್ರ, ‘ಮುಂದಿನ ವಾರ ಹೊಗೆನಕಲ್‌ಗೆ ಭೇಟಿ ನೀಡಿ ಮೂಲ ಸೌಕರ್ಯದ ಬಗ್ಗೆ ಪರಿಶೀಲಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಜಿಲ್ಲಾಧಿಕಾರಿ ಗಮನಕ್ಕೆ ತಂದು ಇಲಾಖೆಗೆ ಪತ್ರ ಬರೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT