ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಾದಪ್ಪನ ಹುಂಡಿಯಲ್ಲಿ ₹2.33 ಕೋಟಿ, ದಾಸೋಹವೂ ಆರಂಭ

Last Updated 23 ಜುಲೈ 2021, 4:56 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ‌ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರ ತಡ ರಾತ್ರಿವರೆಗೆ ಹುಂಡಿ ಎಣಿಕೆ ನಡೆದಿದ್ದು, ₹2.33 ಕೋಟಿ ಸಂಗ್ರಹವಾಗಿದೆ.

122 ದಿನಗಳ ಬಳಿಕ ಹುಂಡಿ‌ ಎಣಿಕೆ ನಡೆದಿದೆ. ಈ ಪೈಕಿ 75 ದಿನಗಳ ಕಾಲ ಲಾಕ್‌ಡೌನ್ ಕಾರಣಕ್ಕೆ ದೇವಾಲಯ ಭಕ್ತರಿಗೆ ಬಂದ್ ಆಗಿತ್ತು. ಹಾಗಾಗಿ, 47 ದಿನಗಳ ಅವಧಿಯಲ್ಲಿ ಇಷ್ಟು ಪ್ರಮಾಣದ ಕಾಣಿಕೆ ಸಂಗ್ರಹ ಆದಂತಾಗಿದೆ.

ಭಕ್ತರು 155 ಗ್ರಾಂ ಚಿನ್ನ ಹಾಗೂ 3.258 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಹಾಕಿದ್ದಾರೆ.

ಇಂದಿನಿಂದ ದಾಸೋಹ: ಈ ಮಧ್ಯೆ, ಕೋವಿಡ್ ಎರಡನೇ‌ ಅಲೆಯ ಕಾರಣಕ್ಕೆ ದೇವಾಲಯದಲ್ಲಿ ಸ್ಥಗಿತಗೊಂಡಿದ್ದ ದಾಸೋಹ ವ್ಯವಸ್ಥೆ ಶುಕ್ರವಾರ ಮಧ್ಯಾಹ್ನದಿಂದ ಆರಂಭವಾಗಲಿದೆ.

ಏಪ್ರಿಲ್ 22ರಿಂದ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಜುಲೈ 6ರಂದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ, ಮುಂಜಾಗ್ರತಾ ಕ್ರಮವಾಗಿ ದಾಸೋಹ ವ್ಯವಸ್ಥೆಯನ್ನು ಆರಂಭಿಸಿರಲಿಲ್ಲ.

ಶುಕ್ರವಾರ ಮಧ್ಯಾಹ್ನದಿಂದ ದಾಸೋಹ ಆರಂಭಿಸಲಾಗುವುದು ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾರ್ಮಿಟಿರಿ, ಕಾಟೇಜ್ ಸೌಲಭ್ಯ: ದರ್ಶನಕ್ಕೆ ಅವಕಾಶ ಕಲ್ಪಿಸಿದ ನಂತರ ಕೆಲವೊಂದು ವಸತಿಗೃಹಗಳನ್ನು ಮಾತ್ರ ಕಾಯ್ದಿರಿಸಲು ಅವಕಾಶ ಇತ್ತು. ಇಂದಿನಿಂದ ಡಾರ್ಮಿಟರಿ ಹಾಗೂ ಕಾಟೇಜುಗಳನ್ನು ಭಕ್ತಾದಿಗಳ ಮಿತಿಯೊಂದಿಗೆ ತಂಗಲು ವ್ಯವಸ್ಥೆ ಮಾಡಿದೆ.

ಪ್ರತಿ ಡಾರ್ಮಿಟರಿಯಲ್ಲಿನ ಒಂದು ದೊಡ್ಡ ಹಾಲ್‌ನಲ್ಲಿ 10 ಜನರಿಗೆ ಮಾತ್ರ ತಂಗಲು ಅವಕಾಶ. ಎಲ್ಲ 10 ಭಕ್ತಾದಿಗಳಿಗೆ ಉಚಿತ ಚಾಪೆ, ದಿಂಬು ನೀಡಲಾಗುವುದು ಮತ್ತು ಬಿಸಿನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

ಉಳಿದಂತೆ ಮುಡಿ ಸೇವೆ, ಲಾಡು ಪ್ರಸಾದ, ಹಣ್ಣು ಕಾಯಿ ಒಡೆಯುವುದು, ತೀರ್ಥ ಪ್ರಸಾದ, ಸೇವೆಗಳು ಮತ್ತು ಉತ್ಸವಗಳ ನಿರ್ಬಂಧ ಮುಂದಿನ ಆದೇಶದವರೆಗೆ ಮುಂದುವರೆದಿದೆ.

ಸಂದೇಹಗಳಿದ್ದಲ್ಲಿ ದೇವಾಲಯದ ಸಹಾಯವಾಣಿ 1860 425 4350 ಸಂಪರ್ಕಿಸಬಹುದು ಎಂದು ಜಯವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT