ಗುರುವಾರ , ಮಾರ್ಚ್ 30, 2023
24 °C
1921ರ ಜುಲೈ 1ರಂದು ನಂಜನಗೂಡು–ಚಾಮರಾಜನಗರ ರೈಲು ಮಾರ್ಗ ಕಾಮಗಾರಿ ಆರಂಭ

ನಗರ ರೈಲು ಹಾದಿಗೆ ಶತಮಾನದ ಹೆಜ್ಜೆ!

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಜ್ಯದ ದಕ್ಷಿಣದ ಗಡಿ ಜಿಲ್ಲಾ ಕೇಂದ್ರವಾದ ಚಾಮರಾಜನಗರವನ್ನು ಸಂಪರ್ಕಿಸುವ ರೈಲು ಮಾರ್ಗಕ್ಕೆ ಈಗ ಶತಮಾನದ ಸಂಭ್ರಮ. 

ಸರಿಯಾಗಿ 100 ವರ್ಷದ ಹಿಂದೆ (1921ರ ಜುಲೈ 1ರಂದು) ನಂಜನಗೂಡಿನಿಂದ ಚಾಮರಾಜ ನಗರಕ್ಕೆ ರೈಲು ಮಾರ್ಗ ವಿಸ್ತರಣೆ ಯೋಜನೆ ಆರಂಭವಾಗಿತ್ತು. ಕೆಲಸ ಆರಂಭಗೊಂಡು ಐದು ವರ್ಷದ ನಂತರ 1926ರ ಆಗಸ್ಟ್‌ 27ರಂದು ಮೊದಲ ಉಗಿಬಂಡಿ ನಗರಕ್ಕೆ ಬಂದು ಇತಿಹಾಸ ಬರೆದಿತ್ತು. 

ಚಾಮರಾಜನಗರದ ರೈಲು ಇತಿ ಹಾಸವನ್ನು ಚೆನ್ನಾಗಿ ಅರಿತಿರುವ ನಗರದ ಹಿರಿಯ ನಾಗರಿಕ ಸಿ.ಪಿ.ಹುಚ್ಚೇಗೌಡ ತಮ್ಮಲ್ಲಿರುವ ಮಾಹಿತಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿ ದ್ದಾರೆ. 

‘ಮೈಸೂರಿನಿಂದ ನಂಜನಗೂಡಿನ ವರೆಗೆ 1891ರ ಡಿ.1ರಂದು ಮೀಟರ್‌ ಗೇಜ್‌ ರೈಲು ಸಂಚಾರ ಆರಂಭವಾಯಿತು. ಮೈಸೂರಿನ ರಾಜಮನೆತನದವರಿಗೆ ನಂಜನಗೂಡಿಗೆ ಬರಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ, ಈ ಮಾರ್ಗ ನಿರ್ಮಾಣಕ್ಕಾಗಿ ಅವರೇ ದುಡ್ಡು ಹಾಕಿದ್ದರು’ ಎಂದು ಹುಚ್ಚೇಗೌಡ ತಿಳಿಸಿದರು. 

‘1920ರ ಸಮಯದಲ್ಲಿ ಕ್ಷಾಮ ಇತ್ತು. ಈ ಸಂದರ್ಭದಲ್ಲಿ ಜನರ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಂಜನಗೂಡಿ ನಿಂದ ಚಾಮ ರಾಜ ನಗರಕ್ಕೆ ರೈಲು ಮಾರ್ಗ ವಿಸ್ತರಣೆಗೆ ಯೋಜನೆ ರೂಪಿಸಲಾಗಿತ್ತು. 22 ಮೈಲಿ ಉದ್ದದ ಮಾರ್ಗ ನಿರ್ಮಾಣ ಯೋಜನೆಯನ್ನು ₹ 14 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಮಾರ್ಗ ನಿರ್ಮಾಣಕ್ಕೆ ಐದು ವರ್ಷ ಬೇಕಾಯಿತು’ ಎಂದು 87 ವರ್ಷದ ಹುಚ್ಚೇಗೌಡ ಮಾಹಿತಿ ನೀಡಿದರು. 

1927ರ ಆಗಸ್ಟ್‌27ರಂದು ನಂಜನಗೂಡಿನಿಂದ ಮೊದಲ ರೈಲು ಚಾಮರಾಜನಗರಕ್ಕೆ ತಲುಪಿತು. ಅಂದಿನ ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅದೇ ರೈಲಿನಲ್ಲಿ ನಗರಕ್ಕೆ ಬಂದಿದ್ದರು. 

‘ಚಾಮರಾಜನಗರದ ಮೂಲಕ ತಮಿಳುನಾಡಿನ ಸತ್ಯಮಂಗಲ, ಧಾರಾಪುರ, ಮಧುರೆ ಮೂಲಕ ಕೊಲಂಬೊವರೆಗೆ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾಪ ಆಗಲೇ ಇತ್ತು. ಇದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಮಹಾರಾಜರು, 30 ವರ್ಷಗಳಾದರೂ ಅದು ಕಾರ್ಯರೂಪಕ್ಕೆ ಬಾರದೆ, ಇಷ್ಟು ಮಾತ್ರ (ಚಾಮರಾಜನಗರದವರೆಗೆ) ಆಯಿತು ಎಂದು ಬೇಸರ ವ್ಯಕ್ತಪಡಿಸಿದ್ದರು. ನಮ್ಮ ಮನೆಯಲ್ಲಿ ಕೆಲಸಕ್ಕೆ ಇದ್ದವರೊಬ್ಬರು ತಮ್ಮ ಮಗನೊಂದಿಗೆ ಮೊದಲ ದಿನ ರೈಲು ಸಂಚಾರ ಕಂಡಿದ್ದರು. ಆಗಾಗ ಅವರು ಇದನ್ನು ನನಗೆ ಹೇಳುತ್ತಿದ್ದರು’ ಎಂದು ಹುಚ್ಚೇಗೌಡ ವಿವರಿಸಿದರು.

ಮೆಟ್ಟುಪಾಳ್ಯಂ ರೈಲು ಮಾರ್ಗ ನನೆಗುದಿಗೆ ಬೇಸರ

ಚಾಮರಾಜನಗರದ ಮೂಲಕ ತಮಿಳುನಾಡಿನ ಮೆಟ್ಟುಪಾಳ್ಯಂಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ನನೆಗುದಿಗೆ ಬಿದ್ದಿರುವುದಕ್ಕೆ ‌ಹುಚ್ಚೇಗೌಡ ಬೇಸರ ವ್ಯಕ್ತಪಡಿಸುತ್ತಾರೆ. 

ಮೆಟ್ಟುಪಾಳ್ಯಂ ರೈಲ್ವೆ ಮಾರ್ಗ ಯೋಜನೆಗೆ ಸಮೀಕ್ಷೆ ನಡೆಸಿದ ತಂಡದಲ್ಲಿ ಹುಚ್ಚೇಗೌಡ ಕೂಡ ಇದ್ದರು.  

‘ಯೋಜನೆ ಅನುಷ್ಠಾನದ ಬಗ್ಗೆ ವಿಸ್ತೃತ ವರದಿಯನ್ನೂ ಸಲ್ಲಿಸಲಾಗಿತ್ತು. ಮೆಟ್ಟುಪಾಳ್ಯಂನಿಂದ ಕೊಯಮತ್ತೂರಿಗೆ ರೈಲು ಸಂಪರ್ಕ ಇದೆ. ನಗರದಿಂದ ಮೆಟ್ಟುಪಾಳ್ಯಂವರೆಗೆ ಸಂಪರ್ಕ ಕಲ್ಪಿಸಿದ್ದರೆ, ಜನರಿಗೆ ಅನುಕೂಲವಾಗುತ್ತಿತ್ತು. ಸರಕು ಸಾಗಣೆ ಲಾರಿ ಮಾಲೀಕರ ಲಾಬಿ ಯೋಜನೆಗೆ ಅಡ್ಡಗಾಲು ಹಾಕಿತು’ ಎಂದು ಹುಚ್ಚೇಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು