ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರಕ್ಕೆ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ: ಶ್ರೀನಿವಾಸ ಪ್ರಸಾದ್‌

Published 26 ಫೆಬ್ರುವರಿ 2024, 11:26 IST
Last Updated 26 ಫೆಬ್ರುವರಿ 2024, 11:26 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮುಂಬರುವ ಲೋಕಸಭಾ ಚುನಾವಣೆಗೆ ಚಾಮರಾಜನಗರ ಮೀಸಲು ಕ್ಷೇತ್ರದಿಂದ ನ‌ನ್ನ ಅಳಿಯಂದಿರು ಸೇರಿದಂತೆ ಯಾರ ಹೆಸರೂ ಶಿಫಾರಸು ಮಾಡುವುದಿಲ್ಲ. ವರಿಷ್ಠರು ನನ್ನ ಅಭಿಪ್ರಾಯ ಕೇಳಿದಾಗ ಹೇಳುವೆ. ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಸೋಮವಾರ ಹೇಳಿದರು. 

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಳಿಯಂದಿರಾದ ಹರ್ಷವರ್ಧನ್‌ ಮತ್ತು ಡಾ.ಎನ್‌.ಎಸ್‌.ಮೋಹನ್‌ ಟಿಕೆಟ್‌ ಆಕಾಂಕ್ಷಿಗಳಾಗಿರುವ ಬಗ್ಗೆ ಕೇಳಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಾರ್ಚ್‌ 17ರಂದು ರಾಜಕೀಯದಿಂದ ನಿವೃತ್ತಿಯಾಗಲಿದ್ದೇನೆ. ನನ್ನ ಉತ್ತರಾಧಿಕಾರಿ  ಎಂದು ಯಾರನ್ನೂ ನಾನು ಗುರುತಿಸಿಲ್ಲ. ಇತ್ತೀಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮೈಸೂರಿನಲ್ಲಿ ನನ್ನನ್ನು ಭೇಟಿಯಾಗಿದ್ದರು. ಸಲಹೆಗಳನ್ನು ಕೇಳಿದ್ದಾರೆ. ನಾನು ಕೊಟ್ಟಿದ್ದೇನೆ. ಆಗ ಇಬ್ಬರೂ ಅಳಿಯಂದಿರು ನನ್ನ ಪಕ್ಕದಲ್ಲಿ ಇದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಆಕಾಂಕ್ಷಿಗಳಾಬಹುದು. ಎಲ್ಲರಿಗೂ ಆ ಸ್ವಾತಂತ್ರ್ಯ ಇದೆ’ ಎಂದರು.

 ‘ನಮ್ಮದು ರಾಷ್ಟ್ರೀಯ ಪಕ್ಷ. ಅಭ್ಯರ್ಥಿಗಳ ಆಯ್ಕೆಗೂ ಮುನ್ನ ಪಕ್ಷ ಸಮೀಕ್ಷೆ ನಡೆಸುತ್ತದೆ. ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತದೆ. ಯಾರು ಸೂಕ್ತ ಅಭ್ಯರ್ಥಿಯಾಗಬಹುದು ಎಂಬದನ್ನು ನಿರ್ಧರಿಸುತ್ತದೆ. ಅಂತಿಮವಾಗಿ ರಾಷ್ಟ್ರೀಯ ಸಂಸದೀಯ ಮಂಡಳಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ’ ಎಂದರು. 

‘ನಾನು ಯಾರನ್ನೂ ಶಿಫಾರಸು ಮಾಡುವಂತಹದ್ದು ಏನಿಲ್ಲ. ನನ್ನ ಅಭಿಪ‍್ರಾಯ ಕೇಳುವಾಗ ಅಭಿಪ್ರಾಯ ಹೇಳುವೆ. ಅದನ್ನು ಇಲ್ಲಿ ಬಹಿರಂಗಪಡಿಸುವುದಕ್ಕಾಗುತ್ತದೆಯೇ’ ಎಂದು ಪ್ರಶ್ನಿಸಿದರು. 

ಎಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು: ಚುನಾವಣೆಯಲ್ಲಿ ಸ್ಥಳೀಯರಿಗೇ ಟಿಕೆಟ್‌ ನೀಡಬೇಕು ಎಂಬ ಕೂಗು ಕೇಳಿಬರುತ್ತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ ಪ್ರಸಾದ್‌, ‘ಆ ರೀತಿ ಹೇಳುತ್ತಿರುವವರಿಗೆ ಜನ ಪ್ರಾತಿನಿಧ್ಯ ಕಾಯ್ದೆ ಗೊತ್ತಿದೆಯೇ? ಈ ದೇಶದ ಪ್ರಜೆಯಾಗಿರುವ 25 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಅಮೇಠಿಯಲ್ಲಿ ಸ್ಪರ್ಧಿಸುತ್ತಿದ್ದ ರಾಹುಲ್‌ ಗಾಂಧಿ ವಯನಾಡಿನಲ್ಲಿ ಸ್ಪರ್ಧೆ ಮಾಡಬಹುದು. ಗೋವಿಂದರಾಜನಗರ ಕ್ಷೇತ್ರದ ವಿ.ಸೋಮಣ್ಣ, ವರುಣ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸಿಲ್ಲವೇ. ‘ಸೋಮಣ್ಣ ಸ್ಪರ್ಧಿಸಿದಾಗ ಇವರೆಲ್ಲ ಎಲ್ಲಿ ಹೋಗಿದ್ದರು? ಅವರಿಗೆ ಬೆಂಬಲ ಕೊಡಲಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

ತೃಪ್ತಿ ತಂದಿದೆ

‘ಸಂಸದನಾಗಿ ಐದು ವರ್ಷಗಳ ನನ್ನ ಕೆಲಸ ತೃಪ್ತಿ ತಂದಿದ್ದೇನೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಗೆ ₹17.50 ಕೋಟಿ ಬಂದಿದೆ. ಅದರಲ್ಲಿ ರಸ್ತೆ, ಭವನಗಳು, ಆಂಬುಲೆನ್ಸ್‌ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದ್ದೇನೆ. ಅಂಗವಿಕಲರು, ಹಿರಿಯ ನಾಗರಿಕರಿಗೆ ಪೂರಕ ಸಲಕರಣೆಗಳನ್ನು ಉಚಿತವಾಗಿ ಕೊಡಿಸಿದ್ದೇನೆ. ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯವೂ ನಡೆಯುತ್ತಿದೆ’ ಎಂದರು. 

ಮಾರ್ಚ್‌ 17ಕ್ಕೆ ಸುವರ್ಣ ಮಹೋತ್ಸವ: ‘ಮಾರ್ಚ್‌ 17ಕ್ಕೆ ನಾನು ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷಗಳಾಗುತ್ತವೆ. 1974ರಲ್ಲಿ ಮೈಸೂರಿನಲ್ಲಿ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟಿದ್ದೆ. 1977ರಿಂದ ಚಾಮರಾಜನಗರದಿಂದ ಸ್ಪರ್ಧಿಸಲು ಆರಂಭಿಸಿದೆ. ನನ್ನ ಅಭಿಮಾನಿಗಳು ಸೇರಿ ಮೈಸೂರಿನ ಮುಕ್ತ ವಿವಿಯ ಘಟಿಕೋತ್ಸವ ಸಭಾಂಗಣದಲ್ಲಿ ಚುನಾವಣಾ ರಾಜಕೀಯ ಸುವರ್ಣಮಹೋತ್ಸವ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ’ ಎಂದು ಶ್ರೀನಿವಾಸ ಪ್ರಸಾದ್‌ ಹೇಳಿದರು.

 ‘ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಹಿತಿ ಚಂದ್ರಶೇಖರ ಕಂಬಾರ ಅವರು ‘ಸ್ವಾಭಿಮಾನಿ ನೆನಪುಗಳು’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.  

‘ಸ್ವಾಭಿಮಾನಿ ನೆನಪುಗಳು ಕೃತಿಯಲ್ಲಿ ನನ್ನ ರಾಜಕೀಯ ಜೀವನ, ನಾನು ಮಾಡಿರುವ ಕೆಲಸಗಳ ಬಗ್ಗೆ ಹೇಳಿದ್ದೇನೆ’ ಎಂದು ಸಂಸದರು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಅವರ ಅಳಿಯ ಡಾ.ಎನ್‌.ಎಸ್‌.ಮೋಹನ್‌ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT