ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಕರ್ಫ್ಯೂ: ಚಾಮರಾಜನಗರ ಜಿಲ್ಲೆ ಸ್ತಬ್ಧ,

ಜನರು, ವ್ಯಾಪಾರಿಗಳಿಂದ ಅಭೂತಪೂರ್ವ ಬೆಂಬಲ, ಮನೆಯಿಂದ ಹೊರ ಬಾರದ ಜನ, ವಹಿವಾಟು ಸಂಪೂರ್ಣ ಸ್ಥಗಿತ
Last Updated 22 ಮಾರ್ಚ್ 2020, 14:27 IST
ಅಕ್ಷರ ಗಾತ್ರ

ಚಾಮರಾಜನಗರ: ಜಗತ್ತಿನಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್‌ ದೇಶದಲ್ಲಿ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಇಡೀ ಗಡಿ ಜಿಲ್ಲೆ ಸ್ತಬ್ಧವಾಗಿತ್ತು.

ಆಸ್ಪತ್ರೆ, ಔಷಧ, ಆಂಬುಲೆನ್ಸ್‌, ಹಾಲು, ದಿನಪತ್ರಿಕೆ ಸೇರಿದಂತೆ ತುರ್ತು ಅವಶಕ್ಯತೆ ಸೇವೆಗಳನ್ನು ಬಿಟ್ಟರೆ ಬೇರೆ ಯಾವುದೇ ವಹಿವಾಟು ನಡೆಯಲಿಲ್ಲ. ಜಿಲ್ಲಾ ಕೇಂದ್ರ, ಇತರ ನಗರ, ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲದೇ ಹೋಬಳಿ ಕೇಂದ್ರಗಳು, ಗ್ರಾಮೀಣ ಮಟ್ಟದಲ್ಲೂ ಜನತಾ ಕರ್ಫ್ಯೂ ಸಂಪೂರ್ಣವಾಯಿತು.

ಜಿಲ್ಲೆಯಾದ್ಯಂತ ಬಹುತೇಕ ಜನರು ಮನೆಗಳಿಂದ ಹೊರಗಡೆ ಬಂದಿರಲಿಲ್ಲ. ಬೆರಳೆಣಿಕೆಯಷ್ಟು ಬಂದಿ ಸುತ್ತಾಡುತ್ತಿದ್ದರು.

ಜಿಲ್ಲಾ ಕೇಂದ್ರ ಸೇರಿದಂತೆ ಇಡೀ ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲಿಲ್ಲ. ಖಾಸಗಿ ಬಸ್‌ ಮಾಲೀಕರು ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಹೋಟೆಲ್‌ಗಳು, ದಿನಸಿ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್‌ ಆಗಿದ್ದವು. ತರಕಾರಿ ಮಾರುಕಟ್ಟೆಗಳೂ ಬಾಗಿಲು ಮುಚ್ಚಿದ್ದವು. ಬೆಳಿಗ್ಗೆ ಸ್ವಲ್ಪ ಸಮಯ ಅಲ್ಲಲ್ಲಿ ಕೆಲವು ಆಟೊಗಳು ಓಡಾಡುತ್ತಿದ್ದವು. ಜನರೇ ಇಲ್ಲದಿದ್ದುದರಿಂದ ಮಧ್ಯಾಹ್ನ ಮೇಲೆ ಆಟೊಗಳು ಕೂಡ ಕಾಣಲಿಲ್ಲ. ರೈಲು ಸಂಚಾರವೂ ರದ್ದಾಗಿತ್ತು.ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗಗವೂ ಬಂದ್‌ ಆಗಿತ್ತು. ತುರ್ತು ಸಂದರ್ಭದಲ್ಲಿ ಮಾತ್ರ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಸಂಪೂರ್ಣ ಬಂದ್‌ನ ವಾತಾವರಣ ಇತ್ತು. ಭಾನುವಾರ ಆಗಿದ್ದರಿಂದ ಸರ್ಕಾರಿ ಕಚೇರಿ, ಅಂಚೆ ಕಚೇರಿ, ಬ್ಯಾಂಕುಗಳು ತೆರೆದಿರಲಿಲ್ಲ. ಔಷಧಿ ಅಂಗಡಿಗಳು ಎಲ್ಲ ತೆರೆದಿದ್ದವು. ಜನರು ಬೆಳಿಗ್ಗೆ ಹಾಲು, ಪತ್ರಿಕೆಗಳನ್ನು ಖರೀದಿಸುವುದಕ್ಕಾಗಿ ನಗರಕ್ಕೆ ಬಂದಿದ್ದರು. ಬೆಳಿಗ್ಗೆ ಏಳೂವರೆ ನಂತರ ಹಾಲಿನ ಅಂಗಡಿಗಳೂ ಮುಚ್ಚಿದವು. ಹಾಲು ಸಿಗದೆ ಕೆಲವರು ಪರಿತಪಿಸಿದ ಪ್ರಸಂಗವೂ ನಡೆಯಿತು. ನಂತರ ಮಧ್ಯಾಹ್ನದ ಹೊತ್ತಿಗೆ ಚಾಮುಲ್‌ ಹಾಲು ಪೂರೈಸಿದ ನಂತರ ಅಂಗಡಿಗಳು ಮತ್ತೆ ತೆರೆದವು.

ಸಾಮಾನ್ಯವಾಗಿ ಬೆಳಗಿನ ಜಾವ ನಗರದ ವಿವಿಧ ಕಡೆಗಳಲ್ಲಿ ಚಹಾ ಅಂಗಡಿಗಳು ಕಾರ್ಯನಿರ್ವಹಿಸುತ್ತವೆ. ಭಾನುವಾರ ಅವರು ಕೂಡ ಮುಚ್ಚಿದ್ದರು. ಹಾಗಾಗಿ ಬೆಳಿಗ್ಗೆ ಒಂದು ಲೋಟ, ಚಹಾ, ಕಾಫಿ ಕೂಡ ನಗರದಲ್ಲಿ ಸಿಗದ ಸ್ಥಿತಿ ನಿರ್ಮಾಣವಾಗಿತ್ತು. ಅಂಗಡಿಗಳು ಮುಚ್ಚಿದ್ದರಿಂದ ದಿನಪತ್ರಿಕೆಗಳ ಏಜೆಂಟರು ಮತ್ತು ವಿತರಕರೇ ಸ್ವಲ್ಪ ಸಮಯ ಪತ್ರಿಕೆಗಳನ್ನು ಮಾರಾಟ ಮಾಡಿದರು. ಹೋಟೆಲ್‌ಗಳೂ ಮುಚ್ಚಿದ್ದವು. ಹಾಗಾಗಿ ಪ್ರತಿ ದಿನ ಹೋಟೆಲ್‌ ಅನ್ನು ಅವಲಂಬಿಸಿರುವವರು ಪರದಾಡುವಂತಾಯಿತು.

ಸದಾ ವಾಹನಗಳು ಹಾಗೂ ಜನರಿಂದ ಗಿಜಿಗುಡುತ್ತಿದ್ದ ಬಿ.ರಾಚಯ್ಯ ಜೋಡಿ ರಸ್ತೆ, ಡಿವೀಯೇಷನ್‌ ರಸ್ತೆ, ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತ, ದೊಡ್ಡ ಅಂಗಡಿ, ಚಿಕ್ಕ ಅಂಗಡಿ ಬೀದಿಗಳು ಖಾಲಿ ಖಾಲಿಯಾಗಿದ್ದವು. ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನಗಳು ಬಂದ್‌ ಆಗಿದ್ದವು. ಭಕ್ತರ ಸುಳಿವೂ ಇರಲಿಲ್ಲ.ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆಯೂ ಕಡಿಮೆ ಇತ್ತು.

ಗ್ರಾಮೀಣ ಭಾಗದಲ್ಲೂ ಕರ್ಫ್ಯೂ: ಹೋಬಳಿ ಮಟ್ಟ ಹಾಗೂ ಗ್ರಾಮೀಣ ಭಾಗಗಳಲ್ಲೂ ಜನತಾ ಕರ್ಫ್ಯೂಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಅಂಗಡಿಗಳು ಮುಚ್ಚಿದ್ದವು. ಯಾವುದೇ ವಹಿವಾಟು ನಡೆಯಲಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ನಿರಾಂತಕವಾಗಿ ಸಾಗಿತ್ತು. ಕೂಲಿ ಕೆಲಸದವರು ಭಾನುವಾರವೂ ತಮ್ಮ ಕರ್ತವ್ಯ ನಿರ್ವಹಿಸಿದರು.

ಶಾಂತಿಯುತ: ಜನತಾ ಕರ್ಫ್ಯೂ ಜಿಲ್ಲೆಯಾದ್ಯಂತ ಶಾಂತಿಯುತವಾಗಿತ್ತು. ಜಿಲ್ಲೆಯಾದ್ಯಂತ ಪೊಲೀಸ್‌ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ಕಡೆಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ನಗರದಲ್ಲಿ ಸುತ್ತಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ

ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸ್ಥಿತಿಗತಿಯ ಅವಲೋಕನ ಮಾಡುವುದಕ್ಕಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಭಾನುವಾರ ಅಧಿಕಾರಿಗಳ ಸಭೆಯನ್ನು ನಡೆಸಿದರು. ಕೊರೊನಾ ಹರಡುವಿಕೆ ತಡೆಯಲು ಕೈಗೊಳ್ಳಬೇಕಾದ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣ ರಾವ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಂಆರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಉಪ ವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ. ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ರಾತ್ರಿವರೆಗೂ ನಿಷೇಧಾಜ್ಞೆ: ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಜನತಾ ಕರ್ಫ್ಯೂ ಆಚರಿಸಲಾಯಿತು. ನಂತರ ಜನರ ಓಡಾಟವನ್ನು ತಡೆಯುವುದಕ್ಕಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಭಾನುವಾರ ರಾತ್ರಿ 12 ಗಂಟೆವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದರು.

ಅನುರಣಿಸಿದ ಕರತಾಡನ, ಗಂಟೆ, ಜಾಗಟೆ ನಾದ

ಚಾಮರಾಜನಗರ: ಪ್ರಧಾನಿ ಮೋದಿ ಅವರ ಕರೆಯಂತೆಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯರು, ಶುಶ್ರೂಷಕರು, ಪೊಲೀಸರು, ಸೈನಿಕರು, ಪೌರ ಕಾರ್ಮಿಕರೆಲ್ಲರಿಗೂ ನಗರದ ಜನತೆ ಭಾನುವಾರ ಸಂಜೆ 5 ಗಂಟೆಗೆ ಸರಿಯಾಗಿ5 ನಿಮಿಷ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ನಗರದ ವಿವಿಧ ಬಡಾವಣೆಗಳ ನಿವಾಸಿಗಳು ತಮ್ಮ ಮನೆಯ ಹೊರಗೆ ಬಂದು ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದರು. ಭಾರತ ಮಾತೆಗೆ ಜೈಕಾರ ಕೂಗಿ ಅಭಿನಂದನೆ ಸಲ್ಲಿಸಿದರು. ಕರ್ತವ್ಯ ನಿರತ ಪೊಲೀಸರು, ಸುತ್ತಮುತ್ತಲಿನ ಸಾರ್ವಜನಿಕರು ನಗರ, ಪಟ್ಟಣ ಪ್ರದೇಶಗಳ ವಿವಿಧ ವೃತ್ತಗಳಲ್ಲಿ ಚಪ್ಪಾಳೆ ತಟ್ಟಿದರು.

ಸರಿಯಾಗಿ ಐದು ಗಂಟೆ ಸುಮಾರಿಗೆ ಪೊಲೀಸ್‌ ವಾಹನಗಳು ಕೂಡ ಸೈರನ್‌ ಮೊಳಗಿಸುತ್ತಾ ನಗರದೆಲ್ಲೆಡೆ ಸುತ್ತಾಡಿದವು.

ಮನೆಯಲ್ಲೇ ಅಭಿನಂದಿಸಿ ಎಂದರೆ ಬೀದಿಗೆ ಬಂದರು: ಪ್ರಧಾನಿ ಅವರು ತಮ್ಮ ತಮ್ಮ ಮನೆಗಳಲ್ಲಿ ಚಪ್ಪಾಳೆ, ಗಂಟಾ ನಾದದ ಮೂಲಕ ಅಭಿನಂದನೆ ಸಲ್ಲಿಸುವಂತೆ ಕರೆ ನೀಡಿದ್ದರೆ, ಜನರು ಗುಂಪು ಗುಂಪಾಗಿ ರಸ್ತೆ, ವೃತ್ತಗಳಿಗೆ ಬಂದು ಮಾನವ ಸರಪಳಿ ನಿರ್ಮಿಸಿ, ಚಪ್ಪಾಳೆ ತಟ್ಟಿ, ಗಂಟೆ ಜಾಗಟೆ ಬಾರಿಸಿದರು. ಹೆಚ್ಚು ಜನ ಸೇರಿದರೂ, ವೈರಸ್‌ ಹರಡುವುದನ್ನು ತಡೆಗಟ್ಟಲು ಜನರು ಪರಸ್ಪರ ಒಂದು ಮೀಟರ್‌ ದೂರದಲ್ಲಿ ನಿಲ್ಲಬೇಕು. ಅದನ್ನು ಕೂಡ ಜನರು ಪಾಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT