ಬುಧವಾರ, ಜನವರಿ 20, 2021
21 °C

ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯ ನಂ.1: ಸಚಿವ ಜಗದೀಶ ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ರಾಜ್ಯದ ಕೈಗಾರಿಕಾ ಬೆಳವಣಿಗೆ ಉತ್ತಮವಾಗಿದ್ದು, ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಕರ್ನಾಟಕವು ದೇಶದಲ್ಲೇ ನಂಬರ್‌ 1 ಸ್ಥಾನದಲ್ಲಿದೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಹೇಳಿದರು. 

ನಗರದಲ್ಲಿ ಕೈಗಾರಿಕೋದ್ಯಮಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘2020ರ ಜನವರಿಯಿಂದ ಅಕ್ಟೋಬರ್‌ವರೆಗೆ ಇಡೀ ದೇಶದಲ್ಲಿ 1,188 ಕೈಗಾರಿಕೆಗಳ ಸ್ಥಾಪನೆಗೆ ಪ್ರಸ್ತಾವ ಬಂದಿವೆ. ಇವುಗಳ ಒಟ್ಟು ಬಂಡವಾಳ ಮೌಲ್ಯ ₹3.76 ಲಕ್ಷ ಕೋಟಿ. ಈ ಪೈಕಿ ನಮ್ಮ ರಾಜ್ಯದಲ್ಲಿ 95 ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಪ್ರಸ್ತಾವಗಳು ಬಂದಿವೆ. ಇವುಗಳ ಬಂಡವಾಳ ಮೊತ್ತ ₹1.54 ಲಕ್ಷ ಕೋಟಿ. ಅಂದರೆ ಒಟ್ಟು ಹೂಡಿಕೆಯಾಗುವ ಬಂಡವಾಳದಲ್ಲಿ ಶೇ 41ರಷ್ಟು ಕರ್ನಾಟಕದಲ್ಲೇ ಹೂಡಿಕೆಯಾಗಲಿದೆ’ ಎಂದು ಅವರು ಹೇಳಿದರು. 

‘ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಶ್ರಮ ಹಾಕುತ್ತಿದೆ. ರಾಯಚೂರು ಹಾಗೂ ಯಾದಗಿರಿ ಭಾಗಗಳಿಗೆ ಗಣನೀಯ ಪ್ರಮಾಣದಲ್ಲಿ ಕೈಗಾರಿಕೆಗಳು ಬರುತ್ತಿವೆ. ಇತ್ತೀಚೆಗೆ ನಡೆದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಒಂದೇ ಸಭೆಯಲ್ಲಿ 40 ಫಾರ್ಮಾ ಕಂಪನಿಗಳಿಗೆ ಅನುಮತಿ ನೀಡಲಾಗಿದೆ’ ಎಂದರು. 

ವಿಶೇಷ ಬಂಡವಾಳ ಹೂಡಿಕೆ ಪ್ರದೇಶ: ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗಳಿಗೆ ಸರ್ಕಾರ ಆದ್ಯತೆ ನೀಡಿದೆ. ಹೊಸ ಕೈಗಾರಿಕಾ ನೀತಿಯಲ್ಲಿ ಇದಕ್ಕೆ ಒತ್ತು ನೀಡಲಾಗಿದೆ ಎಂದು ಶೆಟ್ಟರ್‌ ಹೇಳಿದರು.  

‘ಇದಲ್ಲದೇ ರಾಜ್ಯದಲ್ಲಿ ಕೆಲವು ಪ್ರದೇಶಗಳನ್ನು ವಿಶೇಷ ಬಂಡವಾಳ ಹೂಡಿಕೆ ವಲಯ (ಎಸ್‌ಐಆರ್‌) ಎಂದು ಗುರುತಿಸುವ ಚಿಂತನೆ ಇದೆ. ಧಾರವಾಡ, ಶಿವಮೊಗ್ಗ ಹಾಗೂ ಕಲ್ಬುರ್ಗಿಗಳನ್ನು ಎಸ್‌ಐಆರ್‌ ಎಂದು ಗುರುತಿಸಲು ಯೋಜಿಸಲಾಗುತ್ತಿದೆ. ಇದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇದಕ್ಕಾಗಿ ವಿಶೇಷ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು