ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ 5ರಂದು ಬಿಜೆಪಿಗೆ ಸೇರ್ಪಡೆ

ಕೊಳ್ಳೇಗಾಲ: ನಂಜುಂಡಸ್ವಾಮಿ, ಮಹೇಶ್‌ ಜಂಟಿ ಪತ್ರಿಕಾಗೋಷ್ಠಿ
Last Updated 1 ಆಗಸ್ಟ್ 2021, 15:46 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಸ್ಥಳೀಯ ಶಾಸಕ ಎನ್‌.ಮಹೇಶ್‌ ಅವರ ಬಿಜೆಪಿ ಸೇರ್ಪಡೆಗೆ ದಿನಾಂಕ ನಿಗದಿಯಾಗಿದ್ದು, ಇದೇ 5ರಂದು ಬೆಂಗಳೂರಿನ ಬಿಜೆ‍ಪಿ ಕಚೇರಿಯಲ್ಲಿ ಸೇರಲಿದ್ದಾರೆ.

ನಗರದಲ್ಲಿ ಭಾನುವಾರ ರಾತ್ರಿ ಜಂಟಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಜಿ.ಎನ್‌.ನಂಜುಂಡಸ್ವಾಮಿ ಹಾಗೂ ಶಾಸಕ ಎನ್‌.ಮಹೇಶ್‌ ಅವರು ಈ ವಿಷಯ ತಿಳಿಸಿದರು.

ನಂಜುಂಡಸ್ವಾಮಿ ಅವರು ಮಾತನಾಡಿ, ‘ಎನ್‌.ಮಹೇಶ್‌ ಅವರು ಯಾವುದೇ ಷರತ್ತು ಇಲ್ಲದೇ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರುತ್ತಿದ್ದಾರೆ. ಎರಡು ವರ್ಷಗಳಿಂದಲೂ ಅವರು ಬಿಜೆಪಿ, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಮುಖಂಡರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಸರ್ಕಾರದ ಜೊತೆ ಕೈಜೋಡಿಸಿ ಅನೇಕ ಜನಪರ ಕೆಲಸಗಳನ್ನೂ ಮಾಡಿದ್ದಾರೆ’ ಎಂದರು.

‘ಯಡಿಯೂರಪ್ಪ ಅವರು ಜುಲೈ 30ರಂದು ಗುಂಡ್ಲುಪೇಟೆಗೆ ಬಂದಿದ್ದ ಸಂದರ್ಭದಲ್ಲಿ ಬೇಗ ಪಕ್ಷ ಸೇರುವಂತೆ ಮಹೇಶ್‌ ಅವರಿಗೆ ಸೂಚನೆ ನೀಡಿದ ನಂತರ ರಾಜ್ಯ ಘಟಕದ ಅಧ್ಯಕ್ಷರು, ನಮ್ಮ ಸಂಸದರು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಪಕ್ಷ ಸೇರ್ಪಡೆಗೆ ದಿನಾಂಕ ನಿಗದಿ ಪಡಿಸಲಾಗಿದೆ. ಆಗಸ್ಟ್‌ 5ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ. ಕೋವಿಡ್‌ ಹಾವಳಿ ಕಡಿಮೆಯಾದ ನಂತರ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು’ ಎಂದು ನಂಜುಂಡಸ್ವಾಮಿ ಅವರು ಹೇಳಿದರು.

ಭಿನ್ನಾಭಿಪ್ರಾಯವಿಲ್ಲ: ‘ಎನ್‌.ಮಹೇಶ್ ಅವರು ನಮ್ಮ ಪಕ್ಷ ಸೇರುವ ವಿಚಾರದಲ್ಲಿ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಎಸ್‌.ಸಿ ಮೋರ್ಚಾದ ಉಪಾಧ್ಯಕ್ಷರಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಬೇರೆ ಪಕ್ಷದ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ. ಅದೇ ರೀತಿ ನಮ್ಮ ಕ್ಷೇತ್ರದ ಶಾಸಕರು ಕೂಡ ಬಿಜೆಪಿಗೆ ಸೇರುವುದನ್ನು ಸ್ವಾಗತಿಸುತ್ತೇನೆ. ಇಬ್ಬರೂ ರಾಜ್ಯದಾದ್ಯಂತ ಪ್ರವಾಸಕೈಗೊಂಡು ಪಕ್ಷ ಸಂಘಟನೆ ಮಾಡುತ್ತೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ಗಾಗಿ ಇಬ್ಬರ ನಡುವೆಯೇ ಪೈಪೋಟಿ ಏರ್ಪಡಲಿದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಇಬ್ಬರೂ ಮುಖಂಡರು, ‘ಚುನಾವಣೆಗೆ ಇನ್ನೂ ಎರಡು ವರ್ಷಗಳಿವೆ. ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡುತ್ತಾರೋ, ಅದಕ್ಕೆ ಬದ್ಧರಾಗಿರುತ್ತೇವೆ’ ಎಂದರು.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬೆಂಬಲಿಗರಿಗೆ ಟಿಕೆಟ್‌ ಕೇಳುತ್ತೀರಾ ಎಂದು ಮಹೇಶ್‌ ಅವರನ್ನು ಪ್ರಶ್ನಿಸಿದಾಗ, ‘ಆ ಬಗ್ಗೆ ಈಗ ಏನೂ ಹೇಳಲಾರೆ. ಪಕ್ಷದ ವರಿಷ್ಠರು ತೀರ್ಮಾನದಂತೆ ನಡೆದುಕೊಳ್ಳುತ್ತೇನೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಗಂಗಮ್ಮ, ಸದಸ್ಯ ಮಧುಸೂಧನ್, ನಾಸೀರ್ ಷರೀಪ್, ಸೆಲ್ವರಾಜ್, ಸೋಮಣ್ಣ, ಜಿ.ಪಿ.ಶಿವಕುಮಾರ್, ಪ್ರಕಾಶ್, ನಾಗೇಂದ್ರ, ಬಿಜೆಪಿ ಟೌನ್ ಘಟಕದ ಅಧ್ಯಕ್ಷ ಲಕ್ಷ್ಮಿಪತಿ, ಮುಖಂಡ ಜಕಾವುಲ್ಲಾ, ಮಹದೇವಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT