ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಪ್ರವಾಸಿ ತಾಣಗಳಿಗೆ ಗ್ರಹಣ

ಐತಿಹಾಸಿಕ ಸ್ಥಳಗಳ ನಿರ್ಲಕ್ಷ್ಯ: ಮರೆಯಾದ ಅಣೆಕಟ್ಟೆಗಳ ಸೌಂದರ್ಯ;ಗಮನಹರಿಸದ ಪ್ರಾಚ್ಯವಸ್ತು ಇಲಾಖೆ
Last Updated 26 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಯಳಂದೂರು: ಅಪರೂಪದ ಬಳೆ ಮಂಟಪದ ಸೊಬಗು, ದಿವಾನರ ಕಾಲದ ಬಂಗಲೆಯ ಬೆಡಗು, ದಟ್ಟಾರಣ್ಯದ ವೈವಿಧ್ಯ, ಮನಸೂರೆಗೊಳ್ಳುವ ಡ್ಯಾಂಗಳ ವೈಭವಗಳು....

–ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಸಾಮರ್ಥ್ಯಹೊಂದಿರುವ ತಾಲ್ಲೂಕಿನ ಈ ತಾಣಗಳು ಇನ್ನೂ ಪ್ರವಾಸಿ ಕೇಂದ್ರಗಳಾಗಿ ಗುರುತಿಸಿಕೊಂಡಿಲ್ಲ.

ಜೀವವೈವಿಧ್ಯದ ದಟ್ಟ ಕಾಡು ಮತ್ತು ದೇವಳದ ಸಾಮೀಪ್ಯದಿಂದ ಭಕ್ತರನ್ನು ಆಕರ್ಷಿಸುವ ಬಿಆರ್‌ಟಿ ಪ್ರದೇಶವು ದೇಶ, ವಿದೇಶಿಗರನ್ನು ಆಕರ್ಷಿಸುತ್ತದೆ. ಅಲ್ಲಿ ಒಂದಷ್ಟು ಮೂಲಸೌಕರ್ಯಗಳನ್ನು ಬಿಟ್ಟರೆ ತಾಲ್ಲೂಕಿನ ಇತರ ಪ್ರವಾಸಿ ಸ್ಥಳಗಳ ಸ್ಥಿತಿ ಶೋಚನೀಯವಾಗಿದೆ.

ಪಟ್ಟಣದ ಗೌರೀಶ್ವರ ಪ್ರಾಂಗಣ ಹಾಗೂ ಚಾರಣಕ್ಕೆ ಹೇಳಿ ಮಾಡಿಸಿದ ವಡೆಗೆರೆ ಗುಡ್ಡ ಇನ್ನೂ ಅನಾಥವಾಗಿದ್ದು, ಇವುಗಳನ್ನು ಪ್ರವಾಸಿಗರ ನೋಟಕ್ಕೆ ತೆರೆದಿಡುವ ಪ್ರಯತ್ನಗಳು ನಡೆದಿಲ್ಲ. ಮೈಸೂರು ನಗರದಿಂದ ಯಳಂದೂರಿಗೆ 60 ಕಿ.ಮೀ. ದೂರ ಇದೆ. ಪಟ್ಟಣದಿಂದ 10 ಕಿ.ಮೀ ಅಂತರದಲ್ಲಿ ಬಿಆರ್‌ಟಿ ಕಾನನ ಆರಂಭವಾಗುತ್ತದೆ. ಆದರೆ, ತಾಲ್ಲೂಕಿನ ಹತ್ತಾರು ಕಿ.ಮೀ ದೂರದಲ್ಲಿ ಅಗರ, ಮಾಂಬಳ್ಳಿ, ಯರಿಯೂರು, ಗಣಿಗನೂರು, ಮದ್ದೂರು ಸುತ್ತಮುತ್ತಲ ಐತಿಹಾಸಿಕ ತಾಣಗಳ ಮಾಹಿತಿ ಇನ್ನೂ ದೊರೆತಿಲ್ಲ. ಗ್ರಾಮಗಳ ಸುತ್ತಲ ಕೆರೆ-ಕಟ್ಟೆಗಳಲ್ಲಿ ಇಳಿಯುವ ಪಕ್ಷಿ ಮತ್ತು ಚಿಟ್ಟೆಗಳ ಸಂತತಿ ಪರಿಚಯಿಸುವ ಕೆಲಸವೂ ನಡೆದಿಲ್ಲ.

ಪಟ್ಟಣಕ್ಕೆ ಬರುವ ಪ್ರವಾಸಿಗರಿಗೆ ಬಳೇಮಂಟಪ, ಶಾಸನ, ಪೂರ್ಣಯ್ಯ ಬಂಗಲೆಗಳ ಪರಿಚಯ ಮಾಡಿಕೊಡುವ ಕೆಲಸ ನಡೆದಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಈ ಸ್ಥಳಗಳು ಶೋಕೇಸ್‌ಗಳಂತಾಗಿದ್ದು, ಬೀಗ ಜಡಿದುಕೊಂಡಿವೆ. ಪ್ರಾಚ್ಯವಸ್ತು ಇಲಾಖೆ ಇಲ್ಲಿನ ಸುಂದರ ಶಿಲೆ, ಮೂರ್ತಿಗಳನ್ನು ಕುತೂಹಲಿಗಳ ವೀಕ್ಷಣೆಗಾಗಿ ಅನ್‌ಲಾಕ್‌ ನಂತರವೂ ಮುಕ್ತಗೊಳಿಸಿಲ್ಲ.

ಪಟ್ಟಣದಿಂದ 15 ಕಿ.ಮೀ ಅಂತರದಲ್ಲಿ ಕೃಷ್ಣಯ್ಯನಕಟ್ಟೆ, ಹೊಸಕೆರೆ ಮತ್ತು ಬೆಲ್ಲತ್ತ ಡ್ಯಾಂಗಳಿವೆ. ಇವು ಕಾಡಂಚಿನಲ್ಲಿ ಇದ್ದು, ಸುಂದರ ಪ್ರಾಕೃತಿಕ ಸೊಬಗನ್ನು ಹೊಂದಿವೆ. ಇಲ್ಲಿಂದ ಕಾಣುವ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಾಲು, 200ಕ್ಕಿಂತಲೂ ಹೆಚ್ಚಿನ ಪಕ್ಷಿಗಳ ಆಟೋಟಗಳು ಪರಿಸರ ಪ್ರಿಯರು ಹಾಗೂ ವನ್ಯಪ್ರೇಮಿಗಳನ್ನು ಆಕರ್ಷಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ, ಇಲ್ಲಿಗೆ ತೆರಳಲು ಮೂಲ ಸೌಕರ್ಯಗಳಿಲ್ಲ. ಇಲ್ಲಿಂದ ಕಣ್ಣೋಟಕ್ಕೆ ನಿಲುಕುವ ವೈವಿಧ್ಯಮಯ ಗುಡ್ಡ, ಬೆಟ್ಟ, ಗಿರಿ ಶಿಖರಗಳನ್ನು ತಿಳಿಸಿ ಹೇಳುವ ಕೆಲಸ ನಡೆದಿಲ್ಲ.

ಇತ್ತೀಚೆಗೆ ಕೆಲವೆಡೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೆಲವು ಪ್ರದೇಶಗಳಿಗೆ ತೆರಳಲು ರಸ್ತೆಗಳಿಲ್ಲ. ಜಲಾಶಯಗಳತ್ತ ತೆರಳಲು ಮತ್ತು ಅಲ್ಲಿ ಮಾಹಿತಿ ನೀಡಲು ಯಾರು ಸಿಗುವುದಿಲ್ಲ. ಮಳೆಗಾಲದ ಸಮಯದಲ್ಲಿ ತೆರಳಿ, ಹಸಿರು ಪರಿಸರ ವೀಕ್ಷಿಸಲು ಹಲವು ಅಡ್ಡಿ ಆತಂಕಗಳು ಇವೆ. ಪಟ್ಟಣದ ಸುವರ್ಣಾವತಿ ನದಿ ತಟದಲ್ಲಿ ಇರುವ ಜಪದಕಟ್ಟೆ, ಭೂ ವರಹಾಸ್ವಾಮಿ, ವಡೆಗೆರೆ ಬಿದ್ದಾಂಜನೇಯಸ್ವಾಮಿ, ಗೌಡಹಳ್ಳಿ ಹೊರವಲಯದ ಆಲಯ, ಪೋಡುಗಳ ಜನರ ಜೀವನ ಪದ್ಧತಿ,‌ ಆಚಾರ-ವಿಚಾರ ಉಡುಪು, ಕಲೆ ಸಂಸ್ಕೃತಿಗಳನ್ನು ಬಿಂಬಿಸುವ ಮೂಲಕ ಪ್ರವಾಸಿಗರ ಮನಗೆಲ್ಲಲು ಇರುವ ಅವಕಾಶಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ.

‘ತಾಲ್ಲೂಕಿನ ಬಿಆರ್‌ಟಿಯು ಪ್ರಕೃತಿ ಸಂಶೋಧಕರು, ಚಾರಣಿಗರು, ಭಕ್ತರು, ಪಕ್ಷಿ ಮತ್ತು ವನ್ಯಪ್ರಿಯರನ್ನು ಸದಾ ಸೆಳೆಯುತ್ತದೆ. ದೇವಾಲಯಕ್ಕೆ ಕೋಟ್ಯಂತರ ರೂಪಾಯಿ ಆದಾಯ ತಂದುಕೊಡುತ್ತದೆ. ಇಲ್ಲಿಗೆ ಉತ್ತಮ ಸಾರಿಗೆ ಸೌಲಭ್ಯ ಇದೆ. ಇದನ್ನು ಬಳಸಿಕೊಂಡು ಪ್ರವಾಸಿಗರನ್ನು ಸೆಳೆಯುವ ಕೆಲಸವನ್ನು ಮಾಡಬೇಕು’ ಎಂದು ಅಭಿಪ್ರಾಯಪಡುತ್ತಾರೆ ಪಟ್ಟಣದ ಏಕಲ್ ವಿದ್ಯಾಸಂಸ್ಥೆಯ ಗೋಪಾಲಕೃಷ್ಣ.

ಬೋಟ್ ವ್ಯವಸ್ಥೆ ಇಲ್ಲ

ಡ್ಯಾಂಗಳ ಹಿನ್ನೀರಿನಲ್ಲಿ ಬೋಟ್ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳ ಮತ್ತು ಮಹಿಳೆಯರ ಆಕರ್ಷಣೆ ಹೆಚ್ಚಿಸುವ ಮತ್ತು ಭದ್ರತೆ ಒದಗಿಸುವ ತಾಣವಾಗಿಸುವಂತೆ ಯೋಜನೆ ರೂಪಿಸಬೇಕು.

-ನಂಜುಂಡಪ್ರಸಾದ್‌,ಶಿಕ್ಷಕರು ಯಳಂದೂರು

ವಸತಿಗೃಹ ಬೇಕಿದೆ

ತಾಲ್ಲೂಕು ಪ್ರವಾಸಿ ತಾಣಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುವ ಗೈಡ್ ಗಳ ಅವಶ್ಯಕತೆ ಇದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಗುಣಮಟ್ಟದ ವಸತಿಗೃಹ ಮತ್ತು ಶೌಚಾಲಯ ಒದಗಿಸಬೇಕು

-ದೊರೆಸ್ವಾಮಿ,ಮಾಜಿ ಧರ್ಮದರ್ಶಿಗಳು. ಯಳಂದೂರು.

ಪಟ್ಟಣದ ಐಕಾನ್ ಮಾಡಿ

ಬಳೇಮಂಟಪ ಪಟ್ಟಣದ ಐಕಾನ್ ಆಗಬೇಕು. ನೂತನ ಲಕ್ಷ್ಮೀ ವೆಂಕಟೇಶ್ವರ, ರಾಘವೇಂದ್ರಸ್ವಾಮಿಮಠ ಮತ್ತು ಗೌರೀಶ್ವರ ದೇವಾಲಯಗಳ ಗುಚ್ಛಗಳನ್ನು ಪ್ರವಾಸಿಗರಿಗೆ ತಿಳಿಸುವ ಕೆಲಸ ಆಗಬೇಕು.

-ಸೇತುರಾಮ್‌ ರಾವ್‌,ಯಳಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT