ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ: ಲಾಂಟಾನ ತೆರ‌ವಿಗೆ ನರೇಗಾ ಬಲ

ಐದು ವಲಯಗಳಲ್ಲಿ ಕಾಮಗಾರಿ, ತಲಾ 50 ಹೆಕ್ಟೇರ್‌ ಪ್ರದೇಶದಲ್ಲಿ ತೆರವು
Last Updated 24 ಜೂನ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ವ್ಯಾಪಿಸಿರುವ ಲಾಂಟಾನ ಕಳೆಗಿಡಗಳನ್ನು ತೆರವುಗೊಳಿಸಲು ಈ ಬಾರಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯನ್ನು ಬಳಸಲಾಗುತ್ತಿದೆ.

ಸಾಮಾನ್ಯವಾಗಿ ಅರಣ್ಯ ಇಲಾಖೆಯೇ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಳೆ ಗಿಡಗಳನ್ನು ತೆಗೆಯುವ ಕೆಲಸ ಮಾಡುತ್ತದೆ. ಇದೇ ಮೊದಲ ಬಾರಿಗೆ ನರೇಗಾ ಅಡಿಯಲ್ಲಿ ಲಾಂಟಾನವನ್ನು ತೆರವುಗೊಳಿಸಲಾಗುತ್ತಿದೆ.

ಬಿಆರ್‌ಟಿಯ ಐದೂ ವಲಯಗಳಲ್ಲಿ ತಲಾ 50 ಹೆಕ್ಟೇರ್‌ ಪ್ರದೇಶಗಳಲ್ಲಿ ಹರಡಿರುವ ಲಾಂಟಾನವನ್ನು ನರೇಗಾ ಕೂಲಿ ಕಾರ್ಮಿಕರು ತೆರವುಗೊಳಿಸಲಿದ್ದಾರೆ. ಲಾಂಟಾನ ತೆರವುಗೊಳಿಸಿದ ಸ್ಥಳದಲ್ಲಿ ಹುಲ್ಲು ಹಾಗೂ ಬಿದಿರು ಬೆಳೆಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.

ಅರಣ್ಯಕ್ಕೆ ಶಾಪ: ಪ್ರಾಣಿಗಳು ಹಾಗೂ ಗಿಡ ಮರಗಳಿಗೆ ಶಾಪವಾಗಿ ಪರಿಣಮಿಸಿರುವ ಲಾಂಟಾನ ಕಳೆಗಿಡ ಬಿಆರ್‌ಟಿ ಅರಣ್ಯದ ಶೇ 60ರಿಂದ 70ರಷ್ಟು ಪ್ರದೇಶವನ್ನು ವ್ಯಾಪಿಸಿದೆ. ಈ ಕಳೆಗಿಡದ ಕಾರಣಕ್ಕೆ ಆನೆ, ಜಿಂಕೆ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಿಗೆ ಸಾಕಷ್ಟು ಆಹಾರ ಸಿಗದಂತಾಗಿದೆ. ಲಾಂಟಾನವನ್ನು ಸಂಪೂರ್ಣವಾಗಿ ನಿರ್ಮೂಲಕನೆ ಮಾಡುವ ಅರಣ್ಯ ಇಲಾಖೆಯ ಪ್ರಯತ್ನಗಳಿಗೆ ಇದುವರೆಗೆ ಯಶಸ್ಸು ದೊರಕಿಲ್ಲ. ಹಣಕಾಸಿನ ಲಭ್ಯತೆ ನೋಡಿಕೊಂಡು, ಅವಕಾಶ ಸಿಕ್ಕಾಗಲೆಲ್ಲ ಕಾರ್ಮಿಕರು ಹಾಗೂ ಯಂತ್ರಗಳ ಮೂಲಕ ಲಾಂಟಾನ ತೆರವುಗೊಳಿಸುವ ಕೆಲಸವನ್ನು ಅದು ಮಾಡುತ್ತದೆ.

ಈ ವರ್ಷ ನರೇಗಾ ಅಡಿಯಲ್ಲಿ ಸೋಲಿಗರು ಹಾಗೂ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಲಾಂಟಾನ ತೆರವುಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಐದು ವಲಯಗಳಲ್ಲಿ ಈ ಕಾರ್ಯ ನಡೆಯಲಿದ್ದು, ಸದ್ಯ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದೆ. ಬೀದಿಕೆರೆ, ಕೆಣ್‌ಕೆರೆ, ಸೋಮೇಶ್ವರ ಕೆರೆ, ಶೆಟ್ರಕಟ್ಟೆ ಪ್ರದೇಶದಲ್ಲಿ ತೆರವು ಕಾರ್ಯ ಪ್ರಗತಿಯಲ್ಲಿದೆ. ಉಳಿದ ಕಡೆಗಳಲ್ಲೂ ಶೀಘ್ರವಾಗಿ ಆರಂಭವಾಗಲಿದೆ.

‘ನಮ್ಮ ವಲಯದಲ್ಲೂ 50 ಹೆಕ್ಟೇರ್‌ ಪ್ರದೇಶದಲ್ಲಿ ಲಾಂಟಾನ ತೆಗೆಯಲು ಅನುಮತಿ ಸಿಕ್ಕಿದೆ. ಅಗತ್ಯವಾದ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಶೀಘ್ರವಾಗಿ ಕೆಲಸ ಆರಂಭವಾಗಲಿದೆ’ ಎಂದು ಕೆ.ಗುಡಿ ವಲಯ ಅರಣ್ಯ ಅಧಿಕಾರಿ (ಆರ್‌ಎಫ್‌ಒ) ಶಾಂತಪ್ಪ ಪೂಜಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆ ಗಿಡಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ಹುಲ್ಲುಗಾವಲು ನಿರ್ಮಾಣ, ಕಂದಕಗಳ ನಿರ್ಮಾಣ ಮಾಡುವುದಕ್ಕೆ ನರೇಗಾ ಯೋಜನೆಯನ್ನು ಬಳಸಬಹುದು’ ಎಂದು ಜಿಲ್ಲಾಪಂಚಾಯಿತಿ ಅಧಿಕಾರಿಗಳು ಹೇಳಿದರು.

ಹುಲ್ಲು, ಬಿದಿರು ನಾಟಿ

ಐದು ವಲಯಗಳ ತಲಾ 50 ಹೆಕ್ಟೇರ್‌ ಪ್ರದೇಶದಲ್ಲಿ ಲಾಂಟಾನ ಗಿಡಗಳನ್ನು ಕಾರ್ಮಿಕರು ಬೇರು ಸಹಿತ ಕಿತ್ತು ಹಾಕಲಿದ್ದು, ಈ ಪ್ರದೇಶದಲ್ಲಿ ಹುಲ್ಲುಗಾವಲು ನಿರ್ಮಾಣ ಹಾಗೂ ಬಿದಿರನ್ನು ಅರಣ್ಯ ಇಲಾಖೆ ಬೆಳೆಸಲಿದೆ.

ಮೊದಲ ಹಂತದಲ್ಲಿ ಕಳೆಗಳನ್ನು ತೆರವುಗೊಳಿಸಲಾಗುವುದು. ನವೆಂಬರ್‌ ಡಿಸೆಂಬರ್‌ ತಿಂಗಳಲ್ಲಿ ಹುಲ್ಲು ಹಾಗೂ ಬಿದಿನ ಬೀಜಗಳನ್ನು ಸಂಗ್ರಹಿಸಿ ಮುಂದಿನ ಮಳೆಗಾಲದ ಆರಂಭದಲ್ಲಿ ಬೀಜಗಳನ್ನು ನಾಟಿ ಮಾಡಲಾಗುವುದು’ ಎಂದು ಆರ್‌ಎಫ್‌ಒ ಶಾಂತಪ್ಪ ಪೂಜಾರ್‌ ಅವರು ವಿವರಿಸಿದರು.

‘ಇದೊಂದು ಅತ್ಯುತ್ತಮ ನಿರ್ಧಾರ. ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯಲ್ಲಿ ಕೆಲಸ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಅರಣ್ಯಕ್ಕೆ ಒಳ್ಳೆಯಾಗುವುದರ ಜೊತೆಗೆ ಸ್ಥಳೀಯ ಕಾರ್ಮಿಕರಿಗೂ ಕೂಲಿ ಸಿಗಲಿದೆ.ಗಿಡಗಳನ್ನು ತೆರವುಗೊಳಿಸಿದ ಜಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಲ್ಲಿನ ಬೀಜ, ಬಿದಿರು ಬೀಜಗಳನ್ನು ನಾಟಿ ಮಾಡಲಿದ್ದಾರೆ. ಈ ಕಾರ್ಯಕ್ಕೆ ನಮ್ಮ ಸಂಸ್ಥೆಯೂ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಟ್ರಸ್ಟ್‌ ಅಧ್ಯಕ್ಷ ಜಿ.ಮಲ್ಲೇಶಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

* ನರೇಗಾ ಅಡಿಯಲ್ಲಿ ಲಾಂಟಾನ ತೆರವುಗೊಳಿಸಲು ಅನುಮತಿ ಸಿಕ್ಕಿದ್ದು, ಎಲ್ಲ ಐದು ವಲಯಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ಕೆಲಸ ಆರಂಭವಾಗಿದೆ.

-ಡಾ.ಜಿ.ಸಂತೋಷ್‌ಕುಮಾರ್‌, ಬಿಆರ್‌ಟಿ ಡಿಸಿಎಫ್‌

* ಲಾಂಟಾನದ ಹಾವಳಿಯಿಂದಾಗಿ ವನ್ಯಪ್ರಾಣಿಗಳ ಆವಾಸಕ್ಕೆ ಧಕ್ಕೆಯಾಗಿದೆ. ಇದನ್ನು ತೆರವುಗೊಳಿಸುವುದರಿಂದ ವನ್ಯಜೀವಿಗಳಿಗೆ, ಅರಣ್ಯದ ಪರಿಸರಕ್ಕೆ ಅನುಕೂಲವಾಗಲಿದೆ.

-ಜಿ.ಮಲ್ಲೇಶಪ್ಪ, ವನ್ಯಜೀವಿ ಮಂಡಳಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT