ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಚಾಮರಾಜನಗರ: ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕಿದ ಬಿಜೆಪಿ

ನಾಯಕರ ಮೇಲೆ ಒತ್ತಡ ಹಾಕಿದ್ದ ಸ್ಥಳೀಯ ಆಕಾಂಕ್ಷಿಗಳು
Published 15 ಮಾರ್ಚ್ 2024, 6:45 IST
Last Updated 15 ಮಾರ್ಚ್ 2024, 6:45 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯ ಅಭ್ಯರ್ಥಿಯನ್ನೇ ಆಯ್ಕೆ ಮಾಡುವ ಮೂಲಕ ಟಿಕೆಟ್‌ ಆಕಾಂಕ್ಷಿಗಳ ಬೇಡಿಕೆಯನ್ನು ಬಿಜೆಪಿ ವರಿಷ್ಠರು ಈಡೇರಿಸಿದ್ದಾರೆ. 

ಆಕಾಂಕ್ಷಿಗಳ ಪಟ್ಟಿಯಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅಳಿಯಂದಿರಾದ ಡಾ.ಎನ್‌.ಎಸ್‌.ಮೋಹನ್‌, ಹರ್ಷವರ್ಧನ್‌, ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ (ಈಗ ನಿಧನರಾಗಿದ್ದಾರೆ), ನಿವೃತ್ತ ಐಎಫ್‌ಎಸ್‌ ಅಧಿಕಾರಿ ಆರ್‌.ರಾಜು ಅವರ ಹೆಸರು ಕೇಳಿಬರುತ್ತಲೇ ಸ್ಥಳೀಯ ಆಕಾಂಕ್ಷಿಗಳಲ್ಲಿ ಕೆಲವರು, ‘ಯಾರಿಗಾದರೂ ಟಿಕೆಟ್‌ ಕೊಡಿ, ಸ್ಥಳೀಯರಿಗೆ ಕೊಡಿ’ ಎಂದು ರಾಜ್ಯ ನಾಯಕರನ್ನು ಒತ್ತಾಯಿಸಿದ್ದರು. 

ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ, ಮುಖಂಡ ವೆಂಕಟರಮಣಸ್ವಾಮಿ (ಪಾಪು) ಅವರು ಬಹಿರಂಗವಾಗಿ ಈ ಬೇಡಿಕೆಯನ್ನು ಮುಂದಿಟ್ಟಿದ್ದರು. 

ಒಂದು ವೇಳೆ ಹೊರಗಿನವರಿಗೆ ಟಿಕೆಟ್‌ ನೀಡಿದ್ದರೆ ಸ್ಥಳೀಯ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆ ಇತ್ತು. ಆದರೆ, ಅಭ್ಯರ್ಥಿಯಾಗಿರುವ ಎಸ್‌.ಬಾಲರಾಜ್‌ ಅವರು ಕ್ಷೇತ್ರ ವ್ಯಾಪ್ತಿಯಾಗಿರುವುದರಿಂದ ಅಂತಹ ಸನ್ನಿವೇಶ ಸೃಷ್ಟಿಯಾಗಿಲ್ಲ.

ಆಕಾಂಕ್ಷಿಗಳಾಗಿದ್ದ ಎಸ್‌.ಮಹದೇವಯ್ಯ, ವೆಂಕಟರಮಣಸ್ವಾಮಿ (ಪಾಪು) ಅವರು ವರಿಷ್ಠರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. 

ಕಾಣದ ಭಿನ್ನ‌ಮತ: ಈ ಮಧ್ಯೆ, ಟಿಕೆಟ್‌ ಘೋಷಣೆ ಬಳಿಕ ಪಕ್ಷದಲ್ಲಿ ಸದ್ಯಕ್ಕೆ ಭಿನ್ನಮತ ಕಂಡು ಬಂದಿಲ್ಲ. ಆಕಾಂಕ್ಷಿಗಳು ಅಥವಾ ಪಕ್ಷದ ಪ್ರಮುಖ ಮುಖಂಡರು ಯಾರೂ ವರಿಷ್ಠರ ನಿರ್ಧಾರದ ವಿರುದ್ಧ ಮಾತನಾಡಿಲ್ಲ. 

‘ಪಕ್ಷದಲ್ಲಿ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಮುಖಂಡರು ಕ್ಷೇತ್ರ ವ್ಯಾಪ್ತಿಯ ಎಂಟೂ ಕ್ಷೇತ್ರಗಳ ಮುಖಂಡರ ಅಭಿಪ್ರಾಯ ಪಡೆದುಕೊಂಡೇ ಹೆಸರುಗಳನ್ನು ಅಂತಿಮಗೊಳಿಸಿದ್ದರು. ಎಲ್ಲ ಆಕಾಂಕ್ಷಿಗಳಿಗೂ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಮಾಹಿತಿಯೂ ಇತ್ತು. ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಕೂಡ ಪ್ರತಿಕ್ರಿಯೆ ನೀಡಿಲ್ಲ. 17ರಂದು ನಡೆಯಲಿರುವ ಅಭಿನಂದನಾ ಸಮಾರಂಭದಲ್ಲಿ ತಮ್ಮ ಅಭಿಪ್ರಾಯವನ್ನು ಅವರು ಹೇಳಬಹುದು’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಇದೆಯೇ ಜನಬೆಂಬಲ?

ಕೊಳ್ಳೇಗಾಲ ಕ್ಷೇತ್ರದವರಾದ ಬಾಲರಾಜ್‌ ಅವರು ಚಾಮರಾಜನಗರ ಜಿಲ್ಲೆಯಾದ್ಯಂತ ಪರಿಚಿತರು. ಚಾಮರಾಜನಗರ ಕೊಳ್ಳೇಗಾಲ ಹನೂರು ಭಾಗದಲ್ಲಿ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಆದರೆ ಮೈಸೂರು ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಇವರ ಪರಿಚಯ ಹೆಚ್ಚಿಲ್ಲ. ‘ಆದರೆ ಆರ್‌.ಧ್ರುವನಾರಾಯಣ ಅವರ ಒಡನಾಡಿಯಾಗಿದ್ದ ಬಾಲರಾಜ್‌ ಧ್ರುವನಾರಾಯಣ ಅವರು ಸಂಸದರಾಗಿದ್ದಾಗ ಅವರೊಂದಿಗೆ ಕ್ಷೇತ್ರದಾದ್ಯಂತ ಸುತ್ತಾಡಿದ್ದರು. ಹಾಗಾಗಿ ಕ್ಷೇತ್ರಗಳ ಪರಿಚಯ ಅವರಿಗಿದೆ. ತಿ.ನರಸೀಪುರ ನಂಜನಗೂಡು ಕ್ಷೇತ್ರ ಕೊಳ್ಳೇಗಾಲದಲ್ಲಿ ಅಂಟಿಕೊಂಡೇ ಇದೆ. ಎಚ್‌.ಡಿ.ಕೋಟೆಯನ್ನೂ ಅವರು ಬಲ್ಲರು. ವರುಣದ ಸಂಪರ್ಕ ಸ್ವಲ್ಪ ಕಡಿಮೆ ಇರಬಹುದು’ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ನಾನೂ ಆಕಾಂಕ್ಷಿಯಾಗಿದ್ದೆ. ಕೊನೇ ಕ್ಷಣದಲ್ಲಿ ಕೈತಪ್ಪಿದೆ. ಸ್ಥಳೀಯರನ್ನು ಆಯ್ಕೆ ಮಾಡಿದ್ದು ಸ್ವಾಗತಾರ್ಹ. ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ.
– ಎಸ್‌.ಮಹದೇವಯ್ಯ, ಟಿಕೆಟ್‌ ಆಕಾಂಕ್ಷಿ
ಸ್ಥಳೀಯರಾಗಿರುವ ಎಸ್‌.ಬಾಲರಾಜ್‌ ಆಯ್ಕೆ ಸ್ವಾಗತಾರ್ಹ. ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್‌ ಬಿಎಸ್‌ಪಿ ಕೂಡ ಸ್ಥಳೀಯರಿಗೇ ಟಿಕೆಟ್‌ ನೀಡಬೇಕು.
–ವೆಂಕಟರಮಣಸ್ವಾಮಿ (ಪಾಪು) ಟಿಕೆಟ್‌ ಆಕಾಂಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT