ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ: ಜನತಂತ್ರದ ಹಬ್ಬಕ್ಕೆ ಎರಡನೇ ದಿನ

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ; 26ರಂದು ಮತದಾನ, ಸಕಲ ಸಿದ್ಧತೆ
Published 24 ಏಪ್ರಿಲ್ 2024, 4:04 IST
Last Updated 24 ಏಪ್ರಿಲ್ 2024, 4:04 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾನಕ್ಕೆ ಇನ್ನು 2 ದಿನ ಮಾತ್ರ ಉಳಿದಿದ್ದು, 26ರಂದು ನಡೆಯಲಿರುವ ಮತದಾನಕ್ಕೆ  ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. 

ಜಿಲ್ಲೆ ಮತ್ತು ಮೈಸೂರು ಜಿಲ್ಲೆಗಳ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಏ.4ಕ್ಕೆ ಅಂತಿಮಗೊಂಡ ಮತದಾರರ ಪಟ್ಟಿಯ ಪ್ರಕಾರ, ಕ್ಷೇತ್ರದಲ್ಲಿ 17,78,310 ಮತದಾರರಿದ್ದಾರೆ. ಈ ಪೈಕಿ8,78,702 ಪುರುಷರು, 8,99,501 ಮಹಿಳೆಯರು ಮತ್ತು 107 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ. 357 ಸೇವಾ ಮತದಾರರಿದ್ದು, ಇವರಲ್ಲಿ 344 ಪುರುಷರು ಮತ್ತು 13 ಮಹಿಳೆಯರು’ ಎಂದು ಅವರು ಮಾಹಿತಿ ನೀಡಿದರು.

36 ಸಾವಿರ ಯುವ ಮತದಾರರು: ಕ್ಷೇತ್ರದಲ್ಲಿ 19,706 ಪುರುಷ, 16,460 ಮಹಿಳೆ ಮತ್ತು ಏಳು ಮಂದಿ ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ 36,173 ಯುವ ಮತದಾರರಿದ್ದಾರೆ.  

ಕ್ಷೇತ್ರ ವ್ಯಾಪ್ತಿಯಲ್ಲಿ 2,000 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 263 ಮತಗಟ್ಟೆಗಳು ನಗರ ಪ್ರದೇಶಗಳಲ್ಲಿ ಮತ್ತು 1,737 ಗ್ರಾಮೀಣ ಪ್ರದೇಶಗಳಲ್ಲಿವೆ. ಚಾಮರಾಜನಗರ ಜಿಲ್ಲೆಯಲ್ಲಿ 197 ಮತ್ತು ಮೈಸೂರು ಜಿಲ್ಲೆಯಲ್ಲಿ 156 ಮತಗಟ್ಟೆಗಳು ಸೇರಿದಂತೆ 353 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 

‘ಚಾಮರಾಜನಗರ ಜಿಲ್ಲೆಯ 78 ಮತ್ತು ಮೈಸೂರು ಜಿಲ್ಲೆಯ 106 ಸೇರಿದಂತೆ 184 ಮತಗಟ್ಟೆಗಳನ್ನು ಮಾನವ ಮತ್ತು ಪ್ರಾಣಿ ಸಂಘರ್ಷಿತ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ದೂರವಾಣಿ ಸಂಪರ್ಕ ಇಲ್ಲದಿರುವುದರಿಂದ ತಾತ್ಕಾಲಿಕವಬಾಗಿ ವೈರ್‌ಲೆಸ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ಶಿಲ್ಪಾ ನಾಗ್‌ ಹೇಳಿದರು.  

‘ಒಟ್ಟು ಮತಗಟ್ಟೆಗಳ ಪೈಕಿ 1,509 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಮಾಡಲಾಗುತ್ತದೆ. ಬಿಸಿಲು ತೀವ್ರವಾಗಿರುವುದರಿಂದ ಮತಗಟ್ಟೆ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ತುರ್ತು ಆಂಬುಲೆನ್ಸ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು’ ಎಂದು ಹೇಳಿದರು. 

ಇವಿಎಂ ಬಳಕೆ:  ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಲಾಗುತ್ತಿದ್ದು, 2000 ಮತಗಟ್ಟೆಗಳಿಗೆ 2,559 ಬ್ಯಾಲೆಟ್ ಯೂನಿಟ್ (ಬಿಯು), 2,618 ಕಂಟ್ರೋಲ್ ಯೂನಿಟ್ (ಸಿಯು), 2,792 ವಿವಿ ಪ್ಯಾಟ್ ಹಂಚಿಕೆ ಮಾಡಲಾಗಿದೆ. 

‘ಶೇ 20ರಷ್ಟು ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ 2,200 ಪ್ರಿಸೈಡಿಂಗ್‌ ಅಧಿಕಾರಿಗಳು, 2,200 ಮೊದಲನೇ ಮತಗಟ್ಟೆ ಅಧಿಕಾರಿಗಳು, 4,400 2ನೇ ಮತ್ತು 3ನೇ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದರು. 

‘ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ವಿವಿಧ ಚುನಾವಣಾ ಕಾರ್ಯಗಳಿಗಾಗಿ ನೇಮಕವಾಗಿರುವ ಅಧಿಕಾರಿ, ಸಿಬ್ಬಂದಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5,222 ಅಂಚೆ ಮತಪತ್ರಗಳನ್ನು ನೀಡಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದ್ದು, 1,372 ಮತದಾರರು ಮತ ಚಲಾಯಿಸಿದ್ದಾರೆ’ ಎಂದು ಶಿಲ್ಪಾ ನಾಗ್‌ ಹೇಳಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಭಾಗವಹಿಸಿದ್ದರು. 

ಮತದಾನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದೇವೆ. ಕ್ಷೇತ್ರ ವ್ಯಾಪ್ತಿಯ ಮತದಾರರು ಗರಿಷ್ಠ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಹಕ್ಕು ಚಲಾಯಿಸಬೇಕು

-ಸಿ.ಟಿ.ಶಿಲ್ಪಾ ನಾಗ್‌ ಜಿಲ್ಲಾ ಚುನಾವಣಾಧಿಕಾರಿ

ಎಲ್ಲೆಲ್ಲಿ ಮಸ್ಟರಿಂಗ್‌ ಡಿ– ಮಸ್ಟರಿಂಗ್‌?

ಮಸ್ಟರಿಂಗ್‌ ಕಾರ್ಯ ಗುರುವಾರ (ಏ.25) ಕ್ಷೇತ್ರ ವ್ಯಾಪ್ತಿಯ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ.    ಎಚ್.ಡಿ. ಕೋಟೆಯ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ನಂಜನಗೂಡಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ವರುಣ ವಿಧಾನಸಭಾ ಕ್ಷೇತ್ರಕ್ಕಾಗಿ ನಂಜನಗೂಡು ತಾಲ್ಲೂಕಿನ  ದೇವಿರಮ್ಮನ ಹಳ್ಳಿಯ ಜೆಎಸ್‍ಎಸ್ ಪ್ರಥಮ ದರ್ಜೆ ಕಾಲೇಜು ತಿ.ನರಸೀಪುರದ ವಿದ್ಯೋದಯ ಪದವಿ ಪೂರ್ವ ಕಾಲೇಜು ಹಾಗೂ ಹನೂರಿನ ಕ್ರಿಸ್ತರಾಜ ಎಜುಕೇಷನ್ ಟ್ರಸ್ಟ್ ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಚಾಮರಾಜನಗರದ ಕರಿನಂಜನಪುರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಂಡ್ಲುಪೇಟೆಯ ಊಟಿ ರಸ್ತೆಯಲ್ಲಿರುವ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯಲಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಚಾಮರಾಜನಗರದ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 4ರಂದು ನಡೆಯಲಿದೆ.

ಬಹಿರಂಗ ಪ್ರಚಾರ ಅಂತ್ಯ ಇಂದು

ಚುನಾವ‌ಣಾ ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆ 6 ಗಂಟೆಗೆ ತೆರೆ ಬೀಳಲಿದೆ.  ಆ ಬಳಿಕ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಅವರ ಬೆಂಬಲಿಗರು ಧ್ವನಿವರ್ಧಕಗಳನ್ನು ಬಳಸಿಕೊಂಡು ಪ್ರಚಾರ ಮಾಡುವಂತಿಲ್ಲ. ಐವರಿಗಿಂತ ಹೆಚ್ಚು ಜನ ಗುಂಪು ಸೇರುವುದು ಜೊತೆಯಲ್ಲಿ ಸಂಚರಿಸುವುದನ್ನು ನಿಷೇಧಿಸಿದೆ. ಆದರೆ ಅಭ್ಯರ್ಥಿ ಸೇರಿದಂತೆ 10 ಜನರು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಲು ಅವಕಾಶ ನೀಡಲಾಗಿದೆ.  ಬಹಿರಂಗ ಪ್ರಚಾರ ಕೊನೆಗೊಳ್ಳುವುದರ ಒಳಗಾಗಿ ಅಂದರೆ ಬುಧವಾರ ಸಂಜೆ 6 ಗಂಟೆಯ ಒಳಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಪರ ಮತ ಯಾಚಿಸುವ ಕ್ಷೇತ್ರದ ಮತದಾರರಲ್ಲದ ಏಜೆಂಟರು ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಿಂದ ಹೊರ ಹೋಗುವಂತೆ ಆದೇಶಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT