ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಮನ ಸೆಳೆಯಲಿವೆ ವಿಶೇಷ ಮತಗಟ್ಟೆಗಳು

ಜಿಲ್ಲೆಯಲ್ಲಿ ಮತದಾನಕ್ಕೆ ವಿಶೇಷ ಪೊಲೀಸ್‌ ಬಂದೋಬಸ್ತ್‌,
Published 24 ಏಪ್ರಿಲ್ 2024, 4:06 IST
Last Updated 24 ಏಪ್ರಿಲ್ 2024, 4:06 IST
ಅಕ್ಷರ ಗಾತ್ರ

ಚಾಮರಾಜನಗರ: 26ರಂದು ನಡೆಯಲಿರುವ ಮತದಾನದಲ್ಲಿ ಮಹಿಳೆಯರು, ಅಂಗವಿಕಲರು, ಗಿರಿಜನರು, ಯುವಜನರು ಸೇರಿದಂತೆ ವಿವಿಧ ವರ್ಗಗಳ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದಕ್ಕಾಗಿ ಜಿಲ್ಲಾಡಳಿತ ವಿಶೇಷ ಮತಗಟ್ಟೆಗಳನ್ನು ತೆರೆದಿದೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿ ಸಿ.ಟಿ. ಶಿಲ್ಪಾ ನಾಗ್‌, ‘ಲಿಂಗ ಸಮಾನತೆ ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ‘ಸಖಿ ಸೌರಭ’ ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ. ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ಈ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 4 ಮತಗಟ್ಟೆಗಳಂತೆ 16 ಸಖಿ ಸೌರಭ ಮತಗಟ್ಟೆಗಳನ್ನು ತೆರೆಯಲಾಗಿದೆ’ ಎಂದರು. 

‘ಬುಡಕಟ್ಟು ಜನರನ್ನು ಮತದಾನಕ್ಕೆ ಪ್ರೇರೇಪಿಸಲು ಆದ್ಯತೆ ನೀಡಲಾಗಿದ್ದು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎರಡು ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಂಗವಿಕಲರಿಗೆ ಅನುಕೂಲವಾಗುವಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1 ರಂತೆ ನಾಲ್ಕು  ಅಂಗವಿಕಲರ ಮತಗಟ್ಟೆಗಳನ್ನು ತೆರೆಯಲಾಗಿದೆ. ಯುವ ಮತದಾರರನ್ನು ಮತದಾನದೆಡೆ ಸೆಳೆಯಲು ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ತಲಾ 2ರಂತೆ ಒಟ್ಟು 8 ಯುವ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ’ ಎಂದು ಹೇಳಿದರು. 

ಜಿಲ್ಲೆಯ ಸಾಂಸ್ಕೃತಿಕ, ಜಾನಪದ ಕಲೆಗಳ ಮಹತ್ವ ತಿಳಿಸಲು ಅನುಕೂಲವಾಗುವಂತೆ ಹನೂರು ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿದೆ. ರೈತರ ಮಹತ್ವವನ್ನು ಬಿಂಬಿಸುವ ಅನ್ನದಾತ ಮತಗಟ್ಟೆಗಳನ್ನು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2ರಂತೆ ಎಂಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅರಣ್ಯ ಮಹತ್ವ ತಿಳಿಸಲು ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1, ಕೊಳ್ಳೇಗಾಲ 1, ಚಾಮರಾಜನಗರ 2 ಹಾಗೂ ಗುಂಡ್ಲುಪೇಟೆ 2 ಸೇರಿದಂತೆ ಆರು ಹಸಿರು ಮತಗಟ್ಟೆಗಳನ್ನು ತೆರೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. 

ಸಿಬ್ಬಂದಿಗೆ ಬಸ್‌ ವ್ಯವಸ್ಥೆ: ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. 

ಬುಧವಾರ ಮಸ್ಟರಿಂಗ್‌ ಕೇಂದ್ರಗಳಿಗೆ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಲುಪಲು ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ 110 ಬಸ್‌ ವ್ಯವಸ್ಥೆ ಮಾಡಲಾಗಿದೆ. ಮಸ್ಟರಿಂಗ್‌ ಕೇಂದ್ರದಿಂದ ಮತಗಟ್ಟೆ ಅಧಿಕಾರಿಗಳನ್ನು ಮತಟ್ಟೆಗೆ ತಲುಪಿಸಲು 163 ಕೆಎಸ್‌ಆರ್‌ಟಿಸಿ ಬಸ್‌ ನಿಯೋಜಿಸಲಾಗಿದೆ ಎಂದು ಶಿಲ್ಪಾ ನಾಗ್‌ ಹೇಳಿದರು. 

ಜಿಲ್ಲೆಯಾದ್ಯಂತ‌ ಬಿಗಿ ಭದ್ರತೆ 

ಮತದಾನದ ದಿನ ಮತಗಟ್ಟೆಗಳಲ್ಲಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಳ್ಳಲಿದೆ. ಭದ್ರತೆಗಾಗಿ ಒಟ್ಟು 1667 ಮಂದಿ ಅಧಿಕಾರಿಗಳು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.   ಜಿಲ್ಲೆಯಲ್ಲಿರು 983 ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಾಲ್ವರು ಡಿವೈಎಸ್‌ಪಿ 13 ಇನ್‌ಸ್ಪೆಕ್ಟರ್‌ 41 ಪಿಎಸ್‌ಐ 67 ಮಂದಿ ಎಎಸ್‌ಐ 936 ಕಾನ್‌ಸ್ಟೆಬಲ್‌ಗು 600 ಮಂದಿ ಗೃಹ ರಕ್ಷಕರು ಆರು ಎಫ್‌ಜಿ ನಿಯೋಜಿಸಲಾಗಿದೆ. ಇದಲ್ಲದೇ ಗುಜರಾತ್‌ನ ವಿಶೇಷ ಸಶಸ್ತ್ರ ಪಡೆ ಜಿಲ್ಲೆಗೆ ಬಂದಿದೆ ಎಂದು ಶಿಲ್ಪಾ ನಾಗ್‌ ತಿಳಿಸಿದರು. 

ಮತದಾನ ಸೌಲಭ್ಯ ಕೇಂದ್ರ ಮುಂದುವರಿಕೆ

ಚುನಾವಣಾ ಆಯೋಗದ ನಿರ್ದೇಶನದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮತಗಟ್ಟೆಗಳಿಗೆ ನೇಮಕ ಮಾಡಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದ ಕೊಠಡಿ ಸಂಖ್ಯೆ 6 ರಲ್ಲಿ ತೆರೆಯಲಾಗಿರುವ ಮತದಾನ ಸೌಲಭ್ಯ ಕೇಂದ್ರದಲ್ಲಿ ಬುಧವಾರವೂ (ಏ.24) ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT