ಯಳಂದೂರು: ತಾಲ್ಲೂಕಿನಲ್ಲಿ ಸಂಜೆ ಅಷಾಢದ ಸೋನೆ ಮಳೆ ನಿರಂತವಾಗಿ ಸುರಿಯುತ್ತಿದೆ. ಇದರಿಂದ ರಸ್ತೆಯಲ್ಲಿ ಒಣಗಲು ಹಾಕಿದ್ದ ಮೆಕ್ಕೆಜೋಳವನ್ನು ರಕ್ಷಿಸುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ.

ಕಟಾವು ಮಾಡಿದ ಜೋಳವನ್ನು ರಸ್ತೆಗೆ ಸಾಗಿಸಿ, ತೇವಾಂಶ, ಗಾಳಿ ಮತ್ತು ನೀರಿನಿಂದ ಬೆಳೆ ಉಳಿಸಿಕೊಳ್ಳಲು ದಿನನಿತ್ಯ ಶ್ರಮಿಸುತ್ತಿದ್ದಾರೆ. ಮೆಕ್ಕೆ ಜೋಳಕ್ಕೆ ಬೆಲೆ ಮತ್ತು ಬೇಡಿಕೆ ಹೆಚ್ಚಿದೆ. ಆದರೆ, ಹವಾಮಾನ ವೈಪರೀತ್ಯದಿಂದ ಗುಣಮಟ್ಟದ ಕಾಳು ಉತ್ಪಾದನೆಗೆ ಹಿನ್ನಡೆಯಾಗಿದೆ.

ತಾಲ್ಲೂಕಿನಲ್ಲಿ ಮೆಕ್ಕೆಜೋಳ 2500 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಮೂರುವರೆ ತಿಂಗಳಿಗೆ ಕಟಾವಿಗೆ ಬರುವ ಹೈಬ್ರಿಡ್ ತಳಿಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಏಪ್ರಿಲ್ ಸಮಯದಲ್ಲಿ ಮಳೆ ಸುರಿದದ್ದರಿಂದ ಜುಲೈನಲ್ಲಿ ಉತ್ತಮ ಇಳುವರಿ ಬಂದಿದೆ. ಕೊಯ್ಲಾದ ಫಸಲನ್ನು ಒಣಗಿಸಲು ಈಗ ಬಿಸಿಲಿನ ಅಭಾವ ಎದುರಾಗಿದ್ದು, ಸೋನೆ ಮಳೆ ಹಾಗೂ ಶೀತದಿಂದ ಜೋಳ ರಕ್ಷಿಸಿಕೊಳ್ಳಲು ಕೃಷಿಕರು ಟಾರ್ಪಲ್ ಮೊರೆ ಹೋಗಿದ್ದಾರೆ.

‘ಮೆಕ್ಕೆಜೋಳ ಕ್ವಿಂಟಲ್ಗೆ ಬೆಲೆ ₹ 2 ಸಾವಿರದಿಂದ ₹ 2500ಕ್ಕೆ ಜಿಗಿದಿದೆ. ಮಧ್ಯವರ್ತಿಗಳು ಧಾರಣೆ ನಿರ್ಣಯಿಸುತ್ತಿದ್ದು, ಬೆಲೆ ಏರಿಳಿತಕ್ಕೆ ಕಾರಣವಾಗಿದೆ. ಮಳೆಗೂ ಮೊದಲು ಫಸಲನ್ನು ಮಾರಾಟ ಮಾಡಲು ರೈತರು ತರಾತುರಿಯಲ್ಲಿ ಕಟಾವು ಆರಂಭಿಸಿದ್ದಾರೆ. ಕೊಯ್ಲಾದ ತೆನೆಯನ್ನು ರಸ್ತೆಯಲ್ಲಿ ಸುರಿದು ಯಂತ್ರದಿಂದ ಬೀಜ ಬೇರ್ಪಡಿಸಿ, ಒಣಗಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ’ ಎಂದು ಶಿವಕಳ್ಳಿ ಗ್ರಾಮದ ಸಾಗುವಳಿದಾರ ಹರೀಶ್ ಹೇಳಿದರು.

‘ಪ್ರತಿ ಸಂಜೆ ತುಂತುರು ಮಳೆ ಕಾಣಿಸಿಕೊಳ್ಳುತ್ತಿದೆ. ಕಟಾವಾದ ಜೋಳವನ್ನು ರಕ್ಷಿಸಿಕೊಳ್ಳಲು ಕಣದ ಸಮಸ್ಯೆ ಎದುರಾಗಿದೆ. ಹಾಗಾಗಿ, ರಸ್ತೆ ಬದಿಯಲ್ಲಿ ಸುರಿದು ಕೊಯ್ಲೋತ್ತರ ಕೆಲಸಗಳಲ್ಲಿ ತೊಡಗಿದ್ದಾರೆ. ರಸ್ತೆಗೆ ಟಾರ್ಪಲ್ ಹಾಸಿ ಬಿಸಿಲಿಗೆ ಜೋಳ ಸುರಿದಿದ್ದಾರೆ. ಆಗಾಗ ಮಳೆ ಸುರಿಯುತ್ತಿದ್ದು, ಜೋಳಕ್ಕೆ ನೀರು ಸೇರದಂತೆ ನೋಡಿಕೊಳ್ಳಲು ಶ್ರಮಿಕರ ಕೊರತೆಯೂ ಎದುರಾಗಿದೆ. ಒಂದೊಮ್ಮೆ ಜೋಳ ಒದ್ದೆಯಾದರೆ , ಮೊಳಕೆಯೊಡೆಯುತ್ತದೆ. ಬೆಲೆ ಮತ್ತು ಬೇಡಿಕೆ ಕಳೆದುಕೊಳ್ಳುತ್ತದೆ ಎಂದು ಗೌಡಹಳ್ಳಿ ರೈತ ಮಹೇಶ್ ವಿವರಿಸಿದರು.

ಮಳೆ ನಿರೀಕ್ಷೆ: ಹೆಚ್ಚಿನ ಗಾಳಿಯೊಂದಿಗೆ ಹಗುರವಾದ ಮಳೆ ಮುಂದುವರಿಯುವ ಸಾಧ್ಯತೆ ಇದೆ. ರೈತರು ಭತ್ತ, ಬಿಳಿಜೋಳ ಮತ್ತು ಮೆಕ್ಕೆಜೋಳದ ಕೊಯ್ಲನ್ನು ಮುಂದೂಡಬೇಕು. ಇಲ್ಲವೇ ಫಸಲಿಗೆ ನೀರು ಸೇರದಂತೆ ರಕ್ಷಿಸಿಕೊಳ್ಳಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

‘ಉತ್ತಮ ಇಳುವರಿ’

‘ಈ ಬಾರಿ ಮೆಕ್ಕೆಜೋಳದ ಇಳುವರಿ ಹೆಚ್ಚಾಗಿದೆ. ಕೃಷಿಕರು 1 ಎಕರೆಗೆ 40 ಕ್ವಿಂಟಲ್ ಮೆಕ್ಕೆಜೋಳ ಬೆಳೆದಿದ್ದಾರೆ. ಕಳೆದ ವರ್ಷ 30 ಕ್ವಿಂಟಲ್ ಇಳುವರಿ ಸೀಮಿತವಾಗಿತ್ತು. ಹೊಸ ತಳಿಗಳ ಬಿತ್ತನೆಯಿಂದ ರೋಗದ ಹಾವಳಿ ಕಡಿಮೆಯಾಗಿತ್ತು. ಸೈನಿಕಹುಳ ಮತ್ತು ಬೂದಿರೋಗವನ್ನು ನಿಯಂತ್ರಿಸಲಾಗಿತ್ತು. ಈಗ ಬೆಲೆ ಗುಣಮಟ್ಟ ಆಧರಿಸಿ ಕ್ವಿಂಟಲ್ಗೆ ₹ 2500 ಮುಟ್ಟಿದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ. ವೆಂಕಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.