ಯಳಂದೂರು: ಮೈಸೂರು ದಸರಾದ ಆನೆಗಳ ಲಾಲಿತ್ಯದ ನಡಿಗೆಗೆ ನಾದಸ್ವರದ ಸಂಗೀತ ಸ್ವರವೂ ಸೇರಿ ಸಂಭ್ರಮ ಇಮ್ಮಡಿಯಾಗುತ್ತದೆ. ಅರಮನೆ ಬ್ಯಾಂಡ್ ವಾದನದ ಸದ್ದಿನ ನಡುವೆಯೂ ಹತ್ತಾರು ರಾಗಗಳು ಇನಿ ದನಿಯಲ್ಲಿ ನೆರೆದವರನ್ನು ಕಾಡುತ್ತವೆ. ಅಂತಹ ಶಾಸ್ತ್ರೀಯತೆಯ ಮಟ್ಟು ಬಿಡ್ಟುಕೊಡದೆ, ದೇಸೀಯತೆಯ ನೀನಾದ ಹೊಮ್ಮಿಸುವ ನಾದಸ್ವರವನ್ನು ಜತನದಿಂದ ನುಡಿಸುತ್ತ ಬಂದಿದ್ದಾರೆ ಅಪ್ಪಟ ಗ್ರಾಮೀಣ ಪ್ರತಿಭೆ ಮಲ್ಲಿಕಾರ್ಜುನಸ್ವಾಮಿ.
ವೈ.ಕೆ.ಮೋಳೆ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ಬಾಲ್ಯದಿಂದಲೇ ಜನಪದ ಹಾಡು ಹಾಗೂ ಸಂಗೀತಕ್ಕೆ ಮನಸೋತವರು. ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಶುಭ ಸಮಾರಂಭಗಳಲ್ಲಿ ಮೊಳಗುತ್ತಿದ್ದ ನಾದಸ್ವರಕ್ಕೆ ತಲೆದೂಗುತ್ತಲೇ ನುಡಿಸುವ ಆಸೆಗೆ ಬಿದ್ದು ಕಲಾವಿದರಾದರು.
ವಾದನದಿಂದ ಭಕ್ತರ ಹೃದಯ ಮುಟ್ಟುವ ಮಟ್ಟುಗಳ ರಾಗ ಆಲಾಪಗಳನ್ನು ಒಲಿಸಿಕೊಳ್ಳಲು ಊರು ಬಿಟ್ಟ ಮಲ್ಲಿಕಾರ್ಜುನ ಸ್ವಾಮಿ ಮಾರಿ ಹಬ್ಬ, ಉತ್ಸವ, ಮದುವೆ ಹಾಗೂ ದೇವತಾ ಕಾರ್ಯಗಳಲ್ಲಿ ಕಲಾ ಪ್ರದರ್ಶನ ನೀಡುತ್ತಿದ್ದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ನಾದಸ್ವರ ವಾದನ ಹೆಚ್ಚು ಬಳಕೆಯಲ್ಲಿದೆ. ಶ್ರೀಲಂಕಾದಲ್ಲೂ ಮಂಗಳವಾದ್ಯ ಮೊಳಗುತ್ತದೆ. ಶಾಸ್ತ್ರೀಯ ಸಂಗೀತದ ಮಹತ್ವ ಅರಿವಾದಂತೆ ವಾದನ ಕಲಿಯುವ ಆಸಕ್ತಿ ಬೆಳೆಯಿತು. ನಂತರ ಬದುಕಿನ ಬಂಡಿಗೂ ಮಂಗಳವಾದ್ಯದ ಸದ್ದೇ ಉಸಿರಾಯಿತು. ಚಿಕ್ಕಪ್ಪನ ಜೊತೆ ಕಲಿತ ಬಾಲ್ಯದ ರಾಗ ಲಹರಿಗೆ ಹತ್ತಾರು ವೇದಿಕೆ ಹತ್ತುವ ಅವಕಾಶ ದೊರೆತಿದೆ ಎನ್ನುತ್ತಾರೆ ಮಲ್ಲಿಕಾರ್ಜುನಸ್ವಾಮಿ.
ಸ್ಯಾಕ್ಸೋಪೋನ್ ಸವಾಲು: ದಸರಾದಲ್ಲಿ ಕೆಲವೊಮ್ಮೆ ವಿದೇಶಿ ಮೂಲದ ಸ್ಯಾಕ್ಸೋಪೋನ್ ಕಚೇರಿ ನಾದಸ್ವರ ವಾದನಕ್ಕೆ ಪೈಪೋಟಿ ನೀಡುತ್ತದೆ. ಪ್ರಸ್ತುತ ಮೊಬೈಲ್‌ನಲ್ಲಿ ಸಂಗೀತ ಕಲಿಕೆಯೂ ಹೆಚ್ಚಾಗಿ ನಡೆಯುತ್ತಿದೆ. ಇದರ ನಡುವೆಯೂ ನೆಲ ಮೂಲದ ಸಂಸ್ಕೃತಿ ಬಿಂಬಿಸುವ ನಾದಸ್ವರ ಉಸಿರು ಬಿಗಿ ಹಿಡಿದು ನುಡಿಸುವ ಗಟ್ಟಿ ವ್ಯಕ್ತಿತ್ವ ಬೇಡುತ್ತದೆ.
ದೇವರನಾಮ, ಜನಪ್ರಿಯ ಹಾಡು, ಜನಪದ ಮಟ್ಟುಗಳನ್ನು ಶ್ರತಿ, ತಾಳ, ಮಟ್ಟಿನೊಂದಿಗೆ ನುಡಿಸುವ ಚಾಕಚಕ್ಯತೆಯೂ ಸಂಗೀತಗಾರನಿಗೆ ಇರಬೇಕು. 7 ಜನರ ತಂಡ ಕಟ್ಟಿಕೊಂಡು, ಕೇಳುಗರ ಮನದಾಳದಂತೆ ಸ್ವರ ಹೊಮ್ಮಿಸಬೇಕು. ತಂದೆ ಪುಟ್ಟಮಲ್ಲಯ್ಯ, ತಾಯಿ ನಾಗಮ್ಮ, ಚಿಕ್ಕಪ್ಪ ಮಹದೇವಯ್ಯ ಅವರ ಮಾರ್ಗದರ್ಶನ ಈಗಲೂ ನನ್ನ ಸಂಗೀತ ನುಡಿಯಲ್ಲಿ ಇದೆ ಎಂದು 45 ವಯಸ್ಸಿನ ಮಲ್ಲಿಕಾರ್ಜುನಸ್ವಾಮಿ ಸ್ಮರಿಸುತ್ತಾರೆ.
ಅರಮನೆ ಮುಟ್ಟಿದ ನಾಗಸ್ವರ: ಶ್ರೀಶೈಲ ದೇವಸ್ಥಾನ, ಚಾಮರಾಜನಗರ ದಸರಾ ಮಹೋತ್ಸವ, ಮೈಸೂರು ಅರಮನೆ ಸಂಗೀತ ಕಚೇರಿ, ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಉತ್ಸವ ಹಾಗೂ ರಾಜ್ಯದ ಹೊರ ಭಾಗಗಳಲ್ಲೂ ಇವರ ನಾದಸ್ವರ ವಾದನ ಮೇಳೈಸಿದೆ. ಕಲಿಯುವುದು ಇನ್ನು ಉಳಿದಿದ್ದು, ಜಗತ್ತಿನ ಶ್ರೇಷ್ಠ ವಾದಕರಿಂದ ಒಂದೊಂದು ರಾಗ, ಲಯ, ಗಾಯನ ಕಲಿಯುವುದು ಬೆಟ್ಟದಷ್ಟಿದೆ ಎನ್ನುತ್ತಾರೆ ಅವರು.
ಹೇಗಿರಲಿದೆ ವಾದ್ಯ
ವಾದ್ಯವನ್ನು ಹಳೆಯ ಮರ ಗಂಧದ ವೃಕ್ಷಗಳಿಂದ ತಯಾರಿಸುತ್ತಾರೆ. ಮೇಲ್ಭಾಗ ಗಂಟೆ ಆಕಾರ ಹೊಂದಿದ್ದು ಕೆಳಭಾಗ ಕೊಳವೆಯಂತೆ ಇರುತ್ತದೆ. ಇದಕ್ಕೆ ಸಣ್ಣ ಪೀಪಿಯನ್ನು ಸಿಕ್ಕಿಸಲಾಗುತ್ತದೆ. ಮೇಲೆ ಏಳು ಮತ್ತು ಕೆಳಭಾಗದಲ್ಲಿ ಐದು ರಂಧ್ರಗಳಿದ್ದು ನುಡಿಸುವಾಗ ಬೆರಳುಗಳು ಈ ರಂಧ್ರವನ್ನು ಮುಚ್ಚಿ ಬೇಕಾದ ರಾಗಗಳನ್ನು ನುಡಿಸಬಹುದು. ಇದಕ್ಕೆ ಸಿದ್ಧಿಯೂ ಇರಬೇಕು. ಸಂಪ್ರದಾಯದ ಜಾಡನ್ನು ಬಿಡದಂತೆ ನುಡಿಸಬೇಕು ಎನ್ನುತ್ತಾರೆ ಪಿ.ಮಲ್ಲಿಕಾರ್ಜುನಸ್ವಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.