ಮಂಗಳವಾರ, ಮಾರ್ಚ್ 28, 2023
33 °C
ಮತಗಳನ್ನು ಮಾರದೆ, ಸಮಾಜ ರಕ್ಷಣೆ ಮಾಡುವವರನ್ನು ಆರಿಸಲು ಜಾಮದಾರ್‌ ಸಲಹೆ

ಹಲವು ಮಠ ಬಸವತತ್ವದಿಂದ ವಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ವಿರಕ್ತ ಮಠಗಳು ಇಲ್ಲದಿದ್ದರೆ ಬಸವ ಧರ್ಮ ಇಂದು ನಮಗೆ ನಿಮಗೆ ನೋಡುವುದು, ಉಳಿಯುವುದಕ್ಕೆ ಸಿಗುತ್ತಿರಲಿಲ್ಲ. ಆದರೆ, ಕಾಲಾಂತರದಲ್ಲಿ ಹಲವು ಮಠಗಳು ಮೂಲ ತತ್ವಗಳಿಂದ ವಿಮುಖವಾಗಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಎಂ.ಜಾಮದಾರ ಭಾನುವಾರ ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ‘ತೋಂಟದ ಸಿದ್ದಲಿಂಗೇಶ್ವರ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಠಗಳು 400 ವರ್ಷಗಳಲ್ಲಿ ಬಸವ ತತ್ವವನ್ನು ಉಳಿಸಿಕೊಂಡು ಬಂದಿವೆ. ಹಲವು ಮಠಗಳು ದಾಸೋಹ, ಕಾಯಕವನ್ನು ಮಾಡುತ್ತಾ ಬಂದಿವೆ. ಈಗಲೂ ಹಲವು ಮಠಗಳು ಮೂಲ ತತ್ವಕ್ಕೆ ಬದ್ಧರಾಗಿ ಧರ್ಮ ಪ್ರಚಾರ ಮಾಡುತ್ತಾ ಬಂದಿವೆ. ಅಂತಹ ಮಠಗಳಿಂದ ಧರ್ಮ ಉಳಿದಿದೆ’ ಎಂದರು. 

‘ಲಿಂಗಾಯತ ಧರ್ಮದ ವಿಚಾರದಲ್ಲಿ ಗೊಂದಲ ಸೃಷ್ಟಿಸಿದವರು ರಾಜಕಾರಣಿಗಳು. ನಮ್ಮ ಜಾಗತಿಕ ಲಿಂಗಾಯತ ಮಹಾಸಭೆಯು ರಾಜಕೀಯೇತರ ಸಂಘಟನೆ. ನಮಗೆ ಪಕ್ಷ ಇಲ್ಲ. ಕೆಲವು ಮುಖಂಡರು ಇದ್ದರು. ಅವರೀಗ ನಮ್ಮ ಜೊತೆ ಇಲ್ಲ. ರಾಜಕಾರಣಿಗಳಿಗೆ ಬೇಕಾಗಿರುವುದು ಧರ್ಮ, ಜಾತಿ ಅಥವಾ ನೀವಲ್ಲ. ನಿಮ್ಮ ಮತಗಳು ಮಾತ್ರ’ ಎಂದರು. 

‘ಸರ್ಕಾರ ಮಠಗಳಿಗೆ ದುಡ್ಡು ಕೊಟ್ಟಿದೆ. ಆದರೆ ನಿಮಗೆ ಏನು ಕೊಟ್ಟಿದೆ? ಅವರು ಜೇಬಿಂದ ಡುಡ್ಡು ಕೊಟ್ಟಿಲ್ಲ. ಸಮಾಜದ ದುಡ್ಡನ್ನೇ ಕೊಟ್ಟಿದ್ದಾರೆ. ನೀವು ಮತಹಾಕಿದ ಪಕ್ಷದವರೇ ಇದೇ ಹೋರಾಟವನ್ನು ವಿರೋಧಿಸಿದ್ದರು. ಎಲ್ಲ ಪಕ್ಷಗಳ ರಾಜಕಾರಣಿಗಳು ಒಂದೇ. ಅವರನ್ನು ನಂಬಿ ಬದುಕು ಹಾಳು ಮಾಡಿಕೊಳ್ಳಬೇಡಿ’ ಎಂದರು. 

‘ಮಠಗಳು ಸರ್ಕಾರದಿಂದ ದುಡ್ಡು ಪಡೆಯುತ್ತಿರುವುದು ನಿಜಕ್ಕೂ ದುರ್ದೈವ. ಮಠಗಳ ಅಸ್ತಿತ್ವ ಇರುವುದು ಸರ್ಕಾರದಿಂದ ಅಥವಾ ಅದು ಕೊಡುವ ಹಣದಿಂದಲ್ಲ. ಸಮಾಜದಿಂದ ಎಂಬುದನ್ನು ಮಠಾಧೀಶರು ಅರ್ಥಮಾಡಿಕೊಳ್ಳಬೇಕು. ಈಗ ರಾಜಕಾರಣಿಗಳು ಹೇಳಿದಂತೆ ಮಠಾಧೀಶರು ಕೇಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಬಸವ ಧರ್ಮ ಅಥವಾ ಲಿಂಗಾಯತ ಧರ್ಮ ಉಳಿಸಬೇಕಾದರೆ ನೀವು ದೇಹ ತ್ಯಾಗ ಮಾಡಬೇಕಿಲ್ಲ. ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಮತಗಳನ್ನು ಮಾರಾಟ ಮಾಡಬೇಡಿ. ಸಮಾಜವನ್ನು ಯಾರು ರಕ್ಷಣೆ ಮಾಡುತ್ತಾರೋ ಅವರಿಗೆ ಮತ ಹಾಕಿ’ ಎಂದು ಜಾಮದಾರ್‌ ಸಲಹೆ ನೀಡಿದರು. 

 ಲಿಂಗಾಯತ ಧರ್ಮ ಬೆಳೆದು ಬಂದ ಹಾದಿಯನ್ನು ವಿವರಿಸಿದ ಅವರು, ‘ಭಾರತದಲ್ಲಿ ಹುಟ್ಟಿದ ಧರ್ಮ ಎಂದರೆ ಅದು ಬೌದ್ಧ ಧರ್ಮ. 19 ದೇಶಗಳಲ್ಲಿ ಅದರ ಅನುಯಾಯಿಗಳಿದ್ದಾರೆ. ಬೌದ್ಧ ಧರ್ಮದ ರೀತಿಯಲ್ಲೇ ಬೆಳೆಯಬಹುದಾದ ಧರ್ಮ ದೇಶದಲ್ಲಿ ಇನ್ನೊಂದು ಇದ್ದರೆ ಅದು ಲಿಂಗಾಯತ ಧರ್ಮ’ ಎಂದರು. 

‘ಬೌದ್ಧ ಧರ್ಮದಲ್ಲಿ ಜಾತಿ ಇಲ್ಲ. ಅದೇ ರೀತಿ ಲಿಂಗಾಯತ ಧರ್ಮದಲ್ಲೂ ಜಾತಿ ಇರಬಾರದು. ಆದರೆ, ಹಲವು ಜಾತಿಗಳನ್ನು ಮಾಡಲಾಗಿದೆ. ಇದೇ ವಿಚಾರದಲ್ಲೇ ಗೊಂದಲಗಳಾಗುತ್ತಿದೆ. ರಾಜಕಾರಣಿಗಳು, ಮಠಾಧೀಶರು ಕೂಡ ಜಾತಿಗಳ ಬಗ್ಗೆ ಮಾತನಾಡುತ್ತಾರೆ. ಬಸವ ಧರ್ಮದ ಸಮಗ್ರ ತತ್ವಗಳು ವಚನ ಸಾಹಿತ್ಯದಲ್ಲೇ ಸ್ಪಷ್ಟವಾಗಿವೆ. ಹಲವು ಸ್ವಾಮೀಜಿಗಳಿಗೇ ಅದು ತಿಳಿದಿಲ್ಲ’ ಎಂದು ಜಾಮದಾರ್‌ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ‘ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಯಾವ ಪಕ್ಷ, ಜಾತಿ, ಧರ್ಮ, ಮಠ, ವ್ಯಕ್ತಿಯ ವಿರುದ್ಧ ಅಲ್ಲ. ಬಸವಣ್ಣನಿಂದ ರೂಪಿತಗೊಂಡ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಸಿಗಬೇಕು ಎಂಬುದಷ್ಟೇ ನಮ್ಮ ಉದ್ದೇಶ’ ಎಂದರು.

ಮಹಾಸಭಾದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ, ಮುಡಿಗುಂಡದ ವಿರಕ್ತಮಠದ ಅಧ್ಯಕ್ಷ ಶ್ರೀಕಂಠಸ್ವಾಮೀಜಿ, ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ಮಾತನಾಡಿದರು. 

ತಾಲ್ಲೂಕಿನ ಮೇಲಾಜಿಪುರದ ಶಿವಬಸವಸ್ವಾಮೀಜಿ, ಮಹಾಸಭಾದ ಕಾನೂನು ಸಲಹೆಗಾರ ಆರ್.ವಿರೂಪಾಕ್ಷ, ಕೋಶಾಧ್ಯಕ್ಷ ಎನ್‌.ಶಿವಪ್ರಸಾದ್‌, ಸಮಾಜ ಸೇವಕ ಪರಮೇಶ್ವರಪ್ಪ ಇತರರು ಇದ್ದರು.

ಧರ್ಮ ಬೆಳೆಯಲು ಸಂಘಟನೆ ಮುಖ್ಯ

‘ಜಗತ್ತಿನ ಅತ್ಯಂತ ದೊಡ್ಡ ಧರ್ಮವಾದ ಕ್ರಿಶ್ಚಿಯನ್‌ ಧರ್ಮವನ್ನು ಏಸುಕ್ರಿಸ್ತ ಸ್ಥಾಪಿಸಲಿಲ್ಲ. ಅವನ ಸಾವಿ‌ನ ನಂತರ ವಿಚಾರಧಾರೆಗಳು, ತತ್ವಗಳನ್ನು ಇಟ್ಟುಕೊಂಡು ಈ ಧರ್ಮ ರೂಪುಗೊಂಡಿತು. ಅದೇ ರೀತಿಯಲ್ಲಿ ಬಸವಣ್ಣ ಕೂಡ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿರಲಿಲ್ಲ. ಸಮಾಜದಲ್ಲಿರುವ ಅನಿಷ್ಠ ಪದ್ಧತಿಗಳ ವಿರೋಧಿ ನಿಲುವು, ಸಮ ಸಮಾಜ, ಸ್ತ್ರೀ ಸಮಾನತೆ ಮುಂತಾದ ಅವರ ವಿಚಾರಧಾರೆಗಳು ಮುಂದೆ ಧರ್ಮ ಜನ್ಮ ತಾಳುವಂತೆ ಮಾಡಿತು. ಬೌದ್ಧ ಧರ್ಮವನ್ನು ಸ್ಥಾಪಿಸಿದ ನಂತರ ಬುದ್ಧ 50 ವರ್ಷಗಳ ಕಾಲ ಬದುಕಿದ್ದ. ಈ ಸಮಯದಲ್ಲಿ ಆತ ಸಂಘಟನೆಗಳನ್ನು ಮಾಡಿದ್ದ. ಒಂದು ಧರ್ಮ ಬೆಳೆಯಲು ಸಂಘಟನೆ ಅತ್ಯಂತ ಮುಖ್ಯ’  ಎಂದು ಜಾಮದಾರ್‌ ಹೇಳಿದರು. 

‘ನಮ್ಮಲ್ಲಿ ಸಂಘಟನೆಗಳು ಎಲ್ಲವೂ ಇದೆ. ಆದರೆ, ಮನಸ್ಸು ಮಾಡುತ್ತಿಲ್ಲ.  ಎಲ್ಲರೂ ಒಟ್ಟಾಗಬೇಕು ಆಗ ಮಾತ್ರ ಧರ್ಮ ಬೆಳೆಯಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.